ಗಯಾನಾ: ಹಲವು ಸರಣಿಗಳಲ್ಲಿ ಸತತ ಬ್ಯಾಟಿಂಗ್ ವೈಫಲ್ಯ ಕಂಡ ಸೂರ್ಯಕುಮಾರ್ ಯಾದವ್(Suryakumar Yadav) ಅವರು ವಿಂಡೀಸ್ ವಿರುದ್ಧದ ಸರಣಿ ನಿರ್ಣಾಯಕ ಪಂದ್ಯದಲ್ಲಿ ಸ್ಫೋಟಕ ಅರ್ಧಶತಕ ಸಿಡಿಸಿ ಗಮನ ಸೆಳೆದರು. ಜತೆಗೆ ವಿಶ್ವದ ನಂ.1 ಟಿ20 ಆಟಗಾರ ಎಂಬ ಹಿರಿಮೆಗೆ ತಕ್ಕ ಪ್ರದರ್ಶನವನ್ನು ತೋರಿ ತಮ್ಮ ಹಳೆಯ ಬ್ಯಾಟಿಂಗ್ ಫಾರ್ಮ್ ಕಂಡುಕೊಂಡರು. ಇದರ ಜತೆಗೆ ಟಿ20 ಕ್ರಿಕೆಟ್ನಲ್ಲಿ ಸಿಕ್ಸರ್ಗಳ ಶತಕವನ್ನು ಪೂರೈಸಿದ ಸಾಧನೆಯನ್ನೂ ಮಾಡಿದರು.
ರೋಹಿತ್ಗೆ ಅಗ್ರ ಸ್ಥಾನ
ಅತಿ ಹೆಚ್ಚು ಟಿ20 ಸಿಕ್ಸರ್ ಬಾರಿಸಿದ ದಾಖಲೆ ಟೀಮ್ ಇಂಡಿಯಾದ ನಾಯಕ ರೋಹಿತ್ ಶರ್ಮ ಹೆಸರಿನಲ್ಲಿದೆ. ರೋಹಿತ್ 182* ಸಿಕ್ಸರ್ ಬಾರಿಸಿದ ಅಗ್ರ ಸ್ಥಾನದಲ್ಲಿದ್ದಾರೆ. ನ್ಯೂಜಿಲ್ಯಾಂಡ್ನ ಮಾರ್ಟಿನ್ ಗಪ್ಟಿಲ್(173) ದ್ವಿತೀಯ ಸ್ಥಾನದಲ್ಲಿದ್ದಾರೆ. ಆಸ್ಟ್ರೇಲಿಯಾದ ಮಾಜಿ ಆಟಗಾರ ಆ್ಯರನ್ ಫಿಂಚ್ 125 ಸಿಕ್ಸರ್ನೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ. ಕಿಂಗ್ ಕೊಹ್ಲಿ 117 ಸಿಕ್ಸರ್ ಬಾರಿಸಿ ಸದ್ಯ 7ನೇ ಸ್ಥಾನ ಪಡೆದಿದ್ದಾರೆ. ಪ್ರಸ್ತುತ ಕ್ರಿಕೆಟ್ ಆಡುತ್ತಿರುವ ಕಾರಣ ಈ ಸಾಧಕರ ಪಟ್ಟಿಯಲ್ಲಿ ಕೊಹ್ಲಿಗೆ ಇನ್ನು ಮೇಲೆರುವ ಅವಕಾಶವಿದೆ.100 ಸಿಕ್ಸರ್ ಬಾರಿಸಿರುವ ಸೂರ್ಯಕುಮಾರ್ 13ನೇ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ.
ಧವನ್ ದಾಖಲೆ ಪತನ
ಭಾರತ ಪರ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ಸೂರ್ಯಕುಮಾರ್ ಯಾದವ್ ಅವರು ಶಿಖರ್ ಧವನ್ ಅವರನ್ನು ಹಿಂದಿಕ್ಕಿದ್ದಾರೆ. ಈ ಸಾಧನೆ ಮಾಡಿದ ನಾಲ್ಕನೇ ಬ್ಯಾಟರ್ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ. ಸೂರ್ಯ ಅವರು ಸದ್ಯ 51 ಪಂದ್ಯದಲ್ಲಿ 49 ಇನಿಂಗ್ಸ್ಗಳನ್ನು ಆಡಿ ಮೂರು ಶತಕ ಮತ್ತು 14 ಅರ್ಧಶತಕಗಳೊಂದಿಗೆ 45.64 ಸರಾಸರಿಯಲ್ಲಿ 1,780* ರನ್ ಗಳಿಸಿದ್ದಾರೆ. ಧವನ್ 68 ಪಂದ್ಯಗಳಿಂದ 27.92ರ ಸರಾಸರಿಯಲ್ಲಿ 1759* ರನ್ ಗಳಿಸಿದ್ದಾರೆ.
ಇದನ್ನೂ ಓದಿ Viral Video: ಅಮೆರಿಕದ ಹಾದಿ ಬೀದಿಯಲ್ಲಿ ‘ಮುಕ್ಕಾಲ ಮುಕ್ಕಾಬುಲ್ಲಾ’ ಹಾಡಿಗೆ ಬಿಂದಾಸ್ ಸ್ಟೆಪ್ಸ್ ಹಾಕಿದ ಜಡೇಜಾ
ಕಡಿಮೆ ಇನಿಂಗ್ಸ್ನಲ್ಲಿ ಅತಿ ಹೆಚ್ಚು ಸಿಕ್ಸರ್
ಕಡಿಮೆ ಇನಿಂಗ್ಸ್ನಲ್ಲಿ 100 ಸಿಕ್ಸ್ ಪೂರೈಸಿದ ಭಾರತೀಯ ಆಟಗಾರ ಎಂಬ ಮೈಲಿಗಲ್ಲನ್ನು ಕೂಡ ಸೂರ್ಯ ಕುಮಾರ್ ನಿರ್ಮಿಸಿದರು. ಆದರೆ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಅತಿ ಕಡಿಮೆ ಇನಿಂಗ್ಸ್ನಲ್ಲಿ ಸಿಕ್ಸರ್ ಬಾರಿಸಿದ ಸಾಧನೆ ವಿಂಡೀಸ್ನ ಎವಿನ್ ಲೆವೀಸ್ ಹೆಸರಿನಲ್ಲಿದೆ. ಅವರು 42 ಇನಿಂಗ್ಸ್ನಲ್ಲಿ 100 ಸಿಕ್ಸರ್ ಪೂರ್ತಿಗೊಳಿಸಿದ್ದರು.
ಪಂದ್ಯ ಶ್ರೇಷ್ಠದಲ್ಲಿಯೂ ದಾಖಲೆ ಬರೆದ ಸೂರ್ಯ
ವಿಂಡಿಸ್ ವಿರುದ್ಧದ ಮೂರನೇ ಟಿ20ಯಲ್ಲಿ ಸ್ಫೋಟಕ ಬಾಟಿಂಗ್ ನಡೆಸಿದ ಸೂರ್ಯಕುಮಾರ್ 44 ಎಸೆತ ಎದುರಿಸಿ ಭರ್ಜರಿ 10 ಬೌಂಡರಿ ಮತ್ತು ನಾಲ್ಕು ಸಿಕ್ಸರ್ ನೆರವಿನಿಂದ 83 ರನ್ ಗಳಿಸಿದರು. ಅವರ ಈ ಸೊಗಸಾದ ಇನಿಂಗ್ಸ್ನಿಂದ ಭಾರತ 7 ವಿಕೆಟ್ಗಳ ಗೆಲುವು ಸಾಧಿಸಿತು. ಈ ಪ್ರದರ್ಶನಕ್ಕೆ ಅವರಿಗೆ ಪಂದ್ಯಶ್ರೇಷ್ಠ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಇದೇ ವೇಳೆ ಅವರು ಅತ್ಯಧಿಕ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದ ಸಾಧಕರಲ್ಲಿ ರೋಹಿತ್ ಜತೆ ಜಂಟಿ ದ್ವಿತೀಯ ಸ್ಥಾನಕ್ಕೇರಿದರು. ಉಭಯ ಆಟಗಾರರು ಇದುವರೆಗೆ 12 ಬಾರಿ ಈ ಪ್ರಶಸ್ತಿ ಪಡೆದಿದ್ದಾರೆ. 15 ಬಾರಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದ ವಿರಾಟ್ ಕೊಹ್ಲಿ ಈ ಸಾಧಕರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.