Site icon Vistara News

IPL 2024: ಐಪಿಎಲ್​ನ ಆರಂಭಿಕ 2 ಪಂದ್ಯಕ್ಕೆ ಸೂರ್ಯಕುಮಾರ್ ಅಲಭ್ಯ!

Suryakumar Yadav

ಮುಂಬಯಿ: ಟೀಮ್​ ಇಂಡಿಯಾದ ಹಾರ್ಡ್​ ಹಿಟ್ಟರ್​ ಸೂರ್ಯಕುಮಾರ್​ ಯಾದವ್​(Suryakumar Yadav) ಅವರು ಐಪಿಎಲ್​ನ(IPL 2024) ಆರಂಭಿಕ 2 ಪಂದ್ಯಗಳಿಗೆ ಅಲಭ್ಯರಾಗುವ ಸಾಧ್ಯತೆ ಇದೆ. ಮಂಡಿ ಶಸ್ತ್ರಚಿಕಿತ್ಸೆಗೆ ಒಳಗಾಗಿ ಚೇತರಿಕೆ ಕಂಡಿರುವ ಸೂರ್ಯ ಸದ್ಯ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್‌ ಅಕಾಡೆಮಿಯಲ್ಲಿ ಪುನಶ್ಚೇತನ ಶಿಬಿರದಲ್ಲಿದ್ದಾರೆ. ಶೀಘ್ರದಲ್ಲೇ ಸಂಪೂರ್ಣ ಫಿಟ್‌ ಆಗುವ ನಿರೀಕ್ಷೆಯಿದ್ದರೂ ಆರಂಭಿಕ 2 ಪಂದ್ಯಗಳಿಗೆ ಲಭ್ಯವಿರುತ್ತಾರೊ ಇಲ್ಲವೊ ಎಂಬುದು ಇನ್ನೂ ಖಚಿತವಾಗಿಲ್ಲ ಎಂದು ಬಿಸಿಸಿಐ(BCCI ) ಮೂಲಗಳು ತಿಳಿಸಿದ್ದಾಗಿ ವರದಿಯಾಗಿದೆ. ಹೀಗಾಗಿ ಅವರು ಮೊದಲೆರಡು ಪಂದ್ಯಗಳಿಗೆ ಅಲಭ್ಯರಾಗುವುದು ಬಹುತೇಕ ಖಚಿತವಾದಂತಿದೆ.

2 ದಿನಗಳ ಹಿಂದಷ್ಟೇ ಬಿಸಿಸಿಐ ಕಾರು ಅಪಘಾತದಲ್ಲಿ ಗಾಯಗೊಂಡು 14 ತಿಂಗಳಿನಿಂದ ಕ್ರಿಕೆಟ್​ನಿಂದ ದೂರ ಉಳಿದಿದ್ದ ರಿಷಭ್​ ಪಂತ್​ ಫೀಟ್​ ಆಗಿರುವ ಕಾರಣ ಐಪಿಎಲ್​ ಆಡಲು ಅನುಮತಿ ನೀಡಿತ್ತು. ಶಮಿ ಮತ್ತು ಪ್ರಸಿದ್ಧ್​ ಕೃಷ್ಣಗೆ ಅವಕಾಶ ನೀಡಿರಲಿಲ್ಲ. ಸೂರ್ಯಕುಮಾರ್​ ವಿಚಾರದಲ್ಲಿಯೂ ಕಾದು ನೋಡುವ ತಂತ್ರ ರೂಪಿಸಿತ್ತು. ಇದೀಗ ಬಿಸಿಸಿಐ ಮೂಲಗಳು ನೀಡಿದ ಮಾಹಿತಿ ಪ್ರಕಾರ ಸೂರ್ಯಕುಮಾರ್​ ಇನ್ನೂ ಫಿಟ್​ ಆಗಿಲ್ಲ ಎನ್ನುವುದು ತಿಳಿದುಬಂದಿದೆ.

5 ಬಾರಿ ಚಾಂಪಿಯನ್‌ ಮುಂಬೈ ಇಂಡಿಯನ್ಸ್‌ ತಂಡ ಈ ಬಾರಿ ಟೂರ್ನಿಯಲ್ಲಿ ಕಳೆದ ಬಾರಿಯ ರನ್ನರ್‌-ಅಪ್‌ ಗುಜರಾತ್‌ ಟೈಟಾನ್ಸ್‌ ವಿರುದ್ಧ ಆಡುವ ಮೂಲಕ ಅಭಿಯಾನ ಆರಂಭಿಸಲಿದೆ. ಈ ಪಂದ್ಯ ಮಾರ್ಚ್ 24ರಂದು ಅಹಮದಾಬಾದ್​ನ ನರೇಂದ್ರ ಮೋದಿ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆಯಲಿದೆ. ದ್ವಿತೀಯ ಪಂದ್ಯವನ್ನು ಮಾರ್ಚ್​ 27ರಂದು ಸನ್‌ರೈಸರ್ಸ್‌ ಹೈದರಾಬಾದ್ ವಿರುದ್ಧ ಸೆಣಸಾಡಲಿದೆ.

ಇದನ್ನೂ ಓದಿ IPL 2024: ಅಜ್ಜಿಯನ್ನು ಕಳೆದುಕೊಂಡ ದುಖಃದಲ್ಲಿ ಐಪಿಎಲ್​ನಿಂದ ಹಿಂದೆ ಸರಿದ ಡೆಲ್ಲಿ ತಂಡದ ಸ್ಟಾರ್​ ಬ್ಯಾಟರ್​

ಸೂರ್ಯಕುಮಾರ್‌ ಈ ವರೆಗೂ 60 ಟಿ20 ಪಂದ್ಯಗಳನ್ನಾಡಿದ್ದು, 171+ ಸ್ಟ್ರೈಕ್‌ರೇಟ್‌ನೊಂದಿಗೆ 2141 ರನ್‌ ಕಲೆಹಾಕಿದ್ದಾರೆ. ಅಂತಾರಾಷ್ಟ್ರೀಯ ಟಿ20ಯಲ್ಲಿ ಅವರು 4 ಶತಕಗಳನ್ನೂ ಬಾರಿಸಿದ್ದಾರೆ. ಟಿ20 ಬ್ಯಾಟಿಂಗ್​ ಶ್ರೇಯಾಂಕದಲ್ಲಿಯೂ ಸೂರ್ಯ ನಂ.1 ಸ್ಥಾನ ಪಡೆದಿದ್ದಾರೆ. ನಟರಾಜ ಶೈಲಿಯಲ್ಲಿ ಬ್ಯಾಟ್​ ಬೀಸುವ ಇವರು ಹಲವು ಪಂದ್ಯಗಳಲ್ಲಿ ಮುಂಬೈ ತಂಡಕ್ಕೆ ಸ್ಮರಣೀಯ ಗೆಲುವು ಕೂಡ ತಂದುಕೊಟ್ಟಿದ್ದಾರೆ. ಕಳೆದ ವರ್ಷ ದಕ್ಷಿಣ ಆಫ್ರಿಕಾ ಎದುರಿನ ಮೂರನೇ ಟಿ20 ಪಂದ್ಯದಲ್ಲಿ ಸೂರ್ಯಕುಮಾರ್​ ಎಡ ಪಾದದ ನೋವಿಗೆ ಸಿಲುಕಿದ್ದರು. ಬಳಿಕ ಲಂಡನ್​ನಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು.  

ಬೆಂಗಳೂರಿನಲ್ಲಿ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ(ಎನ್​ಸಿಎ)ಯಲ್ಲಿ ಫಿಟ್​ನೆಸ್​ ತರಬೇತಿ ಪಡೆಯುತ್ತಿರುವ ಸೂರ್ಯಕುಮಾರ್ ಯಾದವ್​ ಅವರು ಇತ್ತೀಚೆಗೆ ಇಲ್ಲಿನ ಪಿಚ್​ ಕ್ಯೂರೆಟರ್​ ಜತೆಗೆ ರೋಲರ್​ನಲ್ಲಿ ಸಂಚಾರ ಮಾಡಿದ್ದ ವಿಡಿಯೊವನ್ನು ಅವರು ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ(suryakumar yadav instagram) ಹಂಚಿಕೊಂಡಿದ್ದರು.

ಮುಂಬೈ ತಂಡ


ಹಾರ್ದಿಕ್ ಪಾಂಡ್ಯ (ನಾಯಕ), ರೋಹಿತ್ ಶರ್ಮಾ, ಡೆವಾಲ್ಡ್ ಬ್ರೆವಿಸ್, ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್, ಎನ್. ತಿಲಕ್ ವರ್ಮಾ, ಟಿಮ್ ಡೇವಿಡ್, ವಿಷ್ಣು ವಿನೋದ್, ಅರ್ಜುನ್ ತೆಂಡೂಲ್ಕರ್, ಶಮ್ಸ್ ಮುಲಾನಿ, ನೆಹಾಲ್ ವಧೇರಾ, ಜಸ್​ಪ್ರೀತ್​ ಬುಮ್ರಾ, ಕುಮಾರ್ ಕಾರ್ತಿಕೇಯ, ಪಿಯೂಷ್ ಚಾವ್ಲಾ, ಆಕಾಶ್ ಮಧ್ವಲ್, ಜೇಸನ್ ಬೆಹ್ರೆಂಡಾರ್ಫ್, ರೊಮಾರಿಯೋ ಶೆಫರ್ಡ್.

Exit mobile version