Site icon Vistara News

Suryakumar Yadav: ಹಾರ್ದಿಕ್​ ಕೈಬಿಟ್ಟು ಸೂರ್ಯಕುಮಾರ್​ಗೆ ಟಿ20 ನಾಯಕತ್ವ ನೀಡಲು ಬಿಸಿಸಿಐ ಮುಂದಾಗಿದ್ದೇಕೆ?

Suryakumar Yadav

Suryakumar Yadav: Suryakumar Yadav likely to be appointed next T20I captain ahead of Hardik Pandya

ಮುಂಬಯಿ: ರೋಹಿತ್‌ ಶರ್ಮ ಅವರು ಟಿ20 ಕ್ರಿಕೆಟ್​ಗೆ ನಿವೃತ್ತಿ ಹೇಳಿದ ಕಾರಣ ಭಾರತ ಟಿ20(T20I captain) ತಂಡಕ್ಕೆ ನೂತನ ನಾಯಕ ಆಯ್ಕೆಯಾಗಬೇಕಿದೆ. ಕಳೆದ ಒಂದು ವರ್ಷಗಳಿಂದ ರೋಹಿತ್​ ಬಳಿಕ ಹಾರ್ದಿಕ್‌ ಪಾಂಡ್ಯರನ್ನೇ(Hardik Pandya) ಭವಿಷ್ಯದ ನಾಯಕ ಎಂದು ಬಿಂಬಿಸಲಾಗಿತ್ತು. ಆದರೆ, ಇದೀಗ ಬಿಸಿಸಿಐ(BCCI) ಪಾಂಡ್ಯಗೆ ನಾಯಕತ್ವ ನೀಡಲು ಹಿಂದೇಟು ಹಾಕಿದ್ದು, ಸೂರ್ಯಕುಮಾರ್​ ಯಾದವ್​ಗೆ(Suryakumar Yadav) ನಾಯಕತ್ವ ನೀಡಲು ಮುಂದಾಗಿದೆ ಎಂದು ವರದಿಯಾಗಿದೆ.

ಹೌದು, ಪಾಂಡ್ಯ ಅವರಿಗೆ ನಾಯಕತ್ವ ನೀಡದಿರಲು ಪ್ರಮುಖ ಕಾರಣ ಅವರ ಫಿಟ್ನೆಸ್‌ ಸಮಸ್ಯೆ. ಪಾಂಡ್ಯ ತಮ್ಮ 8 ವರ್ಷಗಳ ಕ್ರಿಕೆಟ್​ ವೃತ್ತಿಬದುಕಿನಲ್ಲಿ ಹಲವು ಬಾರಿ ಗಾಯದ ಸಮಸ್ಯೆಗೆ ತುತ್ತಾಗಿ ತಂಡದಿಂದ ಹೊರಗುಳಿದಿದ್ದರು. ಕಳೆದ ವರ್ಷ ನಡೆದಿದ್ದ ಏಕದಿನ ವಿಶ್ವಕಪ್ ಟೂರ್ನಿಯಲ್ಲಿಯೂ ಗಾಯಗೊಂಡು ಟೂರ್ನಿಯಿಂದ ಹೊರಬಿದ್ದಿದ್ದರು. ಪದೇಪದೆ ಗಾಯಕ್ಕೆ ತುತ್ತಾಗುವ ಕಾರಣ ಪಾಂಡ್ಯ ನೇಮಕಕ್ಕೆ ಬಿಸಿಸಿಐನ ಕೆಲ ಪ್ರಮುಖ ಅಧಿಕಾರಿಗಳು ಹಾಗೂ ಆಯ್ಕೆ ಸಮಿತಿಯ ಕೆಲವರು ವಿರೋಧ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

ಸೂರ್ಯಕುಮಾರ್‌ ಯಾದವ್‌ ಹೆಗಲಿಗೆ ನಾಯಕತ್ವ ನೀಡಲು ಬಿಸಿಸಿಐ ಅಧಿಕಾರಿಗಳು ಒಮ್ಮತದ ಒಪ್ಪಿಗೆ ನೀಡಿದ್ದು, ನೂತನ ಕೋಚ್​ ಗೌತಮ್​ ಗಂಭೀರ್​ ಕೂಡ ಸಮ್ಮತಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಹಾರ್ದಿಕ್‌ರನ್ನು ನಾಯಕನನ್ನಾಗಿ ನೇಮಿಸಲು ಗಂಭೀರ್‌ಗೂ ಮನಸಿಲ್ಲ ಎಂದು ಹೇಳಲಾಗುತ್ತಿದೆ.

ಸೂರ್ಯಕುಮಾರ್‌ ಯಾದವ್​ ಕಳೆದ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯಲ್ಲಿ ನಾಯಕನಾಗಿ ತಂಡವನ್ನು ಮುನ್ನಡೆಸಿ ಸರಣಿ ಗೆದ್ದಿದ್ದರು. ಸೂರ್ಯಕುಮಾರ್ ಯಾದವ್ ಕಾರ್ಯವೈಖರಿ ಬಗ್ಗೆಯೂ ಬಿಸಿಸಿಐ ಹಾಗೂ ಆಯ್ಕೆ ಸಮಿತಿಗೆ ಸಮಾಧಾನವಿದ್ದು, ಅವರನ್ನೇ ನಾಯಕನನ್ನಾಗಿ ಆಯ್ಕೆ ಮಾಡುವ ಸಾಧ್ಯತೆ ಹೆಚ್ಚು ಎನ್ನಲಾಗಿದೆ. ಶ್ರೀಲಂಕಾ ವಿರುದ್ಧದ ಸರಣಿಗೂ ಮುನ್ನ ಮುಂದಿನ ಟಿ20 ತಂಡದ ನಾಯಕ ಯಾರೆಂಬುದು ಖಚಿತಗೊಳ್ಳಲಿದೆ.

ಇದನ್ನೂ ಓದಿ KL Rahul: ಮುಂದಿನ ವರ್ಷ ಆರ್​ಸಿಬಿ ಪರ ಆಡಲಿದ್ದಾರೆ ಕೆ.ಎಲ್​ ರಾಹುಲ್​; ಪೋಸ್ಟರ್ ವೈರಲ್

ಶ್ರೀಲಂಕಾ ವಿರುದ್ಧದ ಏಕದಿನ ಸರಣಿಗೆ ರೋಹಿತ್‌ ಶರ್ಮ ಅಲಭ್ಯರಾಗಲಿರುವ ಕಾರಣ, ಕೆ.ಎಲ್​ ರಾಹುಲ್ ಅವರನ್ನು ಹಂಗಾಮಿ ನಾಯಕರನ್ನಾಗಿ ನೇಮಿಸಲು ಬಿಸಿಸಿಐ ನಿರ್ಧರಿಸಿದೆ. 027ರ ಏಕದಿನ ವಿಶ್ವಕಪ್‌ ಗಮನದಲ್ಲಿಟ್ಟುಕೊಂಡು ಹೊಸ ನಾಯಕನನ್ನು ಬೆಳೆಸಲು ಪ್ರಧಾನ ಕೋಚ್‌ ಗೌತಮ್‌ ಗಂಭೀರ್‌ ಉದ್ದೇಶಿಸಿದ್ದು, ಈ ನಿಟ್ಟಿನಲ್ಲಿ ರಾಹುಲ್​ಗೆ ಅವಕಾಶ ಸಿಗಬಹುದು ಎಂದು ಹೇಳಲಾಗುತ್ತಿದೆ. ಗಂಭೀರ್ ಅವರು ಮೆಂಟರ್ ಆಗಿದ್ದ ಲಕ್ನೋ ತಂಡದಲ್ಲಿ ರಾಹುಲ್​ ಅವರು ನಾಯಕರಾಗಿದ್ದರು ಎನ್ನುವುದು ಗಮನಾರ್ಹ.

Exit mobile version