ಗ್ಕೆಬರ್ಹಾ: ದಕ್ಷಿಣ ಆಫ್ರಿಕಾ ವಿರುದ್ಧ ಇಂದು(ಮಂಗಳವಾರ) ನಡೆಯುವ ದ್ವಿತೀಯ ಟಿ20 ಪಂದ್ಯದಲ್ಲಿ ಟೀಮ್ ಇಂಡಿಯಾದ ಹಂಗಾಮಿ ನಾಯಕನಾಗಿರುವ ಸೂರ್ಯಕುಮಾರ್ ಯಾದವ್(suryakumar yadav) ಅವರು ಹಲವು ದಾಖಲೆಗಳನ್ನು ಬರೆಯುವ ನಿರೀಕ್ಷೆಯಲ್ಲಿದ್ದಾರೆ. ಈ ಮೂಲಕ ಕಿಂಗ್ ವಿರಾಟ್ ಕೊಹ್ಲಿ ಮತ್ತು ಕೆ.ಎಲ್ ರಾಹುಲ್ ಅವರ ದಾಖಲೆಯನ್ನು ಹಿಂದಿಕ್ಕಲಿದ್ದಾರೆ.
ಕಳೆದೊಂದು ವರ್ಷಗಳಿಂದ ಟಿ20 ಕ್ರಿಕೆಟ್‌ನಲ್ಲಿ ನಂ.1 ಬ್ಯಾಟರ್ ಆಗಿರುವ ಸೂರ್ಯಕುಮಾರ್ ಯಾದವ್ ಆಸ್ಟ್ರೇಲಿಯಾ ವಿರುದ್ಧ ಇತ್ತೀಚೆಗೆ ಮುಕ್ತಾಯಕಂಡಿದ್ದ ತವರಿನ ಟಿ20 ಸರಣಿಯಲ್ಲಿ ನಾಯಕನಾಗಿ 4-1 ಅಂತರದಿಂದ ಸರಣಿ ಗೆದ್ದದು ಮಾತ್ರವಲ್ಲದೆ ಉತ್ತಮ ಪ್ರದರ್ಶನ ಕೂಡ ತೋರಿದ್ದರು.
ಕೊಹ್ಲಿ-ರಾಹುಲ್ ದಾಖಲೆ ಮೇಲೆ ಕಣ್ಣು
ಭಾರತ ತಂಡದ ಪರ ಟಿ20 ಕ್ರಿಕೆಟ್‌ನಲ್ಲಿ ವೇಗವಾಗಿ 2000 ರನ್ ಗಳಿಸಿದ ದಾಖಲೆ ವಿರಾಟ್ ಕೊಹ್ಲಿ ಹೆಸರಿನಲ್ಲಿದೆ. ದ್ವಿತೀಯ ಸ್ಥಾನದಲ್ಲಿ ಕನ್ನಡಿಗ ಕೆ.ಎಲ್ ರಾಹುಲ್ ಕಾಣಿಸಿಕೊಂಡಿದ್ದಾರೆ. ಇದೀಗ ಈ ದಾಖಲೆಯನ್ನು ಸೂರ್ಯಕುಮಾರ್ ಯಾದವ್ ಅವರಿಗೆ ಮುರಿಯುವ ಅವಕಾಶವಿದೆ. ಈ ದಾಖಲೆ ಮುರಿಯಲು ಸೂರ್ಯ ಅವರಿಗೆ ಕೇವಲ 15 ರನ್ಗಳ ಅವಶ್ಯಕತೆ ಇದೆ.
ಇದನ್ನೂ ಓದಿ IND vs SA: ದ್ವಿತೀಯ ಟಿ20 ಪಂದ್ಯದ ಹವಾಮಾನ ವರದಿ ಹೇಗಿದೆ?
ಕೊಹ್ಲಿ 2000 ಟಿ20 ರನ್ ಪೂರೈಸಲು 56 ಇನ್ನಿಂಗ್ಸ್ ತೆಗೆದುಕೊಂಡಿದ್ದಾರೆ. ಕೆ.ಎಲ್ ರಾಹುಲ್ 58 ಇನ್ನಿಂಗ್ಸ್‌ಗಳಲ್ಲಿ 2000 ರನ್ ಪೂರೈಸಿದ್ದಾರೆ. ಸದ್ಯ ಸೂರ್ಯಕುಮಾರ್ 55 ಟಿ20 ಇನ್ನಿಂಗ್ಸ್‌ಗಳಲ್ಲಿ 1 ಶತಕ ಮತ್ತು 16 ಅರ್ಧ ಶತಕಗಳೊಂದಿಗೆ 1985 ರನ್ ಗಳಿಸಿದ್ದಾರೆ. ಅವರು ಟಿ20ಯಲ್ಲಿ 44.11 ಸರಾಸರಿ ಮತ್ತು 171.71 ಸ್ಟ್ರೈಕ್ ರೇಟ್ನಲ್ಲಿ ಬ್ಯಾಟಿಂಗ್ ಮಾಡಿದ್ದಾರೆ. ಇಂದಿನ ಪಂದ್ಯದಲ್ಲಿ 15 ರನ್ ಬಾರಿಸಿದರೆ ಕೊಹ್ಲಿಯ ದಾಖಲೆಯನ್ನು ಸರಿಗಟ್ಟಿ, ರಾಹುಲ್ ದಾಖಲೆಯನ್ನು ಮುರಿಯಲಿದ್ದಾರೆ.
Smiles ☺️
— BCCI (@BCCI) December 10, 2023
Cheers 👏
Banter 😉
How about that for a #SAvIND T20I series Trophy Unveiling! 🏆 👌#TeamIndia | @surya_14kumar pic.twitter.com/fxlVjIgT3U
ಪಂದ್ಯಕ್ಕೆ ಮಳೆ ಭೀತಿ
ಡರ್ಬಾನ್ನಲ್ಲಿ ಭಾನುವಾರ ನಡೆಯಬೇಕಿದ್ದ ಮೊದಲ ಪಂದ್ಯ ಟಾಸ್ ಕೂಟ ಕಾಣದೆ ರದ್ದುಗೊಂಡಿತ್ತು. ಇದೀಗ ದ್ವಿತೀಯ ಪಂದ್ಯ ನಡೆಯುವ ಗ್ಕೆಬರ್ಹಾ(St George’s Park, Gqeberha) ಪ್ರದೇಶದಲ್ಲಿ ಸೋಮವಾರ ರಾತ್ರಿ ಭಾರಿ ಮಳೆಯಾಗಿದೆ. ಹೀಗಾಗಿ ಇತ್ತಂಡಗಳ ಆಟಗಾರರು ಅಭ್ಯಾಸ ಕೂಡ ನಡೆಸಿಲ್ಲ ಎಂದು ಇಲ್ಲಿನ ಸ್ಥಳೀಯ ಮಾಧ್ಯಮಗಳು ವರದಿ ಮಾಡಿದೆ. ಅಲ್ಲದೆ ಇಂದು ಕೂಡ ಶೇ.65ರಷ್ಟು ಮಳೆಯ ಎಚ್ಚರಿಕೆಯನ್ನು ಹವಾಮಾನ ಇಲಾಖೆ ನೀಡಿದೆ. ಒಂದೊಮ್ಮೆ ಎರಡನೇ ಪಂದ್ಯವೂ ರದ್ದಾಗಲಿದೆ. ಕೊನೆಯ ಪಂದ್ಯ ಗುರುವಾರ (ಡಿಸೆಂಬರ್ 14) ಜೊಹಾನ್ಸ್ಬರ್ಗ್ನಲ್ಲಿ ನಡೆಯಲಿದೆ. ಇದು ಸರಣಿ ನಿರ್ಣಾಯಕ ಪಂದ್ಯವಾಗಲಿದೆ ಗೆದ್ದ ತಂಡಕ್ಕೆ ಕಪ್ ಸಿಗಲಿದೆ.
ಸಂಭಾವ್ಯ ತಂಡ
ಭಾರತ: ಸೂರ್ಯಕುಮಾರ್ ಯಾದವ್ (ನಾಯಕ), ಯಶಸ್ವಿ ಜೈಸ್ವಾಲ್, ಶುಭಮನ್ ಗಿಲ್, ರಿಂಕು ಸಿಂಗ್, ಶ್ರೇಯಸ್ ಅಯ್ಯರ್, ಇಶಾನ್ ಕಿಶನ್, ರವೀಂದ್ರ ಜಡೇಜ, ರವಿ ಬಿಷ್ಣೋಯಿ, ಆರ್ಷದೀಪ್ ಸಿಂಗ್, ಮೊಹಮ್ಮದ್ ಸಿರಾಜ್. ದೀಪಕ್ ಚಹರ್.
ದಕ್ಷಿಣ ಆಫ್ರಿಕಾ: ಐಡನ್ ಮಾರ್ಕ್‌ರಮ್ (ನಾಯಕ), ರೀಝ ಹೆಂಡ್ರಿಕ್ಸ್, ಮಾರ್ಕೊ ಜಾನ್ಸೆನ್, ಹೆನ್ರಿಕ್ ಕ್ಲಾಸೆನ್, ಕೇಶವ್ ಮಹಾರಾಜ್, ಡೇವಿಡ್ ಮಿಲ್ಲರ್, ಆ್ಯಂಡಿಲ್ ಫೆಲುಕ್ವಾಯೊ, ತಬ್ರೇಜ್ ಶಮ್ಸಿ, ಟ್ರಿಸ್ಟನ್ ಸ್ಟಬ್ಸ್, ಲಿಝಾಡ್ ವಿಲಿಯಮ್ಸ್. ಓಟ್‌ನೀಲ್ ಬಾರ್ಟ್‌ಮ್ಯಾನ್.