ಕೊಲಂಬೊ: ಗುರುವಾರ ನಡೆದಿದ್ದ ಏಷ್ಯಾಕಪ್ನ(Asia Cup 2023) ರೋಚಕ ಪಂದ್ಯದಲ್ಲಿ ಪಾಕಿಸ್ತಾನ ತಂಡ ಶ್ರೀಲಂಕಾ(Pakistan vs Sri Lanka) ವಿರುದ್ಧ ಆಘಾತಕಾರಿ ಸೋಲು ಕಂಡು ಟೂರ್ನಿಯಿಂದ ಹೊರಬಿದ್ದಿತ್ತು, ಈ ಸೋಲಿನ ಬಳಿಕ ಪಾಕಿಸ್ತಾನ ಆಟಗಾರರು ಡ್ರೆಸ್ಸಿಂಗ್ ರೂಮ್ನಲ್ಲಿ(dressing room) ಕಿತ್ತಾಟ ನಡೆಸಿರುವ ಘಟನೆಯೊಂದು ಬೆಳಕಿಗೆ ಬಂದಿದೆ.
ಆರ್.ಪ್ರೇಮದಾಸ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದಿದ್ದ ಈ ಪಂದ್ಯದಲ್ಲಿ ಕೊನೆಯ 12 ಎಸೆತಗಳಲ್ಲಿ ಲಂಕಾ ಗೆಲುವಿಗೆ 12 ರನ್ಗಳ ಅಗತ್ಯವಿತ್ತು. ಆ ವೇಳೆ ಶಾಹೀನ್ ಅಫ್ರಿದಿ ಎರಡು ವಿಕೆಟ್ಗಳನ್ನು ಕಿತ್ತು ಲಂಕಾಗೆ ಒತ್ತಡ ಹೇರಿದರು. ಕೊನೆಯ ಓವರ್ನಲ್ಲಿ 6 ಎಸೆತಗಳಲ್ಲಿ 8 ರನ್ಗಳ ಸವಾಲು ಎದುರಾದಗ ಲಂಕಾ ಅಭಿಮಾನಿಗಳು ಉಸಿರು ಬಿಗಿಹಿಡಿದು ತಮ್ಮ ತಂಡ ಗೆಲ್ಲುವಂತೆ ಪ್ರಾರ್ಥಿಸತೊಡಗಿದರು. ಈ ಓವರ್ ಜಮಾನ್ ಖಾನ್ ಎಸೆದರು. ಮೊದಲ ನಾಲ್ಕು ಎಸೆತವನ್ನು ಘಾತಕವಾಗಿ ಎಸೆದ ಜಮಾನ್ ಪಾಕ್ಗೆ ಗೆಲುವು ತಂದು ಕೊಡಲಿದ್ದಾರೆ ಎಂದು ನಿರೀಕ್ಷಿಸಲಾಯಿತು.
ಅಂತಿಮ 2 ಎಸೆತದಲ್ಲಿ ಪಾಕ್ಗೆ ಎದುರಾದ ಸೋಲು
ಒತ್ತಡದಲ್ಲಿದ್ದ ಲಂಕಾ ಗೆಲುವಿಗೆ ಎರಡು ಎಸೆತದಲ್ಲಿ ಆರು ರನ್ಗಳ ಅಗತ್ಯವಿತ್ತು. ಈ ವೇಳೆ ಚರಿತ್ ಅಸಲಂಕಾ ಬೌಂಡರಿ ಬಾರಿಸಿ ಪಂದ್ಯವನ್ನು ಮತ್ತಷ್ಟು ರೋಚಕತೆಗೆ ತಂದು ನಿಲ್ಲಿಸಿದರು. ಅಂತಿಮ ಎಸೆತದಲ್ಲಿ 2 ರನ್ ಬಾರಿಸುವಲ್ಲಿಯೂ ಯಶಸ್ವಿಯಾದ ಅಸಲಂಕಾ ಲಂಕಾಗೆ ಸ್ಮರಣೀಯ ಗೆಲುವು ತಂದುಕೊಟ್ಟರು. ಪಾಕ್ನ ಫೈನಲ್ ಕನಸು ಭಗ್ನಗೊಂಡಿತು.
ಸೂಪರ್ ಸ್ಟಾರ್ಗಳಲ್ಲ
ಸೋಲಿನ ಬೇಸರದಲ್ಲಿದ್ದ ನಾಯಕ ಬಾಬರ್ ಅಜಂ(babar azam) ಮೈದಾನದಲ್ಲೇ ತಾಳ್ಮೆ ಕಳೆದುಕೊಂಡಿದ್ದರು. ಡ್ರೆಸ್ಸಿಂಗ್ ರೂಮ್ಗೆ ತೆರಳಿದ್ದೇ ತಡ ಆಟಗಾರರ ಕಳಪೆ ಪ್ರದರ್ಶನಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ, ಮೊದಲು ನಿಮ್ಮನ್ನು ನೀವು ಸೂಪರ್ ಸ್ಟಾರ್‌ಗಳು ಎಂದುಕೊಳ್ಳುವ ಯೋಚನೆಯನ್ನು ತಲೆಯಿಂದ ಕಿತ್ತುಹಾಕಿ. ವಿಶ್ವಕಪ್‌ನಲ್ಲಿ ಸೋತರೆ ಯಾರೂ ನಿಮ್ಮನ್ನು ಸೂಪರ್‌ಸ್ಟಾರ್ ಎಂದು ಪರಿಗಣಿಸುವುದಿಲ್ಲ’ ಎಂದು ಎಚ್ಚರಿಕೆ ನೀಡಿದ್ದಾರೆ. ಬಾಬರ್ ಅವರ ಈ ಮಾತಿನಿಂದ ರೊಚ್ಚಿಗೆದ್ದ ವೇಗಿ ಶಾಹೀನ್ ಅಫ್ರಿದಿ(shaheen afridi) ‘ಕೊನೆಯ ಪಕ್ಷ ಯಾರೆಲ್ಲ ಚೆನ್ನಾಗಿ ಆಡಿದ್ದಾರೆ ಹಾಗೂ ಆಡಿಲ್ಲ ಎಂದು ನೇರವಾಗಿ ಹೇಳಿ. ಇದನ್ನು ಬಿಟ್ಟು ಅಡ್ಡಗೋಡೆಯ ಮೇಲೆ ದೀಪ ಇಡುವ ಕೆಲಸ ಮಾಡಬೇಡಿ’ ಎಂದು ತಿರುಗೇಟು ನೀಡಿದ್ದಾರೆ ಎಂದು ಬೋಲ್ ನ್ಯೂಸ್ ವರದಿ ಮಾಡಿದೆ.
ಪರಿಸ್ಥಿತಿ ಹತೋಟಿಗೆ ತಂದ ರಿಜ್ವಾನ್
ಬಾಬರ್ ಅಜಂ ಮತ್ತು ಶಾಹೀನ್ ಅಫ್ರಿದಿ ನಡುವೆ ಮಾತಿನ ಚಕಮಕಿ ತೀವ್ರಗೊಳ್ಳುತಿದ್ದಂತೆ ವಿಕೆಟ್ ಕೀಪರ್ ಕಮ್ ಬ್ಯಾಟರ್ ಮೊಹಮ್ಮದ್ ರಿಜ್ವಾನ್ ಮಧ್ಯ ಪ್ರವೇಶಿ ಉಭಯ ಆಟಗಾರರ ನಡುವಿನ ಮಾತಿನ ಸಮರವನ್ನು ತಣ್ಣಗೆ ಮಾಡಿದ್ದಾರೆ ಎಂದು ವರದಿಯಾಗಿದೆ.
ಬೇಸರ ವ್ಯಕ್ತಪಡಿಸಿದ್ದ ಬಾಬರ್
ಪಂದ್ಯದ ಬಳಿಕ ಮಾತನಾಡಿದ ಪಾಕಿಸ್ತಾನ ನಾಯಕ ಬಾಬರ್ ಅಜಂ, “ಬೌಲಿಂಗ್ ಹಾಗೂ ಫೀಲ್ಡಿಂಗ್ ವೈಫಲ್ಯ ತಂಡಕ್ಕೆ ದೊಡ್ಡ ಹಿನ್ನಡೆಯಾಗಿ ಪರಿಣಮಿಸಿತು ಎಂದಿದ್ದರು. “ಬ್ಯಾಟಿಂಗ್ನಲ್ಲಿ ನಮ್ಮ ಆಟಗಾರರು ಉತ್ತಮ ಪ್ರದರ್ಶನವನ್ನೇ ನೀಡಿದ್ದಾರೆ. ಆದರೆ ಬೌಲಿಂಗ್ ಹಾಗೂ ಫೀಲ್ಡಿಂಗ್ ವಿಭಾಗದಲ್ಲಿ ಎಡವಿದೆವು. ಹೀಗಾಗಿ ನಾವು ಪಂದ್ಯ ಸೋಲುವಂತಾಯಿತು ಎಂದು ಬೌಲರ್ಗಳ ಮೇಲೆ ಸೋಲಿನ ಆರೋಪ ಹೊರಿಸಿದ್ದರು.