ಮುಂಬಯಿ: ಪ್ಯಾರಿಸ್ ಒಲಿಂಪಿಕ್ಸ್(Paris Olympics 2024) ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ಸೆಮಿ ಫೈನಲ್ ಪಂದ್ಯದ ತನಕ ಉತ್ತಮವಾಗಿ ಆಡಿ ಪದಕ ಭರಸವೆ ಮೂಡಿಸಿದ್ದ ಲಕ್ಷ್ಯ ಸೇನ್(Lakshya Sen) ಸೆಮಿ ಮತ್ತು ಕಂಚಿನ ಪದಕ ಸ್ಪರ್ಧೆಯಲ್ಲಿ ನಿರಾಶಾದಾಯಕ ಪ್ರದರ್ಶನ ತೋರುವ ಮೂಲಕ ಸೋಲು ಕಂಡು ಪದಕ ವಂಚಿತರಾಗಿದ್ದರು. ಇದೀಗ ಮಾಜಿ ಕ್ರಿಕೆಟಿಗ ಸುನೀಲ್ ಗವಾಸ್ಕರ್(Sunil Gavaskar) ಅವರು ಲಕ್ಷ್ಯ ಸೇನ್ ಸೋಲಿಗೆ ಕಾರಣ ಏನೆಂಬುದನ್ನು ತಿಳಿಸಿದ್ದಾರೆ. ಮಹತ್ವದ ಪಂದ್ಯದ ವೇಳೆ ಏಕಾಗ್ರತೆಯನ್ನು ಕಾಯ್ದುಕೊಳ್ಳುವಲ್ಲಿ ಎಡವಿದ್ದೇ ಸೋಲಿಗೆ ಕಾರಣ ಎಂದಿದ್ದಾರೆ.
ಕೆಳ ದಿನಗಳ ಹಿಂದಷ್ಟೇ ಭಾರತೀಯ ಬ್ಯಾಡ್ಮಿಂಟನ್ ತಂಡದ ಮುಖ್ಯ ಕೋಚ್ ಪ್ರಕಾಶ್ ಪಡುಕೋಣೆ ಕನಿಷ್ಠ 1 ಪದಕವನ್ನು ಕೂಡ ಗೆಲ್ಲಲಾಗದ ಬ್ಯಾಡ್ಮಿಂಟನ್ ತಂಡದ ಬಗ್ಗೆ ವಾಗ್ದಾಳಿ ನಡೆಸಿದ್ದರು. ಇದೀಗ ಪಡುಕೋಣೆ ಅವರಿಗೆ ಸುನೀಲ್ ಗವಾಸ್ಕರ್ ಕೂಡ ಬೆಂಬಲಕ್ಕೆ ನಿಂತಿದ್ದಾರೆ. ಪ್ರಕಾಶ್ ಪಡುಕೋಣೆ ಹೇಳಿಕೆಯನ್ನು ಬೆಂಬಲಿಸಿರುವ ಸುನೀಲ್ ಗಾವಸ್ಕರ್, ಲಕ್ಷ್ಯಸೇನ್ರಂತಹ ಆಟಗಾರರ ದುರ್ಬಲ ಮನಸ್ಥಿತಿಯು ಮಹತ್ವದ ಘಟ್ಟದಲ್ಲಿ ಬ್ಯಾಡ್ಮಿಂಟನ್ನಲ್ಲಿ ಪದಕ ನಷ್ಟಕ್ಕೆ ಕಾರಣವಾಯಿತು ಎಂದು ಹೇಳಿದ್ದಾರೆ.
ಇದನ್ನೂ ಓದಿ Sunil Gavaskar Birthday: 60 ಓವರ್ ಆಡಿ 36 ರನ್ ಗಳಿಸಿದ್ದ ಗವಾಸ್ಕರ್, 88 ಚೆಂಡಿನಲ್ಲಿ ಸೆಂಚುರಿ ಬಾರಿಸಿದರು!
“ಆಟಗಾರರು ತಾವೇ ಮುಂದೆ ಬಂದು ಪದಕ ಗೆಲ್ಲಲುವ ಮನಸ್ಸು ಮಾಡಬೇಕು. ಉನ್ನತ ಮಟ್ಟದಲ್ಲಿ ಪ್ರದರ್ಶನ ನೀಡಲು ಅಗತ್ಯವಿರುವ ಎಲ್ಲಾ ಬೆಂಬಲ ಮತ್ತು ಹಣಕಾಸು ಭಾರತೀಯ ಆಟಗಾರರಿಗೆ ನೀಡಲಾಗುತ್ತಿದೆ. ನಮ್ಮ ಆಟಗಾರರಿಗೆ ಸೌಲಭ್ಯಗಳು ಮತ್ತು ಹಣದ ಕೊರತೆಯಿದ್ದ ಹಿಂದಿನ ದಿನಗಳಂತೆ ಈಗ ಆ ಪರಿಸ್ಥಿತಿ ಇಲ್ಲ” ಎಂದು ಹೇಳುವ ಮೂಲಕ ಬ್ಯಾಡ್ಮಿಂಟನ್ ಆಟಗಾರರ ವೈಫಲ್ಯದ ಬಗ್ಗೆ ವಾಗ್ದಾಳಿ ನಡೆಸಿದ್ದರು.
“ಲಕ್ಷ್ಯ ಉತ್ತಮವಾಗಿ ಆಡಿದ್ದರು. ಸೋಲಿನೀಂದ ಸಹಜವಾಗಿ ನಾನು ಸ್ವಲ್ಪ ನಿರಾಶೆಗೊಂಡಿದ್ದೇನೆ. ಅವರು ಸೆಮಿಫೈನಲ್ನಲ್ಲಿಯೂ ಉತ್ತಮವಾಗಿ ಆಡಿದ್ದರು. ಆದರೆ ಅಂಗಣದೊಳಗಿನ ಓಡಾಟ ಅವರಿಗೆ ಸಾಧ್ಯವಾಗಲಿಲ್ಲ, ಆ ನಿಟ್ಟಿನಲ್ಲಿ ಅವರು ಕೆಲಸ ಮಾಡಬೇಕಾಗಿದೆ” ಎಂದು ಪಡುಕೋಣೆ ಅಸಮಾಧಾನ ಹೊರಹಾಕಿದ್ದರು.
ಪುರುಷರ ಸಿಂಗಲ್ಸ್ನ ಕಂಚಿನ ಪದಕಕ್ಕಾಗಿ ನಡೆದ ಪಂದ್ಯದಲ್ಲಿ 22 ವರ್ಷದ ಲಕ್ಷ್ಯ ಸೇನ್ ಮಲೇಷ್ಯಾದ ಲೀ ಜಿ ಜಿಯಾ ವಿರುದ್ಧ 21-13, 16-21, 11-21 ಅಂತರದಲ್ಲಿ ಸೋತು ನಿರಾಸೆ ಮೂಡಿಸಿದ್ದರು. ಇದಕ್ಕೂ ಮುನ್ನ ನಡೆದಿದ್ದ ಸೆಮಿಫೈನಲ್ ಪಂದ್ಯದಲ್ಲಿ ಡೆನ್ಮಾರ್ಕ್‌ನ ವಿಕ್ಟರ್ ಅಕ್ಸೆಲ್ಸೆನ್(Viktor Axelsen) ವಿರುದ್ಧ 20-22 21-14 ನೇರ ಗೇಮ್ಗಳ ಅಂತರದಿಂದ ಸೋಲು ಕಂಡಿದ್ದರು.