ಬೆಂಗಳೂರು: ಭಾರತ ಕಂಡ ಶ್ರೇಷ್ಠ ಫುಟ್ಬಾಲ್(Indian football icon) ಆಟಗಾರ ಸುನೀಲ್ ಚೆಟ್ರಿ(Sunil Chhetri) ಅವರು ತಮ್ಮ ಅಂತಾರಾಷ್ಟ್ರೀಯ ಫುಟ್ಬಾಲ್ ವೃತ್ತಿ ಜೀವನಕ್ಕೆ ತೆರೆ ಎಳೆಯಲು ನಿರ್ಧರಿಸಿದ್ದಾರೆ. ಜೂನ್ 6 ರಂದು ಕುವೈತ್(Kuwait) ವಿರುದ್ಧದ ಫಿಫಾ ವಿಶ್ವಕಪ್ ಅರ್ಹತಾ(FIFA World Cup 2026 qualifier) ಪಂದ್ಯ ಅವರಿಗೆ ಕೊನೆಯ ಪಂದ್ಯವಾಗಿರಲಿದೆ. ಚೆಟ್ರಿ ತಮ್ಮ ನಿವೃತ್ತಿಯನ್ನು ಘೋಷಿಸುತ್ತಿದ್ದಂತೆ, ಅನೇಕ ಭಾರತೀಯ ದಿಗ್ಗಜ ಕ್ರೀಡಾಪಟುಗಳು ಚೆಟ್ರಿಗೆ ಹಾರೈಸಿದ್ದಾರೆ ಜತೆಗೆ ಅವರ ಸಾಧನೆಯನ್ನು ಕೊಂಡಾಡಿದ್ದಾರೆ. ಚೆಟ್ರಿ ಅವರ ಆಪ್ತ ಗೆಳೆಯ ಟೀಮ್ ಇಂಡಿಯಾದ ಕ್ರಿಕೆಟಿಗ ವಿರಾಟ್ ಕೊಹ್ಲಿ(virat kohli) ನಿಮ್ಮ ಬಗ್ಗೆ ಹೆಮ್ಮೆಯಿದೆ, ಮೈ ಬದ್ರರ್ ಎಂದು ಕಮೆಂಟ್ ಮಾಡಿದ್ದಾರೆ.
ವಿರಾಟ್ ಕೊಹ್ಲಿ ಹಾಗೂ ಸುನಿಲ್ ಚೆಟ್ರಿ ಉತ್ತಮ ಸ್ನೇಹಿತರು. ಈ ಹಿಂದೆ ಹಲವು ಬಾರಿ ಜತೆಯಾಗಿ ಕಾಣಿಸಿಕೊಂಡಿದ್ದರು. ಚೆಟ್ರಿ ಇಂಡಿಯನ್ ಸೂಪರ್ ಲೀಗ್ನಲ್ಲಿ ಬೆಂಗಳೂರು ತಂಡದ ಪರ ಆಡುತ್ತಿದ್ದು, ವಿರಾಟ್ ಕೊಹ್ಲಿ ಆರ್ಸಿಬಿ ಪರ ಆಡುತ್ತಿದ್ದಾರೆ. ಹಲವು ಬಾರಿ ಚೆಟ್ರಿ ಆರ್ಸಿಬಿ ಕ್ಯಾಂಪ್ನಲ್ಲಿಯೂ ಕಾಣಿಸಿಕೊಂಡಿದ್ದಾರೆ. ಹೀಗಾಗಿ ಆರ್ಸಿಬಿ ಕೂಡ ಚೆಟ್ರಿಗೆ ಶುಭ ಹಾರೈಸಿದೆ. ವಿರಾಟ್ ಕೊಹ್ಲಿ ಹಿಂದೊಮ್ಮೆ ಸಂದರ್ಶನವೊಂದರಲ್ಲಿ ತಮ್ಮ ಫಿಟ್ನೆಸ್ಗೆ ಸುನಿಲ್ ಚೆಟ್ರಿಯೇ ನಿಜವಾದ ಸ್ಫೂರ್ತಿ ಎಂದು ಹೇಳಿದ್ದರು.
ಸೈನಿಕನ ಮಗ
1984 ಆಗಸ್ಟ್ 3ರಂದು ಸಿಕಂದರಾಬಾದನಲ್ಲಿ ಹುಟ್ಟಿದ ಸುನೀಲ್ ತಂದೆ ಒಬ್ಬ ಸೈನಿಕ ಆಗಿದ್ದರು ಮತ್ತು ಭಾರತದ ಆರ್ಮಿ ಫುಟ್ಬಾಲ್ ಟೀಮ್‌ನಲ್ಲಿ ಆಡಿದ್ದರು. ಅದರಿಂದಾಗಿ ಫುಟ್ಬಾಲ್ ಆಸಕ್ತಿ ಹುಡುಗನಿಗೆ ರಕ್ತದಲ್ಲಿಯೇ ಬಂದಿತ್ತು ಎನ್ನಬಹುದು. ತನ್ನ 18ನೆಯ ವರ್ಷದಲ್ಲಿ ವೃತ್ತಿಪರ ಫುಟ್ಬಾಲ್ ಆಟಗಾರನಾಗಿ ಆಡಲು ಆರಂಭ ಮಾಡಿದ್ದ ಸುನೀಲ್ ಹೆಚ್ಚು ಕಡಿಮೆ ಭಾರತದ ಎಲ್ಲ ಕ್ಲಬ್ಬುಗಳ ಪರವಾಗಿ ಆಡಿದ್ದಾರೆ. ಮೋಹನ್ ಬಗಾನ್, ಜೆಸಿಟಿ, ಬಂಗಾಳ ತಂಡಗಳ ಆಟಗಾರನಾಗಿ ಮಿಂಚು ಹರಿಸಿದ್ದಾರೆ. 2015ರಿಂದ ಇಂದಿನವರೆಗೆ ಬೆಂಗಳೂರು ತಂಡದ ಪರವಾಗಿ ಆಡುತ್ತ ಬಂದಿದ್ದಾರೆ. ಭಾರತದಲ್ಲಿ ಅತೀ ಹೆಚ್ಚು ಸಂಭಾವನೆ ಪಡೆಯುವ ಫುಟ್ಬಾಲ್ ಆಟಗಾರ ಎಂದರೆ ಅದು ಸುನೀಲ್ ಅನ್ನೋದು ನಿಜಕ್ಕೂ ಗ್ರೇಟ್.
ಒಬ್ಬ ಕ್ರೀಡಾಪಟುವಿಗೆ ದೊರೆಯುವ ಅತ್ಯುನ್ನತ ಪ್ರಶಸ್ತಿ ಖೇಲ್ ರತ್ನ ಪ್ರಶಸ್ತಿ, ಭಾರತ ಸರಕಾರ ಕೊಡಮಾಡುವ ಪದ್ಮಶ್ರೀ, 2011ರ ಅರ್ಜುನ ಪ್ರಶಸ್ತಿ ಅವರಿಗೆ ಈಗಾಗಲೇ ದೊರೆತಿವೆ. ಭಾಗವಹಿಸಿದ ಎಲ್ಲ ಜಾಗತಿಕ ಕೂಟಗಳಲ್ಲಿ ಒಂದಲ್ಲ ಒಂದು ಪ್ರಶಸ್ತಿ ಗೆಲ್ಲದೇ ಸುನೀಲ್ ಹಿಂದೆ ಬಂದ ಒಂದು ಉದಾಹರಣೆ ಕೂಡ ದೊರೆಯುವುದಿಲ್ಲ. ಸುನೀಲ್ ಕಾರಣಕ್ಕೆ ಭಾರತದಲ್ಲಿ ಫುಟ್ಬಾಲ್ ಆಕರ್ಷಣೆ ಹೆಚ್ಚಿತು ಮತ್ತು ಹೆಚ್ಚು ಯುವಜನತೆ ಫುಟ್ಬಾಲ್ ಆಡಲು ಸುರು ಮಾಡಿದರು ಅನ್ನುವ ಮಾತಿನಲ್ಲಿ ಉತ್ಪ್ರೇಕ್ಷೆ ಇಲ್ಲ! ನಿವೃತ್ತಿ ಘೋಷಿಸಿರುವ ಸುನೀಲ್ ಚೆಟ್ರಿ ಭಾರತೀಯ ಫುಟ್ಬಾಲ್ ಲೋಕದ ಲೆಜೆಂಡ್ ಆಟಗಾರ ಎಂದು ನೀವು ಖಂಡಿತವಾಗಿಯೂ ಒಪ್ಪುತ್ತೀರಿ. ಅಲ್ಲವೇ?
ಇದನ್ನೂ ಓದಿ IPL 2024 Points Table: ಪಂಜಾಬ್ಗೆ ಗೆಲುವು; ಅಂಕಪಟ್ಟಿಯಲ್ಲಿ ಪಾತಾಳಕ್ಕೆ ಕುಸಿದ ಮುಂಬೈ
2005ರಲ್ಲಿ ಅಂತಾರಾಷ್ಟ್ರೀಯ ಫುಟ್ಬಾಲ್ಗೆ ಪದಾರ್ಪಣೆ ಮಾಡಿದ ಸುನೀಲ್ ಚೆಟ್ರಿ 93 ಗೋಲು ದಾಖಲಿಸಿ ಅತ್ಯಧಿಕ ಗೋಲು ಬಾರಿಸಿದ ಆಟಗಾರರ ಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದ್ದಾರೆ. ಕ್ರಿಸ್ಟಿಯಾನೊ ರೊನಾಲ್ಡೊ, ಲಿಯೋನೆಲ್ ಮೆಸ್ಸಿ ಕ್ರಮವಾಗಿ ಮೊದಲೆರಡು ಸ್ಥಾನದಲ್ಲಿದ್ದಾರೆ. ಜೂನ್ 12, 2005 ರಂದು ಕ್ವೆಟ್ಟಾದಲ್ಲಿ ಪಾಕಿಸ್ತಾನದ ವಿರುದ್ಧದ ಸೌಹಾರ್ದ ಪಂದ್ಯದಲ್ಲಿ ಚೆಟ್ರಿ ಮೊದಲ ಬಾರಿಗೆ ಹಿರಿಯ ರಾಷ್ಟ್ರೀಯ ತಂಡದ ಜರ್ಸಿಯನ್ನು ತೊಟ್ಟಿದ್ದರು. ಆ ಪಂದ್ಯ 1-1 ಡ್ರಾದಲ್ಲಿ ಅತ್ಯಂಕಡಿತ್ತು. ಭಾರತದ ಈ ಒಂದು ಗೋಲ್ ಬಾರಿಸಿದ್ದು ಚೆಟ್ರಿ. ಅಂದಿನಿಂದ, ಅವರು ಇದುವರೆಗೂ ರಾಷ್ಟ್ರೀಯ ತಂಡದ ಪರ ಹಲವು ಸಾಧನೆ ಮಾಡಿದ್ದಾರೆ.