Site icon Vistara News

Sunil Gavaskar Birthday: 60 ಓವರ್‌ ಆಡಿ 36 ರನ್‌ ಗಳಿಸಿದ್ದ ಗವಾಸ್ಕರ್‌, 88 ಚೆಂಡಿನಲ್ಲಿ ಸೆಂಚುರಿ ಬಾರಿಸಿದರು!

Sunil Gavaskar Birthday

ನಿರಂತರವಾಗಿ ವಿಕಸನಗೊಳ್ಳುತ್ತಿರುವ (Sunil Gavaskar Birthday) ಜಗತ್ತಿನಲ್ಲಿ ಸ್ಥಿರವಾಗಿ ನಿಲ್ಲುವುದು, ತಮ್ಮನ್ನು ತಾವು ಪ್ರಸ್ತುತ ಪಡಿಸಿಕೊಳ್ಳುವುದು ಎಲ್ಲರಿಗೂ ಸಾಧ್ಯವಾಗುವುದಿಲ್ಲ. ಆದರೆ ಸುನೀಲ್ ಗವಾಸ್ಕರ್ (Sunil Gavaskar) ಅವರು ತಮ್ಮ ಜೀವನದಲ್ಲಿ 75 ವರ್ಷಗಳನ್ನು ಪೂರ್ಣಗೊಳಿಸಿದ ಅನಂತರವೂ ಯುವ ಮನಕ್ಕೆ ಹತ್ತಿರವಾಗಿಯೇ ಉಳಿದಿದ್ದಾರೆ.

ಲೆಜೆಂಡರಿ ಆಟಗಾರನಾಗಿ, ವೀಕ್ಷಕ ವಿವರಣೆಗಾರನಾಗಿ, ಅತ್ಯುತ್ತಮ ಬರಹಗಾರನಾಗಿ, ನಟನಾಗಿ, ಜಾಹೀರಾತು ಮಾಡೆಲ್‌ ಆಗಿ ಸೈ ಎನಿಸಿಕೊಂಡಿರುವ ಸುನೀಲ್ ಗವಾಸ್ಕರ್ ಭಾರತೀಯ ಕ್ರಿಕೆಟ್‌ನಲ್ಲಿ ಉನ್ನತ ಮತ್ತು ಬಹು ಆಯಾಮದ ವ್ಯಕ್ತಿಯಾಗಿ ಗುರುತಿಸಿಕೊಂಡಿದ್ದಾರೆ. ಕ್ರಿಕೆಟ್‌ನ (cricket) ನೀಲ್ ಆರ್ಮ್‌ಸ್ಟ್ರಾಂಗ್ (Neil Armstrong) ಎಂದೇ ಕರೆಯಲ್ಪಡುತ್ತಿದ್ದ ಅವರು 10,000 ಟೆಸ್ಟ್ ರನ್‌ಗಳು ಮತ್ತು 30 ಟೆಸ್ಟ್ ಶತಕಗಳನ್ನು ಗಳಿಸಿದ ಮೊದಲ ಕ್ರಿಕೆಟಿಗರಾಗಿದ್ದರೆ. ಅವರ ಅಪರೂಪದ ಬೌಲಿಂಗ್ ದಾಳಿಗೆ ಕ್ರಿಕೆಟ್ ದಿಗ್ಗಜರು ಕಕ್ಕಾಬಿಕ್ಕಿಯಾಗುತ್ತಿದ್ದರು!

ಸುನೀಲ್ ಗವಾಸ್ಕರ್ ಅವರು ಕ್ರಿಕೆಟ್‌ ಸೇರಿದಂತೆ ಇನ್ನೂ ಹಲವಾರು ಕ್ಷೇತ್ರಗಳಲ್ಲಿ ಗುರುತಿಸಿಕೊಂಡಿದ್ದಾರೆ. ಅವರ ಬಹುಮುಖಿ ಮತ್ತು ಆಸಕ್ತಿದಾಯಕ ವಿಷಯಗಳು ಹಲವಾರು. 1970 ಮತ್ತು 1980ರ ದಶಕದಲ್ಲಿ ಬೆಳೆದ ಅವರು ಭಾರತೀಯ ಕ್ರೀಡಾ ಪ್ರೇಮಿಗಳ ಹೃದಯದಲ್ಲಿ ಅಚ್ಚಳಿಯದ ಮುದ್ರೆಯನ್ನು ಒತ್ತಿದ್ದಾರೆ. ಇವತ್ತು ಐಪಿಎಲ್ ದೊಡ್ಡ ಮಟ್ಟದಲ್ಲಿ ಸುದ್ದಿ ಮಾಡುತ್ತಿದೆ. ಇದನ್ನು ನೋಡುತ್ತಾ ಬೆಳೆದಿರುವ ಇಂದಿನ ಯುವ ಕ್ರಿಕೆಟ್ ಅಭಿಮಾನಿಗಳು ಗವಾಸ್ಕರ್ ಅವರ ಮಹತ್ವವನ್ನು ಅರ್ಥಮಾಡಿಕೊಳ್ಳುವುದು ಕಷ್ಟ. ಯಾಕೆಂದರೆ ಅವರು ಈಗ ಮಾಜಿ ಕ್ರಿಕೆಟಿಗರಾಗಿ ಅಲ್ಲ ಕಾಮೆಂಟೇಟರ್ ಆಗಿಯೇ ಗುರುತಿಸಿಕೊಂಡಿದ್ದಾರೆ.

1971ರ ಮೊದಲ ಸರಣಿಯಲ್ಲೇ ಗವಾಸ್ಕರ್ ಬಲಿಷ್ಠ ವೆಸ್ಟ್ ಇಂಡೀಸ್‌ ವಿರುದ್ಧ ಉತ್ತಮ ಪ್ರದರ್ಶನ ನೀಡಿದರು. ಆ ಸರಣಿಯಲ್ಲಿ 774 ರನ್ ಗಳಿಸಿದ ಗವಾಸ್ಕರ್ ಭಾರತವು ವೆಸ್ಟ್ ಇಂಡೀಸ್ ವಿರುದ್ಧ 1-0 ಅಂತರದಿಂದ ಐತಿಹಾಸಿಕ ಜಯ ಗಳಿಸಲು ಸಹಾಯ ಮಾಡಿದರು ಎಂಬುದನ್ನು ಯಾರೂ ಮರೆಯಲು ಸಾಧ್ಯವಿಲ್ಲ. ಗವಾಸ್ಕರ್‌ ಅತ್ಯಂತ ನಿಧಾನವಾಗಿ ಬ್ಯಾಟಿಂಗ್‌ ಮಾಡುತ್ತಾರೆ ಎನ್ನುವುದು ಜನಜನಿತ. ಆದರೆ ಗವಾಸ್ಕರ್ ಅವರ 103 ರನ್ ಅವರ ಏಕೈಕ ಏಕದಿನ ಶತಕ. 1987ರ ವಿಶ್ವಕಪ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ಕೇವಲ 88 ಎಸೆತಗಳಲ್ಲಿ ಅವರ ಶತಕ ಬಂದಿರುವುದು ಭಾರತೀಯ ಕ್ರಿಕೆಟ್ ರಂಗದ ಬಹುದೊಡ್ಡ ಮೈಲುಗಲ್ಲು. ಈ ಶತಕದಲ್ಲಿ 10 ಬೌಂಡರಿ ಮತ್ತು 3 ಸಿಕ್ಸರ್‌ಗಳಿದ್ದವು. ಗವಾಸ್ಕರ್ ಬಹುಮುಖ ಪಾತ್ರಗಳು ಅವರನ್ನು ಕಾಮೆಂಟರಿ ಬಾಕ್ಸ್‌ಗೆ ಕೊಂಡೊಯ್ದಿತ್ತು. ಅದಕ್ಕೆ ಸೂಕ್ಷ್ಮವಾದ ಹಾಸ್ಯದ ಸ್ಪರ್ಶ ನೀಡಿ ಅವರು ಅದನ್ನು ನಿರಂತರವಾಗಿ ತಾಜಾ ಇರುವಂತೆ ಮಾಡಿದರು.

ಗವಾಸ್ಕರ್ ಅವರು ಬಹು ಬೇಗನೆ ಬರೆಯಲು ಪ್ರಾರಂಭಿಸಿದರು. 1970-71ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಆಟದ ಮೂಲಕ ಕ್ರಿಕೆಟ್ ರಂಗಕ್ಕೆ ಪದಾರ್ಪಣೆ ಮಾಡಿದ ಅವರು ತಮ್ಮ ಮೊದಲ ಪುಸ್ತಕ, ‘ಸನ್ನಿ ಡೇಸ್’ ಅನ್ನು 1976ರಲ್ಲಿ ಅವರು 27 ವರ್ಷದವರಾಗಿದ್ದಾಗ ಪ್ರಕಟಿಸಲಾಯಿತು. ಅನಂತರ ‘ಐಡಲ್ಸ್’, ‘ರನ್ಸ್ ಅಂಡ್ ರೂಯಿನ್ಸ್’ ಮತ್ತು ‘ಒನ್-ಡೇ ವಂಡರ್ಸ್’ ಈ ಮೂರು ಅಂಕಣಗಳನ್ನು ಅವರು ಆಟಗಾರರಾಗಿದ್ದಾಗಲೇ ಬರೆದಿದ್ದರು.


ನಿಯಮಿತ ಬರವಣಿಗೆಯು ಕ್ರೀಡೆಯ ಮೇಲಿನ ಅವರ ಆಳವಾದ ಅನುಭವವನ್ನು ತೆರೆದಿಟ್ಟಿತು. ವಿಶೇಷವಾಗಿ ದೇಶದ ಅಗ್ರಗಣ್ಯ ಬ್ಯಾಟ್ಸ್‌ಮನ್ ಆಗಿ ಹೆಚ್ಚಿನ ಒತ್ತಡದ ದಿನದ ಕೆಲಸವನ್ನು ಮಾಡುತ್ತಿದ್ದಾಗಲೂ ಅವರು ಹೆಚ್ಚಿನ ಜವಾಬ್ದಾರಿಯನ್ನು ಹೊತ್ತಿದ್ದರು. ಆಟಗಾರರಾಗಿ, ಕಾಮೆಂಟರಿ ಮಾಡುವಾಗಲೂ ಅವರು ಪತ್ರಿಕೆಗಳಿಗೆ ಅಂಕಣಗಳನ್ನು ಬರೆಯಲು ಶಾಂತವಾದ ಮೂಲೆಯನ್ನು ಹುಡುಕುತ್ತ ಹೋಗಿ ಕುಳಿತುಕೊಳ್ಳುತ್ತಿದ್ದರು.

ಗವಾಸ್ಕರ್ ಅವರ ವೃತ್ತಿಜೀವನವು ಭಾರತೀಯ ಸಮೂಹ ಮಾಧ್ಯಮದ ಮೂಲಕ ಎಲ್ಲರ ಗಮನ ಸೆಳೆದಿತ್ತು. 1970 ಮತ್ತು 1980 ರ ದಶಕದಲ್ಲಿ ಮುದ್ರಣ, ರೇಡಿಯೋ, ದೂರದರ್ಶನಕ್ಕೂ ಜಾಹೀರಾತುಗಳ ಮೂಲಕ ಅವರು ಪ್ರವೇಶ ಮಾಡಿದರು. ಗವಾಸ್ಕರ್ ಅವರು ಸಾಧನೆಗಳಿಂದ ಮಾತ್ರವಲ್ಲ, ಹಲವು ಬ್ರ್ಯಾಂಡ್‌ಗಳಿಗೆ ರಾಯಭಾರಿಯಾಗಿಯೂ ಗುರುತಿಸಿಕೊಂಡರು. ಪುರುಷರ ಫ್ಯಾಷನ್, ಕೋಲಾ ಸೇರಿದಂತೆ ಅನೇಕ ಜಾಹೀರಾತುಗಳಲ್ಲಿ ಅವರು ಕಾಣಿಸಿಕೊಂಡರು.

ಚಲನಚಿತ್ರದಲ್ಲೂ ನಟಿಸಿ ಸೈ ಎನಿಸಿಕೊಂಡರು

‘ಸಾವ್ಲಿ ಪ್ರೇಮಚಿ’ ಎಂಬ ಮರಾಠಿ ಚಲನಚಿತ್ರದಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸಿರುವ ಗವಾಸ್ಕರ್, ಮುಂದೆ ನಾಸಿರುದ್ದೀನ್ ಶಾ ಮತ್ತು ಪೂನಂ ಧಿಲ್ಲೋನ್ ನಟಿಸಿದ ‘ಮಾಲಾಮಲ್’ನಂತಹ ಕೆಲವು ಹಿಂದಿ ಚಿತ್ರಗಳಲ್ಲಿ ಅತಿಥಿ ಪಾತ್ರವನ್ನು ನಿರ್ವಹಿಸಿದ್ದರು. ಇವರ ಎರಡೂ ಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ಹೆಚ್ಚು ಗಳಿಕೆಯನ್ನು ಮಾಡಿತ್ತು.

ಇದನ್ನೂ ಓದಿ: Zaheer Khan : ಜಹೀರ್ ಖಾನ್​ ಭಾರತ ತಂಡದ ಬೌಲಿಂಗ್​ ಕೋಚ್​?

Exit mobile version