ಅಹಮದಾಬಾದ್ : ಭಾರತ ಹಾಗೂ ಪ್ರವಾಸಿ ನ್ಯೂಜಿಲ್ಯಾಂಡ್ ವಿರುದ್ಧದ ಮೂರನೇ ಟಿ20 ಪಂದ್ಯ ಬುಧವಾರ ಅಹಮದಾಬಾದ್ನ ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆಯಲಿದೆ. ಮೂರು ಪಂದ್ಯಗಳ ಈ ಸರಣಿಯಲ್ಲಿ ಇತ್ತಂಡಗಳು ತಲಾ ಒಂದು ಪಂದ್ಯ ಗೆದ್ದಿರುವ ಕಾರಣ ಕೊನೇ ಪಂದ್ಯ ಹೆಚ್ಚು ಪೈಪೋಟಿಯಿಂದ ಕೂಡಿರಲಿದೆ. 1 ಲಕ್ಷಕ್ಕೂ ಮಿಕ್ಕಿ ಅಭಿಮಾನಿಗಳನ್ನು ಹೊಂದುವ ಸಾಮರ್ಥ್ಯ ಇರುವ ಈ ಸ್ಟೇಡಿಯಮ್ನಲ್ಲಿ ಭರ್ಜರಿ ಮ್ಯಾಚ್ ನಡೆಯುವುದು ಖಾತರಿ. ಇವೆಲ್ಲದರ ನಡುವೆ ಹಿಂದಿನ ಲಖನೌ ಪಿಚ್ನ ವಿವಾದವನ್ನು ತಣ್ಣಗಾಗಿಸುವ ಪ್ರಯತ್ನವನ್ನು ಭಾರತ ತಂಡದ ಉಪನಾಯಕ ಸೂರ್ಯಕುಮಾರ್ ಮಾಡಿದ್ದಾರೆ. ಪಿಚ್ ಹೇಗಿದ್ದರೂ ಸರಿ ಸ್ಪರ್ಧಾತ್ಮ ಕ್ರಿಕೆಟ್ ನಡೆಯುವುದು ಮುಖ್ಯ ಎಂಬುದಾಗಿ ಹೇಳುವ ಮೂಲಕ ಒಟ್ಟು ಸಮಸ್ಯೆಗೆ ತೆರೆ ಎಳೆಯಲು ಅವರು ಮುಂದಾಗಿದ್ದಾರೆ.
ಲಖನೌ ಪಿಚ್ನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದ ನ್ಯೂಜಿಲ್ಯಾಂಡ್ ತಂಡ 99 ರನ್ಗಳನ್ನು ಪೇರಿಸಿತ್ತು. ಗುರಿ ಬೆನ್ನಟ್ಟಲು ಹೊರಟ ಭಾರತ ತಂಡ ಆ ರನ್ ಗಳಿಸಲು ಪರದಾಡಿ ಕೊನೇ ಎಸೆತ ಬಾಕಿ ಇರುವಾಗ ಜಯ ಗಳಿಸಿತ್ತು. ಇಷ್ಟೊಂದು ಕಠಿಣವಾಗಿರುವ ಪಿಚ್ ಇಟ್ಟಿರುವ ಬಗ್ಗೆ ಭಾರತ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಅಸಮಧಾನ ವ್ಯಕ್ತಪಡಿಸಿದ್ದರು. ಆ ಬಳಿಕ ಪಿಚ್ ಕ್ಯುರೇಟರ್ ಅನ್ನು ವಜಾಗೊಳಿಸಲಾಗಿತ್ತು.
ಈ ವಿವಾದದ ಕುರಿತು ಮಾತನಾಡಿರುವ ಸೂರ್ಯಕುಮಾರ್ ಯಾದವ್, ಯಾವ ರೀತಿಯ ಪಿಚ್ ಇರುತ್ತದೆ ಎಂಬುದು ನಮಗೆ ವಿಷಯವಲ್ಲ. ಸ್ಪರ್ಧಾತ್ಮಕ ಕ್ರಿಕೆಟ್ ನಡೆಯಬೇಕು ಎಂಬುದೇ ನನ್ನ ಅಭಿಪ್ರಾಯ. ಆ ಪಿಚ್ಗೆ ಹೊಂದಾಣಿಕೆ ಮಾಡಿಕೊಂಡು ಆಡಬೇಕಾಗಿದೆ. ಈ ಮೂಲಕವೂ ಆ ಪಂದ್ಯ ರೋಚಕವಾಗಿರುತ್ತದೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ | Suryakumar Yadav | ಯುಪಿ ಸಿಎಂ ಯೋಗಿ ಆದಿತ್ಯನಾಥ್ ಭೇಟಿ ಮಾಡಿದ ಸೂರ್ಯಕುಮಾರ್ ಯಾದವ್
ಟೆಸ್ಟ್ ಆಗಲಿ, ಏಕ ದಿ ಪಂದ್ಯವಾಗಲಿ ಅಥವಾ ಟಿ 20 ಪಂದ್ಯವೇ ಆಗಲಿ. ಸ್ಪರ್ಧಾತ್ಮಕ ವಿಕೆಟ್ ಇಡುವುದರಿಂದ ಯಾವುದೇ ತೊಂದರೆ ಇಲ್ಲ. ಅಲ್ಲಿನ ಸವಾಲುಗಳನ್ನು ಸ್ವೀಕರಿಸಲೇಬೇಕು ಎಂಬದಾಗಿ ಅವರು ಹೇಳಿದ್ದಾರೆ.