ನವ ದೆಹಲಿ: ಭಾರತದ ಯುವ ಕುಸ್ತಿಪಟು ಸೂರಜ್ ವಶಿಷ್ಠ ಭಾರತದ ಕುಸ್ತಿ ಕ್ಷೇತ್ರವೇ ಸಂಭ್ರಮ ಪಡುವಂತಹ ಸುದ್ದಿ ತಂದಿದ್ದಾರೆ. ರೋಮ್‌ನಲ್ಲಿ ನಡೆದ ಗ್ರೀಕೊ ರೋಮನ್ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ೧೭ರ ವಯೋಮಿತಿಯ ೫೫ ಕೆ. ಜಿ ವಿಭಾಗದಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ೩೨ ವರ್ಷಗಳ ಬಳಿಕ ಈ ಸಾಧನೆ ಮಾಡಿರುವ ಭಾರತದ ಕುಸ್ತಿಪಟು ಎಂಬ ಖ್ಯಾತಿ ಗಿಟ್ಟಿಸಿಕೊಂಡಿದ್ದಾರೆ. ೧೯೯೦ರಲ್ಲಿ ಪಪ್ಪೂ ಯಾದವ್ ಅವರು ಇದೇ ಕೂಟದಲ್ಲಿ ಚಾಂಪಿಯನ್‌ಪಟ್ಟ ಗೆದ್ದ ಬಳಿಕ ಭಾರತಕ್ಕೆ ಯಾವುದೇ ಪದಕ ಲಭಿಸಿರಲಿಲ್ಲ. ಇದೀಗ ಸೂರಜ್ ವಶಿಷ್ಠ ಆ ಕೊರತೆಯನ್ನು ನೀಗಿಸಿದ್ದಾರೆ. ಇದು ಜೂನಿಯರ್ ಹಂತದ ವಿಶ್ವ ಕಪ್‌ನಲ್ಲಿ ಭಾರತಕ್ಕೆ ಲಭಿಸಿ ನಾಲ್ಕನೇ ಪದಕವೂ ಹೌದು.
ಮಂಗಳವಾರ ನಡೆದಿದ್ದ ಸ್ಪರ್ಧೆಯಲ್ಲಿ ಸಂಪೂರ್ಣ ಪಾರಮ್ಯ ಮೆರೆದಿದ್ದ ಭಾರತದ ಯುವ ಕುಸ್ತಿಪಟು ಸೂರಜ್, ಯುರೋಪಿಯನ್ ಚಾಂಪಿಯನ್ ಕುಸ್ತಿಪಟು ಅಜೆರ್‌ಜೈಜಾನ್‌ನ ಫರೈಮ್ ಮುಸ್ತಾಫಾಯೆವ್ ವಿರುದ್ಧ ೧೧-೦ ಅಂಕಗಳಿಂದ ಜಯ ಸಾಧಿಸಿ ಸ್ವರ್ಣ ಪದಕಕ್ಕೆ ಮುತ್ತಿಟ್ಟರು. ೧೯೯೦ರಲ್ಲಿ ಪಪ್ಪು ಯಾದವ್ ಅವರು ಇದೇ ಕೂಟದ ೨೦ರ ವಯೋಮಿತಿಯ ವಿಭಾಗದಲ್ಲಿ ಪ್ರಶಸ್ತಿ ಗೆದ್ದಿದ್ದರು.
“ಈ ವಿಭಾಗದಲ್ಲಿ ಚಾಂಪಿಯನ್ ಆಗುವುದು ನನ್ನ ಕನಸಾಗಿತ್ತು. ಅದನ್ನು ಸಾಧಿಸಿದ್ದೇನೆ. ಅಂತೆಯೆ ಹಿರಿಯ ವಿಭಾಗದಲ್ಲೂ ಚಾಂಪಿಯನ್ ಆಗಬೇಕೆನ್ನುವ ಗುರಿ ಹೊಂದಿದ್ದೇನೆ,” ಎಂದು ಸೂರಜ್ ಗೆಲುವಿನ ಬಳಿಕ ನುಡಿದಿದ್ದಾರೆ.
ಸೂರಜ್ ಅವರ ಕೋಚ್ ಇಂದ್ರಜಿತ್ ಕೂಡ ಚಾಂಪಿಯನ್‌ಷಿಪ್ ಗೆದ್ದಿರುವುದಕ್ಕೆ ಸಂಭ್ರಮ ವ್ಯಕ್ತಪಡಿಸಿದ್ದಾರೆ. ಕೆಲವೊಂದು ದೌರ್ಬಲ್ಯಗಳನ್ನು ಹೊಂದಿದ್ದ ಹೊರತಾಗಿಯೂ ಸೂರಜ್, ಎದುರಾಳಿಗೆ ಅವಕಾಶವೇ ನೀಡದೆ ಗೆಲುವು ಸಾಧಿಸಿದ್ದಾರೆ,” ಎಂದು ಹೇಳಿದರು.
ಇದನ್ನೂ ಓದಿ | ಥೈಲ್ಯಾಂಡ್‌ನಲ್ಲಿ ಬಂಗಾರದ ಪದಕ ಗೆದ್ದ ವಿಜಯಪುರದ ಕುಸ್ತಿಪಟು