Site icon Vistara News

IND vs AUS: ಸೂರ್ಯಕುಮಾರ್ ತೂಫಾನ್‌ ಬ್ಯಾಟಿಂಗ್​ಗೆ ವಿರಾಟ್​ ಕೊಹ್ಲಿ ದಾಖಲೆ ಉಡೀಸ್​​

suryakumar yadav batting style

ಇಂದೋರ್​: ಆಸ್ಟ್ರೇಲಿಯಾ(IND vs AUS) ವಿರುದ್ಧ ಭಾನುವಾರ ನಡೆದ ದ್ವಿತೀಯ ಏಕದಿನ ಪಂದ್ಯದಲ್ಲಿ ಸಿಡಿಲಬ್ಬರದ ಬ್ಯಾಟಿಂಗ್​ ನಡೆಸಿ ಆಕರ್ಷಕ ಅರ್ಧಶತಕ ಬಾರಿಸಿದ ಸೂರ್ಯಕುಮಾರ್​ ಯಾದವ್(Suryakumar Yadav)​, ಕಿಂಗ್​ ಖ್ಯಾತಿಯ ವಿರಾಟ್​ ಕೊಹ್ಲಿಯ(Virat Kohli) ದಾಖಲೆಯೊಂದನ್ನು ಮುರಿದಿದ್ದಾರೆ.

ಇಂದೋರ್​ನ ಹೋಳ್ಳರ್​ ಸ್ಟೇಡಿಯಂನಲ್ಲಿ ರನ್​ ಮಳೆಯನ್ನೇ ಸುರಿಸಿದ ಸೂರ್ಯಕುಮಾರ್​ ಯಾದವ್​ ಆಸೀಸ್​ ಬೌಲರ್​ಗಳನ್ನು ಮನಬಂದಂತೆ ದಂಡಿಸಿದರು. ಅದರಲ್ಲೂ ಕ್ಯಾಮರೂನ್​ ಗ್ರೀನ್​ ಅವರಿಗೆ ಸತತ ನಾಲ್ಕು ಸಿಕ್ಸರ್​ ರುಚಿ ತೋರಿಸಿದರು. ನಟರಾಜ ಭಂಗಿಯಲ್ಲಿ ಬ್ಯಾಟ್​ ಬೀಸಿದ ಅವರು ಕೇವಲ 24 ಎಸೆದಲ್ಲಿ ಅರ್ಧಶತಕ ಪೂರ್ತಿಗೊಳಿಸಿದರು. ಇದೇ ವೇಳೆ ಕೊಹ್ಲಿಯ ದಾಖಲೆ ಪತನಗೊಂಡಿತು.

ಕೊಹ್ಲಿ ದಾಖಲೆ ಪತನ

ಆಸ್ಟ್ರೇಲಿಯಾ ವಿರುದ್ಧ ಅತಿ ವೇಗವಾಗಿ ಏಕದಿನದಲ್ಲಿ ಅರ್ಧಶತಕ ಬಾರಿಸಿದ ದಾಖಲೆ ಇದುವರೆಗೆ ವಿರಾಟ್​ ಕೊಹ್ಲಿಯ ಹೆಸರಿನಲ್ಲಿತ್ತು. ಕೊಹ್ಲಿ 2013 ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಕೇವಲ 27 ಎಸೆತಗಳಲ್ಲಿ ಅರ್ಧಶತಕ ಸಿಡಿಸಿ ಈ ದಾಖಲೆ ನಿರ್ಮಿಸಿದ್ದರು. ಆದರೆ ಇದೀಗ ಸೂರ್ಯಕುಮಾರ್​ ಅವರು 24 ಎಸೆತದಲ್ಲಿ ಈ ಮೈಲಿಗಲ್ಲು ತಲುಪಿ ಕೊಹ್ಲಿಯನ್ನು ಹಿಂದಿಕ್ಕಿದ್ದಾರೆ.

ಈ ಹಿಂದಿನ ಆಸೀಸ್​ ವಿರುದ್ಧದ ಏಕದಿನ ಸರಣಿಯಲ್ಲಿ ಹ್ಯಾಟ್ರಿಕ್​ ಗೋಲ್ಡನ್​ ಡಕ್​ ಸಂಕಟಕ್ಕೆ ಸಿಲುಕಿ ಎಲ್ಲಡೆ ಟೀಕೆಗೆ ಒಳಗಾಗಿದ್ದ ಸೂರ್ಯಕುಮಾರ್​ ಈ ಸರಣಿಯಲ್ಲಿ ಉತ್ತಮ ಬ್ಯಾಟಿಂಗ್​ ಪ್ರದರ್ಶನ ತೋರಿದರು. ಕೊನೆಯ ತನಕ ನಿಂತು ಉತ್ತಮ ಆಡವಾಡಿ ತಂಡದ ಬೃಹತ್​ ಮೊತ್ತಕ್ಕೆ ಕಾರಣರಾದರು. ತಲಾ 6 ಸಿಕ್ಸರ್​ ಮತ್ತು ಬೌಂಡರಿ ಸಿಡಿಸಿ ಅಜೇಯ 72 ರನ್​ ಗಳಿಸಿದರು. ರಾಹುಲ್​ ಮತ್ತು ಸೂರ್ಯ ಸೇರಿಕೊಂಡು 5ನೇ ವಿಕೆಟ್​ಗೆ 53 ರನ್​ ಜತೆಯಾಟ ನಡೆಸಿದರು.

ಇದನ್ನೂ ಓದಿ Ishan Kishan: ಇಶಾನ್‌ ಕಿಶನ್‌ ನ್ಯೂ ಹೇರ್‌ಸ್ಟೈಲ್‌; ಮುಳ್ಳು ಹಂದಿಗೆ ಹೋಲಿಸಿದ ಸೂರ್ಯಕುಮಾರ್‌ ಪತ್ನಿ

ಪಂದ್ಯ ಗೆದ್ದ ಭಾರತ

ಅನುಭವಿ ಆಟಗಾರರ ಅನುಪಸ್ಥಿತಿಯ ಹೊರತಾಗಿಯೂ ಬಲಿಷ್ಠ ಆಸ್ಟ್ರೇಲಿಯಾ(IND vs AUS) ವಿರುದ್ಧದ ದ್ವಿತೀಯ ಏಕದಿನ ಪಂದ್ಯದಲ್ಲಿ ಕನ್ನಡಿಗ ಕೆ.ಎಲ್​ ರಾಹುಲ್​ ಸಾರಥ್ಯದ ಭಾರತ ತಂಡ (India vs Australia, 2nd ODI) 99 ರನ್​ಗಳ ಗೆಲುವು ಸಾಧಿಸಿತು. ಈ ಗೆಲುವಿನೊಂದಿಗೆ ಮೂರು ಪಂದ್ಯಗಳ ಸರಣಿಯಲ್ಲಿ ಭಾರತ 2-0 ಮುನ್ನಡೆ ಸಾಧಿಸಿ ಇನ್ನೊಂದು ಪಂದ್ಯ ಬಾಕಿ ಇರುವಂತೆಯೇ ಸರಣಿಯನ್ನು ವಶಪಡಿಸಿಕೊಂಡಿತು. ಜತೆಗೆ ವಿಶ್ವಕಪ್‌ಗೂ ಮುನ್ನ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿದೆ. ಸರಣಿಯ ಅಂತಿಮ ಪಂದ್ಯ ಬುಧವಾರ ರಾಜ್‌ಕೋಟ್‌ನಲ್ಲಿ ನಡೆಯಲಿದೆ.

ಇಂದೋರ್​ನ ಹೋಲ್ಕರ್​ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್​ ಸೋತು ಬ್ಯಾಟಿಂಗ್​ಗೆ ಇಳಿಸಲ್ಪಟ್ಟ ಭಾರತ ಶ್ರೇಯಸ್​ ಅಯ್ಯರ್(105)​ ಮತ್ತು ಶುಭಮನ್​ ಗಿಲ್(104)​ ಅವರ ಆಕರ್ಷಕ ಶತಕ, ಆ ಬಳಿಕ ನಾಯಕ ಕೆ.ಎಲ್​ ರಾಹುಲ್(52) ಹಾಗೂ ಸೂರ್ಯಕುಮಾರ್​ ಯಾದವ್​(72*)​ ಅವರ ಅರ್ಧಶತಕದ ನೆರವಿನಿಂದ ನಿಗದಿತ 50 ಓವರ್​ಗಳಲ್ಲಿ 5 ವಿಕೆಟ್​ ನಷ್ಟಕ್ಕೆ 399 ರನ್​ ಪೇರಿಸಿ ಸವಾಲೊಡ್ಡಿತು. ಆಸೀಸ್​ ಬೃಹತ್​ ಮೊತ್ತವನ್ನು ಬೆನ್ನಟ್ಟುವ​​ ವೇಳೆ ಪಂದ್ಯಕ್ಕೆ ಮಳೆಯಿಂದ ಹಲವು ಬಾರಿ ಅಡಚಣೆಯಾಗಿತು. ಹೀಗಾಗಿ ಡಕ್ವರ್ತ್-ಲೂಯಿಸ್ ನಿಯಮವನ್ನು ಜಾರಿಗೆ ತರಲಾಯಿತು. ಅದರಂತೆ ಈ ನಿಯಮದನ್ವಯ ಆಸೀಸ್​ ತಂಡಕ್ಕೆ 33 ಓವರ್​ಗಳಲ್ಲಿ 317 ರನ್​ಗಳ ಗುರಿ ನೀಡಲಾಯಿತು. ಆದರೆ ಆಸೀಸ್​ 28.2 ಓವರ್​ಗಳಲ್ಲಿ 217 ರನ್​ಗಳಿಗೆ ಸರ್ವ ಪತನ ಕಂಡು ಹೀನಾಯ ಸೋಲು ಅನುಭವಿಸಿತು.

Exit mobile version