ಕೋಲ್ಕೊತಾ: ಭಾರತದ ಖ್ಯಾತ ಫುಟ್ಬಾಲ್ ಆಟಗಾರ ಸುನೀಲ್ ಚೆಟ್ರಿ(Sunil Chhetri) ಅವರು ಈ ಬಾರಿಯ ಏಷ್ಯಾ ಕಪ್ ಬಳಿಕ ಅಂತಾರಾಷ್ಟ್ರೀಯ ಫುಟ್ಬಾಲ್ಗೆ ವಿದಾಯ ಹೇಳುವುದು ಬಹುತೇಕ ಖಚಿತ ಎಂದು ಕೋಚ್ ಐಗರ್ ಸ್ಟಿಮ್ಯಾಕ್(Igor Stimac) ಅಭಿಪ್ರಾಯಪಟ್ಟಿದ್ದಾರೆ.
ಭಾರತದ ಫುಟ್ಬಾಲ್ ತಂಡ ಕೋಲ್ಕೊತಾದಲ್ಲಿ ಆರಂಭಗೊಂಡ 5 ದಿನಗಳ ರಾಷ್ಟ್ರೀಯ ಶಿಬಿರಲ್ಲಿ ಪಾಲ್ಗೊಂಡಿದೆ. ಇದೇ ವೇಳೆ ಮಾತನಾಡಿದ ಕೋಚ್ ಐಗರ್ ಸ್ಟಿಮ್ಯಾಕ್, “ಸುನೀಲ್ ಚೆಟ್ರಿ ಅವರಿಗೆ ಈಗ 38 ವಯಸ್ಸಾಗಿದೆ. ಇದು ಅವರಿಗೂ ಅರಿವಿಗೆ ಬಂದಿದೆ. ಇಷ್ಟು ವಯಸ್ಸಿನಲ್ಲಿ ಅವರಿಗೆ 90 ನಿಮಿಷಗಳ ಆಟ ಆಡಲು ದೇಹ ಸ್ಪಂದಿಸುವುದು ಕೂಡ ಕಷ್ಟಕರ. ಅವರು ಭಾರತ ಕಂಡ ಶ್ರೇಷ್ಠ ಫುಟ್ಬಾಲ್ ಆಟಗಾರರಲ್ಲಿ ಒಬ್ಬರಾಗಿದ್ದಾರೆ. ನನ್ನ ಪ್ರಕಾರ ಈ ಬಾರಿ ಏಷ್ಯಾ ಕಪ್ ಅವರ ವಿದಾಯದ ಋತು ಆಗಿರುವ ಸಾಧ್ಯತೆಯೇ ಹೆಚ್ಚು ಎಂಬುದಾಗಿ ಸ್ಟಿಮ್ಯಾಕ್ ಹೇಳಿದ್ದಾರೆ.
38 ವರ್ಷದ ಸುನೀಲ್ ಚೆಟ್ರಿ ತಮ್ಮ 3ನೇ ಏಷ್ಯಾ ಕಪ್ ಪಂದ್ಯಾವಳಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ವಿಶ್ವ ರ್‍ಯಾಂಕಿಂಗ್‌ನಲ್ಲಿ 106ನೇ ಸ್ಥಾನದಲ್ಲಿರುವ ಭಾರತ ಸೆಪ್ಟಂಬರ್ ಬಳಿಕ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಲಿದೆ. ಎದುರಾಳಿ ತಂಡಗಳೆಂದರೆ ಕಿರ್ಗಿ ರಿಪಬ್ಲಿಕ್ ಮತ್ತು ಮ್ಯಾನ್ಮಾರ್. ಈ ಪಂದ್ಯಗಳು ಇಂಫಾಲಾದಲ್ಲಿ ನಡೆಯಲಿವೆ.
ಇದನ್ನೂ ಓದಿ Indian Super League: ಅಶಿಸ್ತು ತೋರಿದ ಕೇರಳ ಬ್ಲಾಸ್ಟರ್ಸ್ ತಂಡಕ್ಕೆ ನಿಷೇಧ ಭೀತಿ!
2005ರಲ್ಲಿ ಅಂತಾರಾಷ್ಟ್ರೀಯ ಫುಟ್ಬಾಲ್ಗೆ ಪದಾರ್ಪಣೆ ಮಾಡಿದ ಸುನೀಲ್ ಚೆಟ್ರಿ 84 ಗೋಲು ದಾಖಲಿಸಿ ಅತ್ಯಧಿಕ ಗೋಲು ಬಾರಿಸಿದ ಆಟಗಾರರ ಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದ್ದಾರೆ. ಕ್ರಿಸ್ಟಿಯಾನೊ ರೊನಾಲ್ಡೊ (118 ಗೋಲು), ಲಿಯೋನೆಲ್ ಮೆಸ್ಸಿ (98 ಗೋಲು) ಮೊದಲೆರಡು ಸ್ಥಾನದಲ್ಲಿದ್ದಾರೆ.