ನ್ಯೂಯಾರ್ಕ್: ನಿನ್ನೆ(ಬುಧವಾರ) ನಡೆದ ಟಿ20 ವಿಶ್ವಕಪ್(T20 World Cup 2024) ಟೂರ್ನಿಯ 25ನೇ ಲೀಗ್ ಪಂದ್ಯದಲ್ಲಿ ಟೀಮ್ ಇಂಡಿಯಾ(United States vs India) ಅಮೆರಿಕ ವಿರುದ್ಧ ಗೆದ್ದು ಸೂಪರ್ 8ಕ್ಕೆ ಪ್ರವೇಶ ಪಡೆಯಿತು. ಅರ್ಧಶತಕ ಬಾರಿಸಿ ಭಾರತ ತಂಡದ ಗೆಲುವುವಿನ ರೂವಾರಿ ಎನಿಸಿಕೊಂಡ ಸೂರ್ಯಕುಮಾರ್ ಯಾದವ್(Suryakumar Yadav) ಅವರು ಈ ಸಾಧನೆಯ ಹೊರತಾಗಿಯೂ ಅನಗತ್ಯ ದಾಖಲೆಯೊಂದನ್ನು ತಮ್ಮ ಹೆಸರಿಗೆ ಬರೆದಿದ್ದಾರೆ.
ಹೊಡಿಬಡಿ ಆಟಕ್ಕೆ ಹೆಸರುವಾಸಿಯಾದ ಸೂರ್ಯಕುಮಾರ್ ಯಾದವ್ ಅವರು ಅಮೆರಿಕ ವಿರುದ್ಧದ ಪಂದ್ಯದಲ್ಲಿ 49 ಎಸೆತ ಎದುರಿಸಿ 50 ರನ್ ಗಳಿಸಿ ಅರ್ಧಶತಕ ಬಾರಿಸಿದರು. ಈ ವೇಳೆ ಅವರು ಟಿ20 ವಿಶ್ವಕಪ್ ಟೂರ್ನಿಯಲ್ಲಿ ನಿಧಾನಗತಿಯ(ಅತಿ ಹೆಚ್ಚು ಎಸೆತ ಎದುರಿಸಿ) ಅರ್ಧಶತಕ ಬಾರಿಸಿದ ವಿಶ್ವದ 5ನೇ ಬ್ಯಾಟರ್ ಎನಿಸಿಕೊಂಡರು. ಕೆಟ್ಟ ದಾಖಲೆ ಪಾಕಿಸ್ತಾನ ತಂಡದ ಮೊಹಮ್ಮದ್ ರಿಜ್ವಾನ್ ಹೆಸರಿನಲ್ಲಿದೆ. ಅವರು ಇದೇ ಆವೃತ್ತಿಯಲ್ಲಿ ನಡೆದ ಕೆನಡಾ ವಿರುದ್ಧದ ಪಂದ್ಯದಲ್ಲಿ 52 ಎಸೆತ ಎದುರಿಸಿ ಅರ್ಧಶತಕ ಬಾರಿಸಿದ್ದರು.
ಇದನ್ನೂ ಓದಿ IND vs USA: ಭಾರತಕ್ಕೆ 5 ಪೆನಾಲ್ಟಿ ರನ್ ಲಭಿಸಿದ್ದು ಹೇಗೆ?
ಟಿ20 ವಿಶ್ವಕಪ್ನಲ್ಲಿ ನಿಧಾನಗತಿಯಲ್ಲಿ ಅರ್ಧಶತಕ ಬಾರಿಸಿದ ಬ್ಯಾಟರ್ಗಳು
ಮೊಹಮ್ಮದ್ ರಿಜ್ವಾನ್-52 ಎಸೆತ
ಡೇವಿಡ್ ಮಿಲ್ಲರ್- 50 ಎಸೆತ
ಡೆವೋನ್ ಸ್ಮಿತ್-49 ಎಸೆತ
ಡೇವಿಡ್ ಹಸ್ಸಿ-49 ಎಸೆತ
ಸೂರ್ಯಕುಮಾರ್ ಯಾದವ್-49 ಎಸೆತ
ಚೇಸಿಂಗ್ ವೇಳೆ ಭಾರತ ಕೂಡ ಅಮೆರಿಕದಂತೆ ಆರಂಭಿಕ ಆಘಾತ ಎದುರಿಸಿತು. ವಿರಾಟ್ ಕೊಹ್ಲಿ(0) ಮತ್ತು ರೋಹಿತ್ ಶರ್ಮ(3) ರನ್ ಗಳಿಸಿ ವಿಕೆಟ್ ಕೈಚೆಲ್ಲಿದರು. ಬಳಿಕ ಬಂದ ಪಂತ್ ಕೂಡ ಬಡಬಡನೆ ಒಂದು ಸಿಕ್ಸರ್ ಮತ್ತು ಬೌಂಡರಿ ಬಾರಿಸಿ 18 ರನ್ಗೆ ಆಟ ಮುಗಿಸಿದರು. ಪಾಕ್ ಮೂಲದ ಅಲಿ ಖಾನ್ ಎಸೆತಕ್ಕೆ ಕ್ಲೀನ್ ಬೌಲ್ಡ್ ಆದರು. ಅಲ್ಪ ಮೊತ್ತಕ್ಕೆ ಮೂರು ವಿಕೆಟ್ ಕಳೆದುಕೊಂಡ ಭಾರತ ಒಂದು ಹಂತದಲ್ಲಿ ಈ ಮೊತ್ತವನ್ನು ಬಾರಿಸಲು ಸಾಧ್ಯವೇ ಎಂಬ ಅನುಮಾನ ಕೂಡ ಕಾಡಲಾರಂಭಿಸಿತು. ಆದರೆ, ಹಾರ್ಡ್ ಹಿಟ್ಟರ್ ಸೂರ್ಯಕುಮಾರ್ ಯಾದವ್ ಯಾವುದೇ ಅಪಾಯಕಾರಿ ಹೊಡೆತಗಳಿಗೆ ಮುಂದಾಗದೆ ಸಮಯೋಚಿತ ಬ್ಯಾಟಿಂಗ್ ನಡೆಸಿ ತಂಡಕ್ಕೆ ನೆರವಾದರು. ಇವರಿಗೆ ಮತ್ತೊಂದು ತುದಿಯಲ್ಲಿ ಶಿವಂ ದುಬೆ ಕೂಡ ಉತ್ತಮ ಸಾಥ್ ನೀಡಿದರು.
ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ನಿರೀಕ್ಷಿತ ಬ್ಯಾಟಿಂಗ್ ನಡೆಸಲು ವಿಫಲವಾಗಿದ್ದ ಸೂರ್ಯಕುಮಾರ್ ಮತ್ತು ದುಬೆ ಈ ಪಂದ್ಯದಲ್ಲಿ ಉತ್ತಮ ಜತೆಯಾಟ ನಡೆಸುವ ಮೂಲಕ ಗಮನಸೆಳೆದರು. ಗೆಲುವಿಗೆ 20 ರನ್ ಬೇಕಿದ್ದಾಗ ಸೂರ್ಯಕುಮಾರ್ ತಮ್ಮ ಎಂದಿನ ಶೈಲಿಯಾದ ಸ್ಫೋಟಕ ಬ್ಯಾಟಿಂಗ್ಗೆ ಒಗ್ಗಿಕೊಂಡರು. ಸತತ ಬೌಂಡರಿ ಮತ್ತು ಸಿಕ್ಸರ್ ಬಾರಿಸಿ ನೆರದಿದ್ದ ಪ್ರೇಕ್ಷರಕರಿಗೆ ಕೊನೆಯ ಕ್ಷಣದಲ್ಲಿ ಮನರಂಜನೆ ನೀಡಿದರು. ಜತೆಗೆ ಅರ್ಧಶತಕ ಬಾರಿಸಿ ಮಿಂಚಿದರು. ದುಬೆ ಮತ್ತು ಸೂರ್ಯ ಜೋಡಿ 4 ವಿಕೆಟ್ಗೆ ಅಜೇಯ 72 ರನ್ ಒಟ್ಟುಗೂಡಿಸಿತು. ಸೂರ್ಯಕುಮಾರ್ 49 ಎಸೆತ ಎದುರಿಸಿ ತಲಾ 2 ಬೌಂಡರಿ ಮತ್ತು ಸಿಕ್ಸರ್ ಬಾರಿಸಿ ಭರ್ತಿ 50 ರನ್ ಗಳಿಸಿದರೆ, ದುಬೆ 35 ಎಸೆತಗಳಿಂದ 31 ರನ್ ಬಾರಿಸಿದರು.