ಕತಾರ್: ಭಾರತ ಬಹು-ದೂರದ ಓಟಗಾರ್ತಿ, ಮೂರು ಗಿನ್ನೆಸ್ ದಾಖಲೆಗಳನ್ನು ಬರೆದಿರುವ ಸೂಫಿಯಾ ಸೂಫಿ (Sufiya Sufi) ಮತ್ತೊಂದು ಗಿನ್ನೆಸ್ ದಾಖಲೆಯೊಂದನ್ನು ಬರೆದಿದ್ದಾರೆ. ಇದರೊಂದಿಗೆ ಒಟ್ಟು ನಾಲ್ಕು ಗಿನ್ನೆಸ್ ದಾಖಲೆ ಬರೆದ ಹಿರಿಮೆಗೆ ಪಾತ್ರರಾಗಿದ್ದಾರೆ.
ಕತಾರ್ನಲ್ಲಿ ನಡೆದ ಓಟದ ಸ್ಪರ್ಧೆಯಲ್ಲಿ ಸೂಫಿ ಅವರು 200 ಕಿ. ಮೀ.ಗೂ ಅಧಿಕ ದೂರವನ್ನು 30 ಗಂಟೆ 34 ನಿಮಿಷಗಳಲ್ಲಿ ಕ್ರಮಿಸುವ ಮೂಲಕ ತಮ್ಮ 4ನೇ ಗಿನ್ನೆಸ್ ದಾಖಲೆಯನ್ನು (Guiness World Record) ಬರೆದಿದ್ದಾರೆ. ಈ ಓಟದ ವೇಳೆ ಅವರು ಮೂರು ಬಾರಿ ಹೊಟ್ಟೆ ನೋವಿನ ಸಮಸ್ಯೆಗೆ ತುತ್ತಾಗಿದ್ದರು. ಆದರೂ ಛಲ ಬಿಡದ ಅವರು ಗುರಿ ತಲುಪಿ ಇತಿಹಾಸ ನಿರ್ಮಿಸುವಲ್ಲಿ ಯಶಸ್ಸು ಕಂಡಿದ್ದಾರೆ.
ಕಳೆದ ಜನವರಿಯಲ್ಲಿ ಅಬು ಸಮ್ರಾದಿಂದ ಆರಂಭವಾದ ಈ ಓಟ ದೋಹಾ ಮೂಲಕ ಹಾದು ಅಲ್ ರುಯೆಜ್‌ನಲ್ಲಿ ಕೊನೆಗೊಂಡಿತು. ಭಾರತದಲ್ಲಿ ಅಲ್ಟ್ರಾ ರೇಸ್ನಲ್ಲಿ ಈಗಾಗಲೇ ಹಲವಾರು ದಾಖಲೆಗಳನ್ನು ಬರೆದಿರುವ ರಾಜಸ್ಥಾನ ಮೂಲದ ಸೂಫಿಯಾ ಸೂಫಿ ಅವರು ಓಟಗಾರ್ತಿಯಾಗುವ ಮೊದಲು ಏರ್‌ಲೈನ್ ಸಂಸ್ಥೆಯಲ್ಲಿ ಉದ್ಯೋಗಿಯಾಗಿದ್ದರು.
ಇದನ್ನೂ ಓದಿ Women’s T20 World Cup: ಕಣ್ಣೀರಿಟ್ಟ ಹಾಲಿ ನಾಯಕಿಯನ್ನು ಸಂತೈಸಿದ ಮಾಜಿ ನಾಯಕಿ
ಏರ್‌ಲೈನ್ ಉದ್ಯೋಗ ತೊರೆದ ಸೂಫಿಯಾ ಸೂಫಿ
ಓಟದಲ್ಲಿ ಏನಾದರೂ ಸಾಧನೆ ಮಾಡುವ ಬಯಕೆಯಿಂದ ಅವರು 2018 ರಲ್ಲಿ ಏರ್‌ಲೈನ್ ಉದ್ಯೋಗವನ್ನು ತೊರೆದರು. ಕಳೆದ ವರ್ಷ ಸಿಯಾಚಿನ್ನಿಂದ ಓಟ ಆರಂಭಿಸಿ, ಕಾರ್ಗಿಲ್ ಯುದ್ಧ ಸ್ಮಾರಕದವರೆಗೂ ಕ್ರಮಿಸುವುದರೊಂದಿಗೆ ಭಾರತೀಯ ಸೇನಾ ಯೋಧರು ಮತ್ತು ಹುತಾತ್ಮರಿಗೆ ಗೌರವ ಸಲ್ಲಿಸಿದ್ದರು. ಈ ಹಿಂದೆ ಅವರು ದೆಹಲಿ, ಕೋಲ್ಕೊತಾ, ಮುಂಬೈ ಮತ್ತು ಚೆನ್ನೈಯ ಗೋಲ್ಡನ್ ಚತುರ್ಭುಜ ರಸ್ತೆಯಲ್ಲಿ 6,002 ಕಿ.ಮೀ ದೂರ ಓಡುವ ಮೂಲಕ ಗಿನ್ನೆಸ್ ದಾಖಲೆ ಬರೆದಿದ್ದರು.