ಸ್ಪೇನ್: ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್(Tamil Nadu CM MK Stalin) ಅವರು ಸ್ಪೇನ್‌ಗೆ ತೆರಳುವು ವೇಳೆ ಟೆನಿಸ್ ದಿಗ್ಗಜ, ಸರ್ಬಿಯಾದ ನೊವಾಕ್ ಜೋಕೊವಿಕ್(Novak Djokovic) ಅವರನ್ನು ಭೇಟಿಯಾಗಿದ್ದಾರೆ. ಈ ಫೋಟೊವನ್ನು ಸ್ಟಾಲಿನ್ ತಮ್ಮ ಟ್ವಿಟರ್ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
“ಆಕಾಶದಲ್ಲಿ ಆಶ್ಚರ್ಯ. ಸ್ಪೇನ್‌ಗೆ ಹೋಗುವ ಮಾರ್ಗದಲ್ಲಿ ಟೆನಿಸ್ ದಂತಕಥೆ ನೊವಾಕ್ ಜೊಕೊವಿಕ್ ಅವರನ್ನು ಭೇಟಿಯಾದೆ” ಎಂದು ಎಂಕೆ ಸ್ಟಾಲಿನ್ ತಮ್ಮ ಪೋಸ್ಟ್‌ನಲ್ಲಿ ಬರೆದಿದ್ದಾರೆ. ಜೋಕೊ ಆಸ್ಟ್ರೇಲಿಯಾ ಓಪನ್ ಟೂರ್ನಿ ಮುಗಿಸಿ ತವರಿಗೆ ಹೋಗುತ್ತಿದ್ದ ವೇಳೆ ಸ್ಟಾಲಿನ್ ಕೂಡ ಇದೇ ವಿಮಾನದಲ್ಲಿದ್ದರು. ಹೀಗಾಗಿ ಅಚಾನಕ್ ಆಗಿ ಇವರು ಭೇಟಿಯಾದರು.
Surprise in the skies: Met #Tennis legend @DjokerNole en route to #Spain! 🎾 pic.twitter.com/VoVr3hmk5b
— M.K.Stalin (@mkstalin) January 29, 2024
ಜೋಕೊ ಆಸ್ಟ್ರೇಲಿಯಾ ಓಪನ್ ಸೆಮಿಫೈನಲ್ ಪಂದ್ಯದಲ್ಲಿ ಇಟಲಿಯ 22 ವರ್ಷದ ಜನ್ನಿಕ್ ಸಿನ್ನರ್ ಎದುರು ಸೋತು ಟೂರ್ನಿಯಿಂದ ಹೊರಬಿದ್ದಿದ್ದರು. ಈ ಮೂಲಕ 25ನೇ ಗ್ರ್ಯಾನ್ ಸ್ಲಾಮ್ ಗೆಲ್ಲುವ ಅವರ ಕನಸು ನುಚ್ಚುನೂರಾಗಿತ್ತು.
ಇದನ್ನೂ ಓದಿ Novak Djokovic: ರ‍್ಯಾಕೆಟ್ ಎಸೆದು ದುರ್ವರ್ತನೆ ತೋರಿದ ಜೋಕೊವಿಕ್ಗೆ ಬಿತ್ತು ಭಾರಿ ಮೊತ್ತದ ದಂಡ
ಭಾರತಕ್ಕೆ ಭೇಟಿ ನೀಡಲೇ ಬೇಕು
ಇತ್ತೀಚೆಗೆ ಸೋನಿ ಸ್ಪೋರ್ಟ್ಸ್ ಜತೆಗಿನ ಸಂದರ್ಶನದಲ್ಲಿ ಮಾತನಾಡುವ ವೇಳೆ ಜೋಕೊ ಭಾರತದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದರು. ಜತೆಗೆ ಭಾರತಕ್ಕೆ ಭೇಟಿ ನೀಡಬೇಕೆಂಬ ಆಶಯ ವ್ಯಕ್ತಪಡಿಸಿದ್ದರು. “ನಾನು ಇಲ್ಲಿಯವರೆಗೆ ನನ್ನ ಜೀವನದಲ್ಲಿ ಒಮ್ಮೆ ಮಾತ್ರ ಭಾರತಕ್ಕೆ ಹೋಗಿದ್ದೇನೆ. ಅದು 10 ಅಥವಾ 11 ವರ್ಷಗಳ ಹಿಂದೆ ಎಂದು ನಾನು ಭಾವಿಸುತ್ತೇನೆ. ನಾನು ಎರಡು ದಿನಗಳ ಕಾಲ ನವದೆಹಲಿಯಲ್ಲಿ ನಡೆದಿದ್ದ ಪ್ರದರ್ಶನ ಪಂದ್ಯವನ್ನು ಆಡಲು ಬಂದಿದ್ದೇನೆ. ಅದು ಬಹಳ ಕಡಿಮೆ ಸಮಯವಾಗಿತ್ತು. ಹಾಗಾಗಿ, ನಾನು ಮುಂದಿನ ದಿನಗಳಲ್ಲಿ ಮತ್ತೆ ಭಾರತಕ್ಕೆ ಭೇಟಿ ನೀಡುವೆ. ಏಕೆಂದರೆ ತುಂಬಾ ಇತಿಹಾಸವನ್ನು ಹೊಂದಿರುವ ಸುಂದರ ದೇಶವನ್ನು ಅನ್ವೇಷಿಸುವ ಮಹತ್ತರವಾದ ಆಸೆಯನ್ನು ಹೊಂದಿದ್ದೇನೆ. ಜಗತ್ತಿಗೆ ಮತ್ತು ಆಧ್ಯಾತ್ಮಿಕತೆಗೆ ಮತ್ತು ಸಂಸ್ಕೃತಿಯನ್ನು ನೀಡಿದ ದೇಶ ಭಾರತ. ಈ ದೇಶ ಅದ್ಭುತವಾಗಿದೆ” ಎಂದು ಹೇಳಿದ್ದರು.
ಇದೇ ವೇಳೆ ವಿರಾಟ್ ಕೊಹ್ಲಿಯನ್ನು ನೇರವಾಗಿ ಭೇಟಿಯಾಗಬೇಕೆಂದು ಕೂಡ ಜೋಕೊ ಹೇಳಿದ್ದರು. ಕೊಹ್ಲಿ ಮತ್ತು ನಾನು ಸಾಮಾಜಿಕ ಜಾಲತಾಣದ ಮೂಲಕ ಮಾತುಕತೆ ನಡೆಸುತ್ತಿದ್ದರೂ ಕೂಡ ಪರಸ್ಪರ ಒಮ್ಮೆಯೂ ಭೇಟಿಯಾಗಿಲ್ಲ. ಹೀಗಾಗಿ ಭಾರತ ಭೇಟಿ ವೇಳೆ ಅವರನ್ನು ಮಾತನಾಡಿಸುವ ಎಂದು ಹೇಳಿದ್ದರು.