Site icon Vistara News

Mohammed Shami : ಶಮಿಗೆ ಟ್ರಬಲ್; ದೌರ್ಜನ್ಯ ಕೇಸನ್ನು ಒಂದು ತಿಂಗಳಲ್ಲಿ ಇತ್ಯರ್ಥ ಮಾಡಲು​ ಆದೇಶ

Mohammed Shami

ನವದೆಹಲಿ: ಟೀಂ ಇಂಡಿಯಾ ವೇಗದ ಬೌಲರ್​ ಮೊಹಮ್ಮದ್ ಶಮಿ ವಿರುದ್ಧದ ಕೌಟುಂಬಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳದ ಸೆಷನ್ಸ್ ನ್ಯಾಯಾಲಯಕ್ಕೆ ಸುಪ್ರೀಂ ಕೋರ್ಟ್ ಮಹತ್ವದ ಆದೇಶ ನೀಡಿದೆ. ಭಾರತದ ವೇಗದ ಬೌಲರ್ ವರದಕ್ಷಿಣೆಗೆ ಬೇಡಿಕೆ ಇಟ್ಟಿದ್ದಾರೆ ಮತ್ತು ಹಲವಾರು ಅಕ್ರಮ ಸಂಬಂಧಗಳಲ್ಲಿ ಭಾಗಿಯಾಗಿದ್ದಾರೆ ಎಂದು ಶಮಿ ಅವರ ಪತ್ನಿ ಹಸೀನ್ ಜಹಾನ್ ಆರೋಪಿಸಿರುವ ಪ್ರಕರಣವನ್ನು ಒಂದು ತಿಂಗಳಲ್ಲಿ ಇತ್ಯರ್ಥ ಮಾಡುವಂತೆ ಸುಪ್ರೀಮ್​ ಕೋರ್ಟ್​ ಹೇಳಿದೆ. ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್, ನ್ಯಾಯಮೂರ್ತಿಗಳಾದ ಪಿ.ಎಸ್.ನರಸಿಂಹ ಮತ್ತು ಮನೋಜ್ ಮಿಶ್ರಾ ಅವರನ್ನು ಒಳಗೊಂಡ ನ್ಯಾಯಪೀಠವು ವಿಚಾರಣೆಯ ಮಧ್ಯಂತರ ತಡೆಯಾಜ್ಞೆ 2019 ರ ನವೆಂಬರ್ 2 ರವರೆಗೆ ಮಾತ್ರ ಜಾರಿಯಲ್ಲಿರುತ್ತದೆ ಎಂದು ಗಮನಿಸಿದ ನಂತರ ಈ ತೀರ್ಪನ್ನು ನೀಡಿತು.

ಶಮಿ ವಿರುದ್ಧದ ವಿಚಾರಣೆಯ ಮೇಲಿನ ತಡೆಯಾಜ್ಞೆಯನ್ನು ತೆಗೆದುಹಾಕಲು ಜಹಾನ್ ಸಲ್ಲಿಸಿದ ಅರ್ಜಿಯನ್ನು ಸೆಷನ್ಸ್ ನ್ಯಾಯಾಲಯವು ಪರಿಗಣೀಸಬೇಖು ಎಂದು ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ. ವರದಕ್ಷಿಣೆ ಬೇಡಿಕೆ ಮತ್ತು ಕೌಟುಂಬಿಕ ದೌರ್ಜನ್ಯದ ಆರೋಪ ಹೊತ್ತಿರುವ ಶಮಿ ವಿರುದ್ಧದ ಕ್ರಿಮಿನಲ್ ಪ್ರಕರಣವನ್ನು ಪುನರಾರಂಭಿಸುವಂತೆ ಜಹಾನ್ ಕೋರಿದ್ದಾರೆ. ಕ್ರಿಕೆಟಿಗನ ಬಂಧನಕ್ಕೆ ಸೆಷನ್ಸ್ ನ್ಯಾಯಾಲಯದ ತಡೆಯಾಜ್ಞೆಯನ್ನು ಕೊನೆಗೊಳಿಸುವಂತೆ ಜಹಾನ್ ನ್ಯಾಯಾಲಯಕ್ಕೆ ಮನವಿ ಮಾಡಿದರು.

ತಡೆಯಾಜ್ಞೆಯು ಹಿಂದಿನ ನಾಲ್ಕು ವರ್ಷಗಳವರೆಗೆ ಈ ವಿಷಯದ ವಿಚಾರಣೆಯನ್ನು ಮುಂದುವರಿಸದಂತೆ ತಡೆಯಿತು ಎಂದು ಅರ್ಜಿಯಲ್ಲಿ ವಾದಿಸಲಾಗಿದೆ. ಶಮಿ ವಿಚಾರಣಾ ನ್ಯಾಯಾಲಯದ ಮುಂದೆ ಹಾಜರಾಗಿಲ್ಲ ಅಥವಾ ಈ ಪ್ರಕರಣದಲ್ಲಿ ಜಾಮೀನು ಸಹ ಕೋರಿಲ್ಲ ಎಂದು ಜಹಾನ್ ಒತ್ತಿ ಹೇಳಿದ್ದರು. ಕೋಲ್ಕತಾ ನ್ಯಾಯಾಲಯವು ಈ ವರ್ಷದ ಜನವರಿಯಲ್ಲಿ ಜಹಾನ್​ಗೆ ತಿಂಗಳಿಗೆ 50,000 ರೂ.ಗಳ ಜೀವನಾಂಶವನ್ನು ಪಾವತಿಸುವಂತೆ ಶಮಿಗೆ ಆದೇಶಿಸಿತ್ತು.

ವಿಶೇಷವೆಂದರೆ, 2018 ರಲ್ಲಿ ಶಮಿ ವಿರುದ್ಧ ವರದಕ್ಷಿಣೆ, ಮ್ಯಾಚ್ ಫಿಕ್ಸಿಂಗ್, ಕೌಟುಂಬಿಕ ಹಿಂಸಾಚಾರ ಮತ್ತು ವಿವಾಹೇತರ ಸಂಬಂಧಗಳ ಆರೋಪವನ್ನು ಪತ್ನಿ ಜಹಾನ್ ಹೊರಿಸಿದ್ದರು. ನಂತರ ಸೆಷನ್ಸ್ ನ್ಯಾಯಾಲಯವು ಬಲಗೈ ವೇಗದ ಬೌಲರ್ ವಿರುದ್ಧ ಬಂಧನ ವಾರಂಟ್ ಹೊರಡಿಸಿತ್ತು. ಶಮಿ ಬಂಧನಕ್ಕೆ ಕೋಲ್ಕತಾ ಹೈಕೋರ್ಟ್ ತಡೆಯಾಜ್ಞೆ ನೀಡಿದ್ದರಿಂದ ಶೀಘ್ರದಲ್ಲೇ ಅವರಿಗೆ ಪರಿಹಾರ ಸಿಕ್ಕಿತು. ಆದಾಗ್ಯೂ, ನ್ಯಾಯಾಲಯವು ಶಮಿಗೆ ಅವರ ವಿಚ್ಛೇದಿತ ಪತ್ನಿಗೆ ಮಾಸಿಕ ಹಣ ನೀಡುವಂತೆ ಆದೇಶಿಸಿತ್ತು.

ಇದನ್ನೂ ಓದಿ : T20 World Cup | ಇದಕ್ಕೆ ಕರ್ಮ ಎನ್ನುವುದು; ಅಖ್ತರ್‌ಗೆ ಟ್ರೋಲ್‌ ಮಾಡಿದ ಮೊಹಮ್ಮದ್ ಶಮಿ

ಶಮಿ ಬಂಧನಕ್ಕೆ ನೀಡಿದ್ದ ತಡೆಯಾಜ್ಞೆಯನ್ನು ಪ್ರಶ್ನಿಸಿ ಜಹಾನ್ ಮೇ ತಿಂಗಳಲ್ಲಿ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು. ಸುಪ್ರೀಂ ಕೋರ್ಟ್ ಹಸೀನ್ ಜಹಾನ್ ಸಲ್ಲಿಸಿದ ಮನವಿಯನ್ನು ಆಲಿಸಿತು. ಸಿಜೆಐ ಡಿ.ವೈ.ಚಂದ್ರಚೂಡ್ ಅವರು ಸೆಷನ್ಸ್ ನ್ಯಾಯಾಲಯಕ್ಕೆ ಪ್ರಕರಣವನ್ನು ಮರುಪರಿಶೀಲಿಸುವಂತೆ ಮತ್ತು ಒಂದು ತಿಂಗಳೊಳಗೆ ವಿಚಾರಣೆಯನ್ನು ಪೂರ್ಣಗೊಳಿಸುವಂತೆ ಆದೇಶಿಸಿದರು.

ಒಂದು ತಿಂಗಳಲ್ಲಿ ಪ್ರಕರಣವನ್ನು ಮುಗಿಸಲು ಸಾಧ್ಯವಾಗದಿದ್ದರೆ, ನ್ಯಾಯಾಧೀಶರು ತಡೆಯಾಜ್ಞೆ ಆದೇಶವನ್ನು ಮಾರ್ಪಡಿಸಲು ಆದೇಶವನ್ನು ಹೊರಡಿಸಬಹುದು ಎಂದು ಸಿಜೆಐ ಸೆಷನ್ಸ್ ನ್ಯಾಯಾಲಯಕ್ಕೆ ನಿರ್ದೇಶನ ನೀಡಿದರು.

ಮೊಹಮ್ಮದ್ ಶಮಿ ಕೊನೆಯ ಬಾರಿಗೆ ಡಬ್ಲ್ಯುಟಿಸಿ ಫೈನಲ್​​ನಲ್ಲಿ ಭಾರತ ತಂಡದಲ್ಲಿ ಕಾಣಿಸಿಕೊಂಡಿದ್ದರು. ಅವರು ಮುಂಬರುವ ವೆಸ್ಟ್ ಇಂಡೀಸ್ ಪ್ರವಾಸದಿಂದ ವಿಶ್ರಾಂತಿ ಪಡೆದಿದ್ದಾರೆ.

Exit mobile version