ಮುಂಬಯಿ: ಭಾರತ ತಂಡದ ವಿಕೆಟ್ಕೀಪರ್ ಬ್ಯಾಟರ್ ಕೆ. ಎಲ್ ರಾಹುಲ್ ವಿರುದ್ಧ ಮಾಜಿ ಕ್ರಿಕೆಟಿಗ ವೆಂಕಟೇಶ್ ಮಾಡಿರುವ ಟೀಕೆಗಳ ಪ್ರಭಾವ ಇನ್ನೂ ಕಡಿಮೆಯಾಗಿಲ್ಲ. ಆಸ್ಟ್ರೇಲಿಯಾ ವಿರುದ್ಧದ ಏಕ ದಿನ ಸರಣಿಯ ಮೊದಲ ಪಂದ್ಯದಲ್ಲಿ ರಾಹುಲ್ ಅಜೇಯ 75 ರನ್ ಬಾರಿಸಿದ ತಕ್ಷಣ ಬಹುತೇಕ ಮಂದಿ ವೆಂಕಟೇಶ್ ಪ್ರಸಾದ್ಗೆ ತಿರುಗೇಟು ಕೊಟ್ಟಿದ್ದಾರೆ. ಆದರೆ, ಟೀಕೆಗಳಿಗೆ ಯಾವುದೇ ಪ್ರತಿಕ್ರಿಯೆ ಕೊಡದ ವೆಂಕಟೇಶ್ ಪ್ರಸಾದ್, ಕೆ. ಎಲ್ ರಾಹುಲ್ ಅವರ ಪ್ರದರ್ಶನವನ್ನು ಟ್ವೀಟ್ ಮಾಡಿ ಕೊಂಡಾಡಿದ್ದರು. ಇದೆಲ್ಲವೂ ಮುಗಿದ ಬಳಿಕ ಇದೀಗ ಕೆ. ಎಲ್ ರಾಹುಲ್ ಅವರ ಮಾವ ಸುನೀಲ್ ಶೆಟ್ಟಿ ವೆಂಕಟೇಶ್ ಪ್ರಸಾದ್ ಪರೋಕ್ಷೆ ಹೇಳಿಕೆ ನೀಡುವ ಮೂಲಕ ಟೀಕೆ ಮಾಡಿದ್ದಾರೆ. ನಿಮ್ಮ ಮಾತಿಗೆ ಯಾವುದೇ ಬೆಲೆಯಿಲ್ಲ ಎಂಬರ್ಥದಲ್ಲಿ ಹೇಳಿಕೆ ಕೊಟ್ಟಿದ್ದಾರೆ.
ಸುನೀಲ್ ಶೆಟ್ಟಿ ಪ್ರತಿಕ್ರಿಯೆ ಹೀಗಿತ್ತು
ಮುಂಬಯಿಯಲ್ಲಿ ಸುನೀಲ್ ಶೆಟ್ಟಿ ಎದುರು ಸಿಕ್ಕಾಗ ಪತ್ರಕರ್ತರು ರಾಹುಲ್ ಅವರ ಪ್ರದರ್ಶನದ ಬಗ್ಗೆ ಪ್ರಶ್ನೆ ಕೇಳಿದ್ದಾರೆ. ಇದೇ ವೇಳೆಗೆ ವೆಂಕಟೇಶ್ ಪ್ರಸಾದ್ ಅವರ ಟೀಕೆಯ ಬಗ್ಗೆಯೂ ಕೇಳಿದ್ದರು. ಅದಕ್ಕೆ ನಿರುಮ್ಮಳವಾಗಿ ಉತ್ತರಿಸಿದ ಸುನೀಲ್ ಶೆಟ್ಟಿ, ಮೇಲಿರುವ ದೇವರು ಎಲ್ಲವನ್ನೂ ನೋಡುತ್ತಿದ್ದಾನೆ. ಅಂಥದ್ದರಲ್ಲಿ. ಹೊರಗಿರುವ ವ್ಯಕ್ತಿಗಳು ಏನೇ ಟೀಕೆ ಮಾಡಿದರೂ ಅದಕ್ಕೆ ಬೆಲೆಯಿಲ್ಲ ಎಂಬುದಾಗಿ ಅವರು ಹೇಳಿದ್ದಾರೆ. ಈ ಮೂಲಕ ವೆಂಕಟೇಶ್ ಪ್ರಸಾದ್ ಅವರ ಟೀಕೆಗಳಿಗೆ ಕಿಮ್ಮತ್ತಿಲ್ಲ. ನಮಗೆ ದೇವರ ವರವಿದೆ ಎಂಬುದಾಗಿ ಹೇಳಿಕೊಂಡಿದ್ದಾರೆ.
ಟೀಕೆಗೆ ಒಳಗಾಗಿದ್ದ ರಾಹುಲ್
ಕೆ. ಎಲ್ ರಾಹುಲ್ ಕಳೆದ ಕೆಲವು ದಿನಗಳಿಂದ ಉತ್ತಮ ಪ್ರದರ್ಶನ ನೀಡುತ್ತಿರಲಿಲ್ಲ. ಬಾಂಗ್ಲಾದೇಶ ಪ್ರವಾಸ, ಶ್ರೀಲಂಕಾ ವಿರುದ್ಧದ ಸರಣಿ ಹಾಗೂ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಸತತವಾಗಿ ವೈಫಲ್ಯ ಎದುರಿಸಿದ್ದರು. ಈ ಬಗ್ಗೆ ಟೀಕೆ ವ್ಯಕ್ತಗೊಂಡ ಕಾರಣ ಆಸ್ಟ್ರೇಲಿಯಾ ವಿರುದ್ಧದ ಸರಣಿಯ ಎರಡನೇ ಪಂದ್ಯದ ಬಳಿಕ ರಾಹುಲ್ ಅವರ ಉಪನಾಯಕ ಪಟ್ಟವನ್ನು ವಾಪಸ್ ಪಡೆಯಲಾಗಿತ್ತು. ಜತೆಗೆ ತಂಡದಲ್ಲಿ ಆಡುವ ಅವಕಾಶವನ್ನೂ ನೀಡಿರಲಿಲ್ಲ. ಇದೇ ವೇಳೆ ರಾಹುಲ್ ಅವರ ಬಗ್ಗೆ ಸತತವಾಗಿ ಟೀಕೆಗಳು ವ್ಯಕ್ತಗೊಂಡಿದ್ದವರು. ಆದರೆ, ಟೀಕಾಕಾರರಲ್ಲಿ ಮುಂಚೂಣಿ ಸ್ಥಾನದಲ್ಲಿ ನಿಂತಿದ್ದ ವೆಂಕಟೇಶ್ ಪ್ರಸಾದ್ ಅವರು ಹೇಳಿಕೆಗಳನ್ನು ನೀಡಿದ್ದರು. ಅದಕ್ಕೆ ಪ್ರತಿಕ್ರಿಯೆಯಾಗಿ ಆಕಾಶ್ ಚೋಪ್ರಾ ಹೇಳಿಕೆ ನೀಡಿದ್ದರು ಅವರಿಬ್ಬರ ನಡುವಿನ ವಾದ- ವಿವಾದ ಜೋರಾಗಿ ನಡೆದು ಕೊನೆಗೆ ಮಾವ ಸುನೀಲ್ ಶೆಟ್ಟಿಯ ತನಕ ಮುಂದುವರಿದಿತ್ತು. ಹೀಗಾಗಿ ಪತ್ರಕರ್ತರು ಸುನೀಲ್ ಶೆಟ್ಟಿಗೆ ಪ್ರಶ್ನೆ ಕೇಳಿದ್ದರು. ಅದಕ್ಕವರು ದೇವರಿದ್ದಾನೆ ಎಂದು ಪ್ರಶ್ನೆ ಉತ್ತರ ಕೊಟ್ಟಿದ್ದರು.
ಇದನ್ನೂ ಓದಿ : INDvsAUS : ಭಾರತ ತಂಡಕ್ಕೆ ಐದು ವಿಕೆಟ್ ವಿಜಯ, ಅಜೇಯ 75 ರನ್ ಬಾರಿಸಿದ ಕೆ. ಎಲ್ ರಾಹುಲ್
ಇಷ್ಟಾದರೂ ಕೆ. ಎಲ್ ರಾಹುಲ್ ಎರಡನೇ ಪಂದ್ಯದಲ್ಲಿ ಉತ್ತಮವಾಗಿ ಆಡಿರಲಿಲ್ಲ. 9 ರನ್ ಬಾರಿಸಿ ಅವರು ಔಟಾಗಿದ್ದಾರೆ. ಅದೇ ರೀತಿ 117 ರನ್ಗಳಿಗೆ ಭಾರತ ತಂಡ ಆಲ್ಔಟ್ ಆಗಿತ್ತು. ಆಸ್ಟ್ರೇಲಿಯಾ ತಂಡ ವಿಕೆಟ್ ನಷ್ಟವಿಲ್ಲದೆ 121 ರನ್ ಬಾರಿಸಿ ವಿಜಯ ಸಾಧಿಸಿತ್ತು.