ನವದೆಹಲಿ: ಅಖಿಲ ಭಾರತ ಫುಟ್ಬಾಲ್ ಫೆಡರೇಷನ್ (AIFF) ಮೇಲೆ ಅಂತಾರಾಷ್ಟ್ರೀಯ ಫುಟ್‌ಬಾಲ್ ಸಂಸ್ಥೆಗಳ ಒಕ್ಕೂಟ (FIFA) ಹೇರಿರುವ ನಿಷೇಧ (FIFA Ban) ಹಿಂಪಡೆಯುವ ದಿಸೆಯಲ್ಲಿ ಸಕಲ ಕ್ರಮ ತೆಗೆದುಕೊಳ್ಳಬೇಕು ಎಂದು ಕೇಂದ್ರ ಸರಕಾರಕ್ಕೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ. ಹಾಗೆಯೇ, ಭಾರತದಲ್ಲಿಯೇ ಅಂಡರ್ ೧೭ ಮಹಿಳಾ ಫುಟ್‌ಬಾಲ್ ವಿಶ್ವಕಪ್ ನಡೆಯುವ ದಿಸೆಯಲ್ಲೂ ಕ್ರಮ ತೆಗೆದುಕೊಳ್ಳಬೇಕು ಎಂದು ನಿರ್ದೇಶಿಸಿದೆ.
ಭಾರತದ ಫುಟ್ಬಾಲ್ ಆಡಳಿತದಲ್ಲಿ ಹೊರಗಿನವರು ಪ್ರಭಾವ ಬೀರುತ್ತಿದ್ದಾರೆ ಎಂಬ ಆರೋಪ ಹೊರಿಸಿ, ಎಐಎಫ್‌ಎಫ್ ಮೇಲೆ ಫಿಫಾ ನಿಷೇಧ ಹೇರಿದೆ. ಅಲ್ಲದೆ, ಅಂಡರ್ ೧೭ ಮಹಿಳಾ ಫುಟ್‌ಬಾಲ್ ವಿಶ್ವಕಪ್ ವಿದೇಶಕ್ಕೆ ಸ್ಥಳಾಂತರ ಮಾಡಲು ತೀರ್ಮಾನಿಸಿದೆ. ಇದರ ಜತೆಗೆ ಸದ್ಯಕ್ಕೆ ಯಾವುದೇ ಅಂತಾರಾಷ್ಟ್ರೀಯ ತಂಡದ ಜತೆ ಭಾರತ ಫುಟ್‌ಬಾಲ್ ಆಡುವಂತಿಲ್ಲ ಎಂದಿದೆ. ಸುಪ್ರೀಂ ಕೋರ್ಟ್ ನೇಮಿಸಿರುವ ಆಡಳಿತ ಮಂಡಳಿ (ಸಿಒಎ) ರದ್ದಾದ ಬಳಿಕವೇ ನಿಷೇಧ ಹಿಂಪಡೆಯುವುದಾಗಿ ಫಿಫಾ ತಿಳಿಸಿದೆ. ಇದರಿಂದ ಜಾಗತಿಕ ಮಟ್ಟದಲ್ಲಿ ಅಖಿಲ ಭಾರತ ಫುಟ್‌ಬಾಲ್ ಫೆಡರೇಷನ್‌ಗೆ ಹಿನ್ನಡೆಯಾದಂತಾಗಿದೆ.
ಹಾಗಾಗಿ, ಪ್ರಕರಣದಲ್ಲಿ ಮಧ್ಯಪ್ರವೇಶಿಸಬೇಕು ಎಂದು ಕೇಂದ್ರ ಸರಕಾರಕ್ಕೆ ಸುಪ್ರೀಂ ಕೋರ್ಟ್ ಸೂಚಿಸಿದೆ. “ಫಿಫಾ ನಿಷೇಧ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಸರಕಾರವು ಈ ಕುರಿತು ಕ್ರಮ ತೆಗೆದುಕೊಳ್ಳುತ್ತಿದೆ. ಅಂಡರ್ ೧೭ ವಿಶ್ವಕಪ್ ಆಯೋಜನೆ ಕುರಿತು ಫಿಪಾ ಜತೆ ಮಾತುಕತೆ ನಡೆಯುತ್ತಿದೆ,” ಎಂದು ಸುಪ್ರೀಂ ಕೋರ್ಟ್‌ಗೆ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ತಿಳಿಸಿದರು.
ಇದನ್ನೂ ಓದಿ | Football | ಭಾರತೀಯ ಫುಟ್ಬಾಲ್ ಒಕ್ಕೂಟವನ್ನು ನಿಷೇಧಿಸಿದ ಫಿಫಾ, ಏನಿದಕ್ಕೆ ಕಾರಣ?