ರಾಜ್ಕೋಟ್: ಪ್ರವಾಸಿ ಶ್ರೀಲಂಕಾ ವಿರುದ್ಧ ಶನಿವಾರ ನಡೆದ ಅಂತಿಮ ಟಿ20 ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್(Suryakumar Yadav) ಸ್ಫೋಟಕ ಬ್ಯಾಟಿಂಗ್ ಮೂಲಕ ಶತಕ ಸಿಡಿಸಿ ಮಿಂಚಿದ್ದಾರೆ. ಇದೀಗ ಅವರು ಈ ಪಂದ್ಯದಲ್ಲಿ ಬಾರಿಸಿದ ಸಿಕ್ಸರ್ನ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
ರಾಜ್ಕೋಟ್ನ ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಶನ್ ಸ್ಟೇಡಿಯಂನಲ್ಲಿ ನಡೆದ ಈ ಮುಖಾಮುಖಿಯಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಭಾರತ ಪರ ಸೂರ್ಯಕುಮಾರ್ ಯಾದವ್ ಆರಂಭದಿಂದಲೇ ಲಂಕಾ ಬೌಲರ್ಗಳನ್ನು ಬೆಂಡೆತ್ತಿದ್ದರು. ತಮ್ಮ ಸ್ಫೋಟಕ ಬ್ಯಾಟಿಂಗ್ ಮೂಲಕ ಚೆಂಡನ್ನು ಅಷ್ಟ ದಿಕ್ಕುಗಳಿಗೂ ಬಾರಿಸಿ ಮಿಂಚಿದರು.
ಸ್ಫೋಟಕ ಬ್ಯಾಟಿಂಗ್ ನಡೆಸುತ್ತಿದ್ದ ಸೂರ್ಯಕುಮಾರ್ ಅವರು ದಿಲ್ಶನ್ ಮದುಶಂಕ ಅವರ ಎಸೆದಲ್ಲಿ ಯಾರೂ ಊಹಿಸದ ರೀತಿಯಲ್ಲಿ ಎದ್ದು ಬಿದ್ದು ಸಿಕ್ಸರ್ ಬಾರಿಸಿದರು. ಇದನ್ನೂ ಕಂಡ ಪ್ರೇಕ್ಷಕರು ಮತ್ತು ಲಂಕಾ ಸೇರಿದಂತೆ ಟೀಮ್ ಇಂಡಿಯಾದ ಆಟಗಾರರೂ ಒಂದು ಕ್ಷಣ ನಿಬ್ಬೆರಗಾದರು. ಈ ಸಿಕ್ಸರ್ 75 ಮೀ. ದೂರ ಸಾಗಿತು.
ಸೂರ್ಯಕುಮಾರ್ ಬಾರಿಸಿದ ಈ ಸಿಕ್ಸರ್ ಕಂಡು ಕ್ರಿಕೆಟ್ ಪಂಡಿತರು ಈ ಹೊಡೆತಕ್ಕೆ ಯಾವ ಹೆಸರು ಇಡಬೇಕೆಂದು ತಿಳಿಯುತ್ತಿಲ್ಲ ಎಂದು ಹೇಳಿದ್ದಾರೆ. ಇನ್ನು ಕೆಲವರು ಈ ಹೊಡೆತ ಕಂಡು ಪ್ರಸ್ತುತ ಕ್ರಿಕೆಟ್ನ ಎಬಿಡಿ ವಿಲಿಯರ್ಸ್ ಎಂದು ಕಮೆಂಟ್ ಮಾಡಿದ್ದಾರೆ.
ಈ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ಒಟ್ಟು 51 ಎಸೆತ ಎದುರಿಸಿ ಅಜೇಯ 112 ರನ್ ಪೇರಿಸಿದರು. ಈ ಮನಮೋಹಕ ಇನಿಂಗ್ಸ್ನಲ್ಲಿ ಅವರು ಬರೋಬ್ಬರಿ 9 ಸಿಕ್ಸರ್ ಹಾಗೂ 7 ಬೌಂಡರಿ ಬಾರಿಸಿದರು. ಸೂರ್ಯ ಅವರ ಬ್ಯಾಟಿಂಗ್ ಪ್ರತಾಪದಿಂದ ಟೀಮ್ ಇಂಡಿಯಾ ಲಂಕಾ ವಿರುದ್ಧ 91 ರನ್ ಅಂತರದಿಂದ ಗೆದ್ದು, ಸರಣಿ ಗೆಲುವು ದಾಖಲಿಸಿತು.
ಇದನ್ನೂ ಓದಿ | IND VS SL | ಲಂಕಾ ವಿರುದ್ಧ ಶತಕ ಬಾರಿಸಿ ದಾಖಲೆ ಬರೆದ ಸೂರ್ಯಕುಮಾರ್ ಯಾದವ್