ಮುಂಬಯಿ: ಟೀಮ್ ಇಂಡಿಯಾದ ಮಾಜಿ ಆಟಗಾರ, ರಣಜಿ ಟ್ರೋಫಿ ವಿಜೇತ ಮುಂಬಯಿ ತಂಡದ ನಾಯಕ ಸುಧೀರ್ ನಾಯ್ಕ್ (78)(Sudhir Naik) ಬುಧವಾರ ಮುಂಬಯಿಯ ಆಸ್ಪತ್ರೆಯೊಂದರಲ್ಲಿ ನಿಧನ ಹೊಂದಿದ್ದಾರೆ. ಈ ವಿಚಾರವನ್ನು ಅವರ ಪುತ್ರಿ ಖಚಿತಪಡಿಸಿದ್ದಾರೆ. ಇತ್ತೀಚೆಗೆ ಸ್ನಾನಗೃಹದಲ್ಲಿ ಬಿದ್ದು ತಲೆಗೆ ಬಲವಾದ ಏಟಾದ ಕಾರಣ ಅವರು ಕೋಮಾಕ್ಕೆ ಜಾರಿದ್ದರು, ಇದಾದ ಬಳಿಕ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ನಿಧನ ಹೊಂದಿದ್ದಾರೆ ಎಂದು ಪುತ್ರಿ ಮಾಹಿತಿ ನೀಡಿದ್ದಾರೆ.
ಮಾಜಿ ಕ್ರಿಕೆಟಿಗ ಸುಧೀರ್ ನಾಯ್ಕ್ ಅವರ ನಿಧನಕ್ಕೆ ಹಲವು ಮಾಜಿ ಮತ್ತು ಹಾಲಿ ಕ್ರಿಕೆಟಿಗರು ಸಂತಾಪ ಸೂಚಿಸಿದ್ದಾರೆ. ಮುಂಬೈ ಕ್ರಿಕೆಟ್ ಅಸೋಸಿಯೇಷನ್ ಕೂಡ ಅಗಲಿದ ಮಾಜಿ ನಾಯಕನಿಗೆ ಸಂತಾಪ ಸೂಚಿಸಿದೆ. 1970-71ರ ರಣಜಿ ಟ್ರೋಫಿಯಲ್ಲಿ ತಂಡ ನಾಯಕರಾಗಿದ್ದ ಅವರು ಸುನೀಲ್ ಗವಾಸ್ಕರ್, ಅಜಿತ್ ವಾಡೇಕರ್, ದಿಲೀಪ್ ಸರ್ದೇಸಾಯಿ ಮತ್ತು ಅಶೋಕ್ ಮಂಕಡ್ ಅವರಂತಹ ದಿಗ್ಗಜ ಆಟಗಾರ ಅನುಪಸ್ಥಿಯಲ್ಲಿಯೂ ಅತ್ಯಮೋಘ ಪ್ರದರ್ಶನ ತೋರುವ ಮೂಲಕ ತಂಡವನ್ನು ಚಾಂಪಿಯನ್ ಪಟ್ಟ ಅಲಂಕರಿಸಿದ ಕೀರ್ತಿ ಇವರದ್ದಾಗಿದೆ.
ರಣಜಿ ಕ್ರಿಕೆಟ್ನಲ್ಲಿ ಉತ್ತಮ ಬ್ಯಾಟಿಂಗ್ ನಡೆಸುತ್ತಿದ್ದ ಅವರಿಗೆ 1974ರಲ್ಲಿ ಟೀಮ್ ಇಂಡಿಯಾದಲ್ಲಿ ಅವಕಾಶ ಸಿಕ್ಕಿತು. ಇಂಗ್ಲೆಂಡ್ ಪ್ರವಾಸದಲ್ಲಿ ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಅವರು ಭಾರತ ತಂಡಕ್ಕೆ ಪದಾರ್ಪಣೆ ಮಾಡಿದ್ದರು. ತಮ್ಮ ಚೊಚ್ಚಲ ಪಂದ್ಯದ ಎರಡನೇ ಇನಿಂಗ್ಸ್ನಲ್ಲಿ 77 ರನ್ ಬಾರಿಸಿ ಮಿಂಚಿದ್ದರು.
ಇದನ್ನೂ ಓದಿ IPL Sixer Record: ನಾಯಕರಾಗಿ ಐಪಿಎಲ್ ಟೂರ್ನಿಯಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಬ್ಯಾಟರ್ಗಳು
ಸುಧೀರ್ ನಾಯ್ಕ್ ಅವರು ತಮ್ಮ ಕ್ರಿಕೆಟ್ ವೃತ್ತಿಜೀವನದಲ್ಲಿ ಟೀಮ್ ಇಂಡಿಯಾ ಪರ ಮೂರು ಟೆಸ್ಟ್ , 2 ಏಕದಿನ ಹಾಗೂ 85 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದಾರೆ. ಟೆಸ್ಟ್ನಲ್ಲಿ 141, ಏಕದಿನದಲ್ಲಿ 38 ರನ್ ಗಳಿಸಿದ್ದಾರೆ. ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ 4376 ರನ್ ಬಾರಿಸಿದ್ದಾರೆ. ಜತೆಗೆ ಏಳು ಶತಕಗಳನ್ನು ಗಳಿಸಿದ್ದಾರೆ. ಒಂದು ದ್ವಿಶತಕವನ್ನೂ ದಾಖಲಿಸಿದ್ದಾರೆ. ಅವರು ಆರಂಭಿಕನಾಗಿ ಬ್ಯಾಟಿಂಗ್ ನಡೆಸುತ್ತಿದ್ದರು. ಮುಂಬೈ ಆಯ್ಕೆ ಸಮಿತಿಯ ಅಧ್ಯಕ್ಷರಾಗಿ ಮತ್ತು ವಾಂಖೆಡೆ ಸ್ಟೇಡಿಯಂನ ಕ್ಯುರೇಟರ್ ಆಗಿ ಕೆಲಸ ಮಾಡಿದ್ದಾರೆ.
ಬಡತನದಲ್ಲಿ ಅರಳಿದ ಕ್ರಿಕೆಟ್ ಪ್ರತಿಭೆ
ಸುಧೀರ್ ನಾಯ್ಕ್ ಅವರು ಬಡ ಕುಟುಂಬದಿಂದ ಬಂದ ಕ್ರಿಕೆಟಿಗನಾಗಿದ್ದಾರೆ. ಕ್ರಿಕೆಟ್ನಲ್ಲಿ ಅವರು ಎಷ್ಟು ಖ್ಯಾತಿ ಗಳಿಸಿದ್ದರೂ ಇದಕ್ಕೂ ಮುನ್ನ ಹಲವು ಕಷ್ಟಗಳನ್ನು ಎದುರಿಸಿದ್ದರು. 1970ರ ದಶಕದಲ್ಲಿ ಅವರ ವಿರುದ್ಧ ಕಳ್ಳತನದ ಆರೋಪವೂ ಕೇಳಿಬಂದಿತ್ತು. ಲಂಡನ್ ಡಿಪಾರ್ಟಮೆಂಟಲ್ ಸ್ಟೋರ್‌ನಿಂದ ಎರಡು ಜತೆ ಸಾಕ್ಸ್‌ಗಳನ್ನು ಕದ್ದಿದ್ದಕ್ಕಾಗಿ ಅವರ ವಿರುದ್ಧ ದೂರು ದಾಖಲಾಗಿತ್ತು. ಆದರೆ ಆ ವೇಳೆ ಸುನೀಲ್ ಗವಾಸ್ಕರ್ ಅವರು ನಾಯ್ಕ್ ಅವರನ್ನು ಬೆಂಬಲಿಸಿದ್ದರು.
ಕ್ರಿಕೆಟಿಗ ಜಹೀರ್ ಖಾನ್ ಅವರ ಕ್ರಿಕೆಟ್ ಸಾಧನೆಯಲ್ಲಿ ಸುಧೀರ್ ಅವರ ಪಾತ್ರ ಬಹುಮುಖ್ಯವಾಗಿತ್ತು. ಇವರ ಗರಡಿಯಲ್ಲಿಯೇ ಪಳಗಿದ ಜಹೀರ್ ಟೀಮ್ ಇಂಡಿಯಾ ಕಂಡ ಶ್ರೇಷ್ಠ ಬೌಲರ್ಗಳಲ್ಲಿ ಒಬ್ಬರಾಗಿದ್ದಾರೆ. ತನ್ನ ಗುರುವಿನ ನಿಧನಕ್ಕೆ ಜಹೀರ್ ಖಾನ್ ಕೂಡ ಸಂತಾಪ ಸೂಚಿಸಿದ್ದಾರೆ.