Site icon Vistara News

IPL 2024: ನೆಟ್ಸ್​ನಲ್ಲಿ ಬ್ಯಾಟಿಂಗ್ ಪ್ರಾಕ್ಟೀಸ್ ಆರಂಭಿಸಿದರೂ ಐಪಿಎಲ್​ಗೆ ಈ ಸ್ಟಾರ್ ಆಟಗಾರ ಡೌಟ್​!​

Suryakumar Yadav

ಟೀಮ್​ ಇಂಡಿಯಾದ ಬ್ಯಾಟರ್ ಸೂರ್ಯಕುಮಾರ್ ಯಾದವ್(Suryakumar Yadav) ಶಸ್ತ್ರಚಿಕಿತ್ಸೆಗೆ ಒಳಗಾದ ನಂತರ ಮೊದಲ ಬಾರಿಗೆ ನೆಟ್ಸ್​ನಲ್ಲಿ ಬ್ಯಾಟಿಂಗ್‌ ಅಭ್ಯಾಸ ನಡೆಸಿದ್ದಾರೆ. ಈ ವಿಡಿಯೊವನ್ನು ಅವರು ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಕಳೆದ ವರ್ಷದ ಡಿಸೆಂಬರ್​ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯಲ್ಲಿ ಆಡುತ್ತಿದ್ದ ವೇಳೆ ಸೂರ್ಯಕುಮಾರ್​ ಫೀಲ್ಡಿಂಗ್ ಮಾಡುವಾಗ ಪಾದದ ಗಾಯಕ್ಕೀಡಾಗಿದ್ದರು. ಹಿಗಾಗಿ ಅವರನ್ನು ಬಿಸಿಸಿಐ, ವರ್ಷಾರಂಭದ ಅಪಘಾನಿಸ್ತಾನ ವಿರುದ್ಧದ ಸರಣಿಯಿಂದ ಕೈಬಿಟ್ಟು ಲಂಡನ್​ನಲ್ಲಿ ಶಸ್ತ್ರಚಿಕಿತ್ಸೆ ಮಾಡಿಸಿತ್ತು. ಸದ್ಯ ಚೇತರಿಕೆ ಕಂಡಿರುವ ಸೂರ್ಯಕುಮಾರ್​ ನೆಟ್ಸ್​ನಲ್ಲಿ ಸಣ್ಣ ಪ್ರಮಾಣದಲ್ಲಿ ಬ್ಯಾಟಿಂಗ್ ಅಭ್ಯಾಸ ಶುರು ಮಾಡಿದ್ದಾರೆ.

33ರ ಹರೆಯದ ಸೂರ್ಯಕುಮಾರ್​ ಅವರು ನೆಟ್​ ಪ್ರಾಕ್ಟೀಸ್ ಮಾಡುವ ವಿಡಿಯೊವನ್ನು ಮುಂಬೈ ಇಂಡಿಯನ್ಸ್​ ಕೂಡ ಶೇರ್​ ಮಾಡಿಕೊಂಡಿದೆ. ಸೂರ್ಯ ಮುಂಬೈ ತಂಡದ ಆಟಗಾರನಾಗಿದ್ದಾರೆ. ಮಾರ್ಚ್​ 22ರಿಂದ ಆರಂಭಗೊಳ್ಳಲಿರುವ ಮೊದಲ ಹಂತದ ಐಪಿಎಲ್​ ಪಂದ್ಯಗಳಿಗಾಗಿ ಈಗಾಗಲೇ ಎಲ್ಲ ಫ್ರಾಂಚೈಸಿಗಳು ಅಭ್ಯಾಸ ಆರಂಭಿಸಿದೆ.

ನಂ. 1 ಟಿ20 ಬ್ಯಾಟರ್ ಆಗಿರುವ ಸೂರ್ಯಕುಮಾರ್ ಯಾದವ್, ಟಿ20 ಕ್ರಿಕೆಟ್​ನಲ್ಲಿ ಅತ್ಯಂತ ಯಶಸ್ವಿ ಆಟಗಾರನಾಗಿ ಗುರುತಿಸಿಕೊಂಡಿದ್ದಾರೆ. ಅತ್ಯಂತ ಕಡಿಮೆ ಪಂದ್ಯಗಳಿಂದ ಹೆಚ್ಚಿನ ರನ್​ ಕಲೆ ಹಾಕಿದ ಸಾಧನೆಯೂ ಇವರದ್ದಾಗಿದೆ. 2021 ರಲ್ಲಿ ಅವರು ಭಾರತ ಪರ ತಮ್ಮ ಚೊಚ್ಚಲ ಟಿ20 ಪಂದ್ಯ ಆಡಿದ್ದರು. ಇದುವರೆಗೆ ಭಾರತ ಪರ 60 ಟಿ20 ಪಂದ್ಯಗಳನ್ನು ಆಡಿ 45.55 ಸರಾಸರಿಯಲ್ಲಿ 2,141 ರನ್​ ಬಾರಿಸಿದ್ದಾರೆ. ನಾಲ್ಕು ಶತಕ ಮತ್ತು 17 ಅರ್ಧ ಶತಕಗಳನ್ನು ಸಿಡಿಸಿದ್ದಾರೆ. 2023 ಐಪಿಎಲ್​ನಲ್ಲಿ ಮುಂಬೈ ಇಂಡಿಯನ್ಸ್​ ಪರ 605 ರನ್‌ಗಳನ್ನು ಸೂರ್ಯಕುಮಾರ್​ ಬಾರಿಸಿದ್ದರು.

ಇದನ್ನೂ ಓದಿ IPL 2024: ಅಭಿಮಾನಿಗಳಿಗೆ ಸಿಹಿ ಸುದ್ದಿ; ಸಂಪೂರ್ಣ ಐಪಿಎಲ್ ಆಡಲಿದ್ದಾರೆ ಈ ಸ್ಟಾರ್​ ಆಟಗಾರ

ಐಪಿಎಲ್​ ಆರಂಭಿಕ ಪಂದ್ಯಗಳಿಗೆ ಅನುಮಾನ

ಸದ್ಯ ಸೂರ್ಯಕುಮಾರ್​ ಅವರು ಬೆಂಗಳೂರಿನಲ್ಲಿ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ(ಎನ್​ಸಿಎ)ಯಲ್ಲಿ ಫಿಟ್​ನೆಸ್​ ತರಬೇತಿ ಪಡೆಯುತ್ತಿದ್ದಾರೆ. ಜತೆಗೆ ಬ್ಯಾಟಿಂಗ್​ ಅಭ್ಯಾಸ ಕೂಡ ನಡೆಸುತ್ತಿದ್ದಾರೆ. ಮೂಲಗಳ ಪ್ರಕಾರ ಸೂರ್ಯಕುಮಾರ್​ ಅವರು ಮೊದಲ ಹಂತದ ಐಪಿಎಲ್​ ಪಂದ್ಯಗಳಿಗೆ ಅಲಭ್ಯರಾಗುವ ಸಾಧ್ಯತೆ ಅಧಿಕ ಎಂದು ತಿಳಿದುಬಂದಿದೆ. ಏಕೆಂದರೆ ಅವರ ಫಿಟ್​ನೆಸ್​ ಇನಷ್ಟೇ ತಿಳಿಯಬೇಕಿದೆ. ಬಿಸಿಸಿಐ ಕೂಡ ಸೂರ್ಯ ಅವರನ್ನು ಸಂಪೂರ್ಣ ಫಿಟ್​ ಆಗದ ಹೊರತು ಐಪಿಎಲ್​ ಆಡಲು ಅನುಮತುಇ ನೀಡುವುದು ಸದ್ಯಕ್ಕೆ ಕಷ್ಟದ ಮಾತು. ಏಕೆಂದರೆ ಟಿ20 ವಿಶ್ವ ಕಪ್ ಟೂರ್ನಿ ಆರಂಭಕ್ಕೂ ಇನ್ನು ಹೆಚ್ಚಿನ ಕೆಲವೇ ತಿಂಗಳು ಬಾಕಿ ಇದೆ. ಐಪಿಎಲ್​ ಆಡಿ ಮತ್ತೆ ಗಾಯಗೊಂಡರೆ ಕಷ್ಟ ಎನ್ನುವ ನಿಟ್ಟಿನಲ್ಲಿ ಬಿಸಿಸಿಐ ಕೂಡ ಮುಂಜಾಗ್ರತೆ ವಹಿಸುವ ಸಾಧ್ಯತೆ ಇದೆ.

ಈ ಬಾರಿ ಮುಂಬೈ ತಂಡವನ್ನು ಹಾರ್ದಿಕ್​ ಪಾಂಡ್ಯ ಮುನ್ನಡೆಸಲಿದ್ದಾರೆ. ರೋಹಿತ್​ ಅವರನ್ನು ತಂಡದ ನಾಯಕತ್ವದಿಂದ ಕೈಬಿಟ್ಟದ್ದಕ್ಕೆ ಸೂರ್ಯಕುಮಾರ್​ ಅವರು ಒಡೆದು ಹೋದ ಹೃದಯದ ಎಮೊಜಿಯನ್ನು ಪೋಸ್ಟ್​ ಮಾಡಿ ಫ್ರಾಂಚೈಸಿ ವಿರುದ್ಧ ಪರೋಕ್ಷ ಅಸಮಾಧಾನ ಹೊರಹಾಕಿದ್ದರು.

Exit mobile version