Site icon Vistara News

WTC 2023 : ಮೀಸಲು ಆಟಗಾರರ ಪಟ್ಟಿಯಲ್ಲೂ ಸೂರ್ಯಕುಮಾರ್​ಗೆ ಸಿಗಲಿಲ್ಲ ಚಾನ್ಸ್​!

Suryakumar didn't get a chance in the reserve player's list either!

#image_title

ಮುಂಬಯಿ: ಐಪಿಎಲ್​ ಮುಕ್ತಾಯಗೊಂಡ ತಕ್ಷಣ ಭಾರತ ಕ್ರಿಕೆಟ್ ತಂಡ ನೇರವಾಗಿ ಇಂಗ್ಲೆಂಡ್ ವಿಮಾನ ಏರಲಿದೆ. ಅಲ್ಲಿ ನಡೆಯಲಿರುವ ವಿಶ್ವ ಟೆಸ್ಟ್​ ಚಾಂಪಿಯನ್​ಷಿಪ್​ (WTC 2023) ಫೈನಲ್​ನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಸೆಣಸಾಡಬೇಕಾಗಿದೆ. ಈ ಟೆಸ್ಟ್​ ಪಂದ್ಯಕ್ಕೆ 15 ಆಟಗಾರರು ಇರುವ ತಂಡವನ್ನು ಬಿಸಿಸಿಐ ಮೂರು ದಿನದ ಹಿಂದೆ ಪ್ರಕಟಿಸಿತ್ತು. ಈ ವೇಳೆ ಸೂರ್ಯಕುಮಾರ್​ ಅವರನ್ನು ತಂಡದಿಂದ ಕೈಬಿಟ್ಟು ಅಜಿಂಕ್ಯ ರಹಾನೆ ಅವರನ್ನು ಆಯ್ಕೆ ಮಾಡಿದ್ದಕ್ಕೆ ಟೀಕೆಗಳು ವ್ಯಕ್ತಗೊಂಡಿದ್ದವು. ಇದೀಗ ಮೀಸಲು ಆಟಗಾರರ ಪಟ್ಟಿಯನ್ನೂ ಬಿಸಿಸಿಐ ಬಿಡುಗಡೆ ಮಾಡಿದ್ದು ಅದರಲ್ಲೂ ಸ್ಫೋಟಕ ಬ್ಯಾಟರ್​ ಅವಕಾಶ ಪಡೆಯದೇ ಅಚ್ಚರಿ ಮೂಡಿಸಿದ್ದಾರೆ.

ಜೂನ್‌ 7ರಿಂದ 11ರವರೆಗೆ ದಿ ಕೆನಿಂಗ್ಟನ್​ ಓವಲ್ ಕ್ರೀಡಾಂಗಣದಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆಯಲಿರುವ ಫೈನಲ್‌ ಪಂದ್ಯಕ್ಕೆ ಮೊದಲು ಗಾಯದ ಸಮಸ್ಯೆ ಸೇರಿದಂತೆ ನಾನಾ ಕಾರಣಗಳಿಗೆ ಆಟಗಾರರ ಅಲಭ್ಯತೆಯ ಅಂದಾಜು ಮಾಡಿರುವ ಬಿಸಿಸಿಐ ಐವರು ಕಾಯ್ದಿರಿಸಿದ ಆಟಗಾರರನ್ನೂ ಆಯ್ಕೆ ಮಾಡಿಕೊಂಡಿದೆ. ಬಿಸಿಸಿಐ ಆಯ್ಕೆ ಮಾಡಿರುವ ಆಟಗಾರರ ಪಟ್ಟಿಯಲ್ಲಿ ಮಹಾರಾಷ್ಟ್ರದ ಋತುರಾಜ್ ಗಾಯಕ್ವಾಡ್‌, ಮುಂಬೈನ ಸರ್ಫರಾಜ್​ ಖಾನ್‌, ಜಾರ್ಖಂಡ್‌ನ ವಿಕೆಟ್‌ಕೀಪರ್‌ ಬ್ಯಾಟರ್‌ ಇಶಾನ್ ಕಿಶನ್‌, ಬಂಗಾಳದ ವೇಗಿ ಮುಖೇಶ್‌ ಕುಮಾರ್‌ ಹಾಗೂ ಡೆಲ್ಲಿ ತಂಡದ ವೇಗಿ ನವದೀಪ್‌ ಸೈನಿ ಸ್ಥಾನ ಪಡೆದುಕೊಂಡಿದ್ದಾರೆ.

ಪ್ರತಿಭಾವಂತ ಬ್ಯಾಟರ್​ಗಳಾದ ಋತುರಾಜ್‌ ಗಾಯಕ್ವಾಡ್‌ ಮತ್ತು ಸರ್ಫರಾಜ್​ ಖಾನ್‌ ಈವರೆಗೆ ಭಾರತ ತಂಡದ ಪರ ಟೆಸ್ಟ್‌ ಕ್ರಿಕೆಟ್‌ ಆಡಿಲ್ಲ. ಇಶಾನ್‌ ಕಿಶನ್‌ ಮಾರ್ಚ್‌ನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್‌ ಸರಣಿಯಲ್ಲಿ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದರು. ಆದರೆ, ಆಡುವ 11ರ ಬಳಗದಲ್ಲಿ ಅವಕಾಶ ಪಡೆದುಕೊಂಡಿರಲಿಲ್ಲ. ಮುಕೇಶ್​ ಕುಮಾರ್​ ಹಾಗೂ ಸೈನಿಯೂ ಆಡುವ 11ರ ಬಳಗದಲ್ಲಿ ಇದುವರೆಗೂ ಅವಕಾಶ ಪಡೆದುಕೊಂಡಿರಲಿಲ್ಲ.

ಸೂರ್ಯನಿಗೆ ಯಾಕಿಲ್ಲ ಚಾನ್ಸ್​?

ಟಿ20 ಕ್ರಿಕೆಟ್‌ನಲ್ಲಿ ನಂ.1 ಬ್ಯಾಟ್ಸ್‌ಮನ್‌ ಆಗಿರುವ ಸೂರ್ಯಕುಮಾರ್‌ ಯಾದವ್‌, ಭಾರತ ಟೆಸ್ಟ್‌ ತಂಡದಿಂದ ಸ್ಥಾನ ಕಳೆದುಕೊಂಡಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಸರಣಿಯ ಮೊದಲ ಪಂದ್ಯದಲ್ಲಿ ಆಡಿದ್ದ ಸೂರ್ಯ, ಕೇವಲ 8 ರನ್‌ ಗಳಿಸಿ ಔಟಾಗಿದ್ದರು. ಟಿ20ಯಲ್ಲಿ ಉತ್ತಮ ಬ್ಯಾಟರ್​ ಆಗಿರುವ ಹೊರತಾಗಿಯೂ ಅವರು ಟೆಸ್ಟ್​ ಮಾದರಿಯಲ್ಲಿ ಉತ್ತಮ ಭರವಸೆ ಮೂಡಿಸಿಲ್ಲ. ಅದೇ ರೀತಿ ಇತ್ತೀಚಿನ ದಿನಗಳಲ್ಲಿ ಪ್ರದರ್ಶನ ವೈಫಲ್ಯ ಎದುರಿಸುತ್ತಿದ್ದಾರೆ. ಹಾಲಿ ಆವೃತ್ತಿಯ ಐಪಿಎಲ್​ನಲ್ಲೂ ಹೇಳಿಕೊಳ್ಳುವಂಥ ಪ್ರದರ್ಶನ ನೀಡುತ್ತಿಲ್ಲ. ವಿದೇಶಿ ಪಿಚ್​​ನಲ್ಲಿ ಟೆಸ್ಟ್​ ಆಡಬೇಕಾದರೆ ಸಂಯಮ ಬೇಕು. ಹೀಗಾಗಿ ಇಂಥ ಕಂಡೀಷನ್​ನಲ್ಲಿ ಚೆನ್ನಾಗಿ ಆಡುವ ಅಜಿಂಕ್ಯ ರಹಾನೆಗೆ ಅವಕಾಶ ನೀಡಲಾಗಿದೆ.

ಇದನ್ನೂ ಓದಿ : ICC T20 Ranking: ನಂ.1 ಸ್ಥಾನ ಉಳಿಸಿಕೊಂಡ ಸೂರ್ಯಕುಮಾರ್​ ಯಾದವ್​

ಸೂರ್ಯಕುಮಾರ್​ ಯಾದವ್​ ಆಸ್ಟ್ರೇಲಿಯಾ ವಿರುದ್ಧದ ತವರಿಗೆ ಏಕದಿನ ಸರಣಿಯಲ್ಲಿ ಮೂರು ಬಾರಿ ಶೂನ್ಯಕ್ಕೆ ಔಟಾಗಿದ್ದರು. ಇದೇ ವೇಳೆ ಕಳೆದ ಆವೃತ್ತಿಯ ರಣಜಿ ಟೂರ್ನಿಯಲ್ಲಿ ಮುಂಬಯಿ ತಂಡದ ಸರ್ಫರಾಜ್​ ಖಾನ್​ ಅತ್ಯುತ್ತಮ ಪ್ರದರ್ಶನ ನೀಡಿದ್ದರು. 15ರ ಬಳಗದಲ್ಲಿ ಅವಕಾಶ ನೀಡಿರುವುದಕ್ಕೆ ಆಯ್ಕೆಗಾರರು ಟೀಕೆಗೆ ಒಳಗಾಗಿದ್ದರು. ಹೀಗಾಗಿ ಮೀಸಲು ಆಟಗಾರರ ಪಟ್ಟಿಯಲ್ಲಿ ಸೂರ್ಯನ ಬದಲಿಗೆ ಅವರಿಗೆ ಅವಕಾಶ ಕೊಡಲಾಗಿದೆ.

Exit mobile version