ಮುಂಬಯಿ: ಭಾರತ ತಂಡದ ನಾಯಕ ರೋಹಿತ್ ಶರ್ಮ(Rohit Sharma) ಅವರನ್ನು ಟೀಮ್ ಇಂಡಿಯಾದ ಮಾಜಿ ಆಟಗಾರ ಸುನೀಲ್ ಗವಾಸ್ಕರ್(Sunil Gavaskar) ಮುಕ್ತಕಂಠದಿಂದ ಗುಣಗಾನ ಮಾಡಿದ್ದಾರೆ. ರೋಹಿತ್ ಅವರನ್ನು ನಾಯಕನಾಗಿ ಹೊಂದಿರುವುದು ಭಾರತ ತಂಡದ ಅದೃಷ್ಟ ಎಂದು ಬಣ್ಣಿಸಿದ್ದಾರೆ.
ಕಳೆದ ಟಿ20 ವಿಶ್ವಕಪ್ ಟೂರ್ನಿಯ ಗೆಲುವಿನ ಹಿನ್ನೆಲೆಯಲ್ಲಿ ಮಿಡ್‌ಡೇಗೆ ಬರೆದಿದ್ದ ಅಂಕಣದಲ್ಲಿ ಸುನೀಲ್ ಗವಾಸ್ಕರ್ ಈ ವಿಚಾರ ಬರೆದುಕೊಂಡಿದ್ದಾರೆ. “ಕ್ರಿಕೆಟ್ ಅಭಿಮಾನಿಗಳು ರೋಹಿತ್ ಅವರ ವೈಯಕ್ತಿಕ ಪ್ರದರ್ಶನ ಮಾತ್ರವಲ್ಲದೆ, ಅವರ ಕೌಶಲಭರಿತ ನಾಯಕತ್ವ ಮತ್ತು ಅವರ ಚುರುಕುತನವನ್ನು ಕೂಡ ಶ್ಲಾಘಿಸಿದ್ದಾರೆ. ಅವರು ಕೆಲವೊಂದು ತ್ವರಿತ ನಿರ್ಧಾರಗಳು ತಲೆಯಲ್ಲಿ ಹುಳ ಬಿಟ್ಟಂತೆ ಇರಬಹುದು. ಆದರೆ, ಅವರ ನಿರ್ಧಾರಗಳು ತಂಡಕ್ಕೆ ಅಗತ್ಯಕ್ಕಿಂತೆ ಹೆಚ್ಚಿನದಾಗಿರುತ್ತದೆ” ಎಂದು ಗವಾಸ್ಕರ್ ಹೇಳಿದ್ದಾರೆ.
ರೋಹಿತ್ ಈ ಬಾರಿಯ ವಿಶ್ವಕಪ್ನಲ್ಲಿ ಆಕ್ರಮಣಕಾರಿ ಬ್ಯಾಟಿಂಗ್ ನಡೆಸಿ ಎದುರಾಳಿ ಬೌಲರ್ಗಳ ಎಲ್ಲ ಯೋಜನೆಗಳನ್ನು ವಿಫಲಗೊಳಿಸುವ ಮೂಲಕ ತಾನು ಔಟಾದ ಬಳಿಕ ಬರುವ ಆಟಗಾರರಿಗೆ ಉತ್ತಮ ವಾತಾವರಣ ನಿರ್ಮಿಸುತ್ತಿದ್ದರು. ಅವರ ಈ ಯೋಜನೆ ಫಲ ನೀಡಿತು. ಒಂದೇ ಒಂದು ಪಂದ್ಯ ಸೋಲದೆ ಕಪ್ ಗೆದ್ದಿರುವುದು ಅವರ ನಾಯಕತ್ವದ ಮೌಲ್ಯವನ್ನು ತೋರಿಸಿಕೊಡುತ್ತದೆ ಎಂದು ಗವಾಸ್ಕರ್ ಬರೆದುಕೊಂಡಿದ್ದಾರೆ.
ದ್ರಾವಿಡ್ಗೆ ಭಾರತ ರತ್ನ ನೀಡಿ
ಇದೇ ಅಂಕಣದಲ್ಲಿ ಪ್ರಧಾನ ಕೋಚ್ ಆಗಿದ್ದ ರಾಹುಲ್ ದ್ರಾವಿಡ್ ಅವರಿಗೆ “ಭಾರತ ರತ್ನ” ಪ್ರಶಸ್ತಿಯಿಂದ ಗೌರವಿಸಬೇಕು ಎಂದು ಕೇಂದ್ರ ಸರ್ಕಾರಕ್ಕೆ ಸುನೀಲ್ ಗವಾಸ್ಕರ್ ಒತ್ತಾಯಿಸಿದ್ದಾರೆ. “ಭಾರತ ಸರಕಾರವು ದ್ರಾವಿಡ್ಗೆ ಭಾರತ ರತ್ನ ಪ್ರಶಸ್ತಿಯಿಂದ ಗೌರವಿಸಿದರೆ ಅದು ಅವರಿಗೆ ಸಲ್ಲುವ ಸೂಕ್ತ ಗೌರವವಾಗುತ್ತದೆ. ಈ ಗೌರವಕ್ಕೆ ಅವರು ಸಂಪೂರ್ಣವಾಗಿ ಅರ್ಹರಾಗಿದ್ದಾರೆ ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ Rohit Sharma: ಟಿ20 ವಿಶ್ವಕಪ್ ಮುಗಿದ ಬೆನ್ನಲ್ಲೇ ಕುಟುಂಬದ ಜತೆ ವಿದೇಶ ಪ್ರವಾಸ ಕೈಗೊಂಡ ರೋಹಿತ್
ದ್ರಾವಿಡ್ ಆಟಗಾರರಾಗಿ ಮತ್ತು ತಂಡದ ನಾಯಕರಾಗಿ ವಿದೇಶಗಳಲ್ಲಿ ಭಾರತಕ್ಕೆ ಗೆಲುವು ತಂದು ಕೊಟ್ಟಿದ್ದಾರೆ. ವೆಸ್ಟ್ ಇಂಡೀಸ್ನಲ್ಲಿ ಗೆಲ್ಲುವುದು ಅಸಾಧ್ಯ ಎಂಬ ಕಾಲದಲ್ಲಿ ಅವರು ಭಾರತಕ್ಕೆ ಸರಣಿ ಗೆಲುವನ್ನು ತಂದಿದ್ದಾರೆ. ಇಂಗ್ಲೆಂಡ್ನಲ್ಲಿ ಟೆಸ್ಟ್ ಸರಣಿಗಳನ್ನು ಗೆದ್ದಿರುವ ಕೇವಲ ಮೂರು ಭಾರತೀಯ ನಾಯಕರ ಪೈಕಿ ಅವರು ಕೂಡ ಒಬ್ಬರಾಗಿದ್ದಾರೆ. ಈ ಹಿಂದೆ, ಅವರು ನ್ಯಾಶನಲ್ ಕ್ರಿಕೆಟ್ ಅಕಾಡೆಮಿಯ ಅಧ್ಯಕ್ಷರಾಗಿ ಅತ್ಯುತ್ತಮ ಕ್ರಿಕೆಟ್ ಪ್ರತಿಭೆಗಳನ್ನು ಹೊರತಂದಿದ್ದಾರೆ. ಬಳಿಕ ಭಾರತೀಯ ಹಿರಿಯರ ಕ್ರಿಕೆಟ್ ತಂಡದ ಕೋಚ್ ಆಗಿ ಉತ್ತಮ ನಿರ್ವಹಣೆ ನೀಡಿದ್ದಾರೆ ಎಂದು ಗವಾಸ್ಕರ್ ಬರೆದುಕೊಂಡಿದ್ದಾರೆ.