ನವ ದೆಹಲಿ : ಟೀಮ್ ಇಂಡಿಯಾದ ಅಲ್‌ರೌಂಡರ್ ರವೀಂದ್ರ ಜಡೇಜಾ ಅವರು ಮಂಗಳವಾರ ಮಂಡಿ ನೋವಿಗೆ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದಾರೆ. ತಮಗೆ ಆಪರೇಷನ್ ಆಗಿರುವ ವಿಚಾರವನ್ನು ಅವರು ಇನ್‌ಸ್ಟಾಗ್ರಾಮ್ ಮೂಲಕ ತಿಳಿಸಿದ್ದು, ಶ್ರೀಘ್ರದಲ್ಲಿ ಪುನಶ್ಚೇತನಕ್ಕೆ ಒಳಗಾಗುತ್ತೇನೆ ಎಂದು ಹೇಳಿಕೊಂಡಿದ್ದಾರೆ.
೩೩ ವರ್ಷದ ಬೌಲಿಂಗ್ ಆಲ್‌ರೌಂಡರ್ ಏಷ್ಯಾ ಕಪ್‌ನ ಗುಂಪು ಹಂತದ ಪಂದ್ಯದಲ್ಲಿ ಆಡಿದ್ದರು. ಪಾಕಿಸ್ತಾನ ವಿರುದ್ಧ ಅಮೋಘ ೩೫ ರನ್ ಬಾರಿಸಿ ಗೆಲುವಿನಲ್ಲಿ ಪಾಲ್ಗೊಂಡಿದ್ದರು. ಅಂತೆಯೇ ಹಾಂಕಾಂಗ್ ವಿರುದ್ಧವೂ ಉತ್ತಮ ಪ್ರದರ್ಶನ ನೀಡಿದ್ದರು. ಆದರೆ ಈ ವೇಳೆ ಅವರು ಮಂಡಿ ನೋವಿನ ಸಮಸ್ಯೆ ಎದುರಿಸಿದ್ದರು. ಹೀಗಾಗಿ ಅವರು ಭಾರತಕ್ಕೆ ವಾಪಸಾಗಿ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದಾರೆ.
”ನನ್ನ ಸರ್ಜರಿ ಯಶಸ್ವಿಯಾಗಿ ನಡೆದಿದೆ. ಸಾಕಷ್ಟು ಜನರು ನನಗೆ ಶುಭ ಹಾರೈಸಿದ್ದು, ಅವರೆಲ್ಲರಿಗೂ ಧನ್ಯವಾದಗಳು. ಬಿಸಿಸಿಐ, ತಂಡದ ಸಹ ಆಟಗಾರರು, ಸಹಾಯಕ ಸಿಬ್ಬಂದಿ, ಫಿಸಿಯೊ, ಡಾಕ್ಟರ್‌ಗಳು ಹಾಗೂ ಅಭಿಮಾನಿಗಳಿಗೆ ಧನ್ಯವಾದಗಳು. ಆದಷ್ಟು ಬೇಗ ಪುನಶ್ಚೇತನಕ್ಕೆ ಒಳಗಾಗಿ ಕ್ರಿಕೆಟ್ ಆಡುವೆ,” ಎಂದು ಬರೆದುಕೊಂಡಿದ್ದಾರೆ.
ಜಡೇಜಾ ಅವರಿಗೆ ಆಗಿರುವ ಸರ್ಜರಿ ಗಂಭೀರ ಪ್ರಮಾಣದ್ದಾಗಿದ್ದು, ಅನಿಶ್ಚಿತ ಅವಧಿಯ ತನಕ ಅವರು ವಿಶ್ರಾಂತಿ ಪಡೆಯಬೇಕಾಗಿದೆ. ಹೀಗಾಗಿ ಮುಂದಿನ ಟಿ೨೦ ವಿಶ್ವ ಕಪ್‌ಗೆ ಅವರ ಲಭ್ಯತೆಯೂ ಖಾತರಿಯಿಲ್ಲ.
ಇದನ್ನೂ ಓದಿ |Team India | ನಾಲ್ಕನೇ ಕ್ರಮಾಂಕಲ್ಲಿ ಬ್ಯಾಟ್ ಮಾಡುವ ನಿರೀಕ್ಷೆಯಿತ್ತು ಎಂದ ರವೀಂದ್ರ ಜಡೇಜಾ