Site icon Vistara News

T20 World Cup | ಐಸಿಸಿ ಸ್ಫೋಟಕ ಬ್ಯಾಟರ್‌ಗಳ ಪಟ್ಟಿಯಲ್ಲಿ ಸೂರ್ಯಕುಮಾರ್‌ಗೆ ಅಗ್ರ ಸ್ಥಾನ

ICC RANKING

ಮೆಲ್ಬೋರ್ನ್‌: ಟಿ೨೦ ವಿಶ್ವ ಕಪ್‌ ಭಾನುವಾರ (ಅಕ್ಟೋಬರ್‌ ೧೬ರಂದು) ಆರಂಭವಾಗಲಿದ್ದು, ೧೬ ತಂಡಗಳು ಪ್ರಶಸ್ತಿಗಾಗಿ ಸೆಣಸಾಟ ನಡೆಸಲಿವೆ. ಮೊದಲ ಹಂತದಲ್ಲಿ ಅರ್ಹತಾ ಸುತ್ತಿನ ಪಂದ್ಯಗಳು ನಡೆಯಲಿದ್ದು ಬಳಿಕ ಪ್ರಮುಖ ಸುತ್ತಿನ ಗುಂಪು ಹಂತದ ಪಂದ್ಯಗಳು ನಡೆಯಲಿವೆ. ಈ ಬೃಹತ್ ಕೂಟಕ್ಕೆ ಅಂತಾರಾಷ್ಟ್ರೀಯ ಕ್ರಿಕೆಟ್‌ ಸಮಿತಿ ಸಾಕಷ್ಟು ಸಿದ್ಧತೆಗಳನ್ನು ನಡೆಸಿಕೊಂಡು ಬಂದಿದೆ. ಈ ಹಿನ್ನೆಲೆಯಲ್ಲಿ ಟೂರ್ನಿಯಲ್ಲಿ ಪಾಲ್ಗೊಳ್ಳುವ ಸ್ಫೋಟಕ ಬ್ಯಾಟ್ಸ್‌ಮನ್‌ಗಳ ಪಟ್ಟಿಯೊಂದನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸಿದ್ದು, ಅದರಲ್ಲಿ ಟೀಮ್‌ ಇಂಡಿಯಾದ ಬ್ಯಾಟರ್‌ ಸೂರ್ಯಕುಮಾರ್‌ ಯಾದವ್‌ ಮೊದಲು ಸ್ಥಾನ ಪಡೆದುಕೊಂಡಿದ್ದಾರೆ.

ಸೂರ್ಯಕುಮಾರ್ ಯಾದವ್‌ ಅವರು ಭಾರತ ತಂಡದ ಮಧ್ಯಮ ಕ್ರಮಾಂಕದ ಬ್ಯಾಟರ್‌ ಆಗಿದ್ದು, ಟಿ೨೦ ಮಾದರಿಯಲ್ಲಿ ೧೭೬. ೮೧ ಸ್ಟ್ರೈಕ್‌ ರೇಟ್ ಹೊಂದಿದ್ದಾರೆ. ಹೀಗಾಗಿ ಅವರಿಗೆ ಐಸಿಸಿ ಮೊದಲ ಸ್ಥಾನ ನೀಡಿದೆ. ಅವರು ಈವರೆಗೆ ೩೪ ಟಿ೨೦ ಪಂದ್ಯಗಳಲ್ಲಿ ಪಾಲ್ಗೊಂಡಿದ್ದಾರೆ. ೩೨ ವರ್ಷದ ಈ ಆಟಗಾರ ೩೮.೭೦ ರನ್‌ ಸರಾಸರಿಯನ್ನೂ ಹೊಂದಿದ್ದಾರೆ.

ಎರಡನೇ ಸ್ಥಾನವನ್ನು ನ್ಯೂಜಿಲೆಂಡ್‌ ತಂಡದ ಜಿಮ್ಮಿ ನೀಶಾಮ್‌ ಹೊಂದಿದ್ದಾರೆ. ಅವರು ೫೩ ಟಿ೨೦ ಪಂದ್ಯಗಳಲ್ಲಿ ೧೬೩.೬೫ ಸ್ಟ್ರೈಕ್‌ ರೇಟ್‌ನಲ್ಲಿ ಬ್ಯಾಟ್‌ ಮಾಡಿದ್ದಾರೆ. ಅಲ್ಲದೆ, ಅಂತಾರಾಷ್ಟ್ರೀಯ ಟೂರ್ನಿಗಳಲ್ಲಿ ಉತ್ತಮ ಪ್ರದರ್ಶನ ನೀಡಿದ ಹಿನ್ನೆಲೆ ಅವರಿಗಿದೆ.

ಮೂರನೇ ಸ್ಥಾನವನ್ನು ನ್ಯೂಜಿಲೆಂಡ್‌ನ ಫಿನ್ ಅಲೆನ್‌ ಅವರು ಹೊಂದಿದ್ದಾರೆ. ಅವರು ೧೮ ಟಿ೨೦ ಪಂದ್ಯಗಳಲ್ಲಿ ೧೬೧.೭೨ ಸ್ಟ್ರೈಕ್‌ರೇಟ್‌ನಂತೆ ೪೬೯ ರನ್ ಕಲೆ ಹಾಕಿದ್ದಾರೆ. ೨೩ ವರ್ಷದ ಅವರು ಬೌಂಡರಿ ಹಾಗೂ ಸಿಕ್ಸರ್‌ಗಳನ್ನು ಬಾರಿಸುವುದರಲ್ಲಿ ನಿಸ್ಸೀಮರು.

ಸಿಂಗಾಪುರ ಮೂಲದ ಆಸ್ಟ್ರೇಲಿಯಾ ತಂಡದ ಆಟಗಾರ ಟಿಮ್‌ ಡೇವಿಡ್‌ ೧೬೦.೦೮ ಸ್ಟ್ರೈಕ್‌ರೇಟ್‌ ಪ್ರಕಾರ ಟಿ೨೦ ಮಾದರಿಯಲ್ಲಿ ಆಡಿದ್ದಾರೆ. ಅವರಿಗೆ ಸ್ಫೋಟಕ ಬ್ಯಾಟರ್‌ಗಳ ಪಟ್ಟಿಯಲ್ಲಿ ನಾಲ್ಕನೇ ಸ್ಥಾನ ನೀಡಲಾಗಿದೆ. ಅವರು ಸಿಂಗಾಪುರ ತಂಡದ ಪರವಾಗಿ ಆಡುವಾಗ ೧೬೫.೯೫ ಸ್ಟ್ರೈಕ್‌ರೇಟ್‌ ಹೊಂದಿದ್ದರು.

ವೆಸ್ಟ್‌ ಇಂಡೀಸ್‌ನ ಎವಿನ್‌ ಲೂಯಿಸ್‌ ಅವರು ೧೫೫.೫೧ ಸ್ಟ್ರೈಕ್‌ರೇಟ್‌ ಪ್ರಕಾರ ಟಿ೨೦ ಮಾದರಿಯಲ್ಲಿ ಬ್ಯಾಟ್‌ ಮಾಡಿದ್ದಾರೆ. ಫೋರ್‌ಗಳಿಗಿಂತ ಹೆಚ್ಚಾಗಿ ಸಿಕ್ಸರ್‌ಗಳನ್ನೇ ಬಾರಿಸುವ ಲೂಯಿಸ್‌ ವಿಂಡೀಸ್‌ ಗೆಲುವಿನ ರೂವಾರಿ ಎನಿಸಿಕೊಂಡಿದ್ದಾರೆ. ಇವರು ಪಟ್ಟಿಯಲ್ಲಿ ಐದನೇ ಸ್ಥಾನ ಪಡೆದುಕೊಂಡಿದ್ದಾರೆ.

ಆರನೇ ಸ್ಥಾನ ದಕ್ಷಿಣ ಆಫ್ರಿಕಾ ತಂಡದ ರೀಲಿ ರೊಸ್ಸೊ ಪಡೆದುಕೊಂಡಿದ್ದಾರೆ. ಅವರು ೨೧ ಟಿ೨೦ ಹಣಾಹಣಿಗಳಲ್ಲಿ ೧೫೨. ೮೭ ಸ್ಟ್ರೈಕ್‌ರೇಟ್‌ನಂತೆ ಬ್ಯಾಟ್‌ ಮಾಡಿದ್ದಾರೆ.. ೩೩ ವರ್ಷದ ಈ ಬ್ಯಾಟರ್‌ ೩೭.೨೦ ಸರಾಸರಿಯಂತೆ ಬ್ಯಾಟ್ ಮಾಡಿದ್ದಾರೆ.

ದಕ್ಷಿಣ ಆಫ್ರಿಕಾ ತಂಡದ ಏಡೆನ್‌ ಮಾರ್ಕ್ರಮ್‌ ಹಾಗೂ ಆಸ್ಟ್ರೇಲಿಯಾದ ಗ್ಲೆನ್‌ ಮ್ಯಾಕ್ಸ್‌ವೆಲ್‌ ನಂತರದ ಸ್ಥಾನಗಳನ್ನು ಪಡೆದುಕೊಂಡಿದ್ದಾರೆ.

ಇದನ್ನೂ ಓದಿ | T20 World Cup | ಈ ಆಟಗಾರರಿಗೆ ಇದು ಕೊನೆಯ ಟಿ20 ವಿಶ್ವ ಕಪ್​ ಸಾಧ್ಯತೆ, ಯಾರೆಲ್ಲ ಅವರು?

Exit mobile version