ಅಡಿಲೇಡ್: ಐಸಿಸಿ ಟಿ20 ವಿಶ್ವ ಕಪ್ನ ಸೂಪರ್-12 ಪಂದ್ಯದಲ್ಲಿ ಬುಧವಾರ ಟೀಮ್ ಇಂಡಿಯಾ ಬಾಂಗ್ಲಾದೇಶ ತಂಡದ ವಿರುದ್ಧ ಸೆಣಸಾಟ ನಡೆಸಲಿದೆ. ಈ ಪಂದ್ಯವನ್ನು ಗೆದ್ದು ಬಿ ಗ್ರೂಪ್ನ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೇರುವುದು ರೋಹಿತ್ ಪಡೆಯ ಯೋಜನೆಯಾಗಿದೆ. ಇನ್ನೊಂದೆಡೆ ಸೂರ್ಯಕುಮಾರ್ ಯಾದವ್ ಈ ಪಂದ್ಯದಲ್ಲಿ ಹಲವು ದಾಖಲೆ ಮುರಿಯುವ ಇರಾದೆಯಲ್ಲಿದ್ದಾರೆ.
ಸಾವಿರ ರನ್ ಸನಿಹದಲ್ಲಿ ಸೂರ್ಯ
ಉತ್ತಮ ಬ್ಯಾಟಿಂಗ್ ಲಯದಲ್ಲಿರುವ ಸ್ಫೋಟಕ ಬ್ಯಾಟ್ಸ್‌ಮನ್ ಸೂರ್ಯಕುಮಾರ್ ಯಾದವ್ ಪ್ರಸಕ್ತ ವರ್ಷದ ಟಿ20 ಕ್ರಿಕೆಟ್ನಲ್ಲಿ 935 ರನ್ ಗಳಿಸಿದ್ದಾರೆ. ಬುಧವಾರ ಬಾಂಗ್ಲಾದೇಶ ವಿರುದ್ಧ 65 ರನ್ ಗಳಿಸಿದರೆ ಕ್ಯಾಲೆಂಡರ್ ವರ್ಷದಲ್ಲಿ 1000 ರನ್ ಗಳಿಸಿದ ಭಾರತದ ಮೊದಲ ಆಟಗಾರ ಎಂಬ ಖ್ಯಾತಿಗೆ ಭಾಜನರಾಗಲಿದ್ದಾರೆ.
ರೋಹಿತ್-ಕೊಹ್ಲಿ ದಾಖಲೆ ಮುರಿಯುವರೇ ಸೂರ್ಯ
ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ ಸೂರ್ಯಕುಮಾರ್ ಬಳಿಕ ನೆದರ್ಲೆಂಡ್ಸ್ ವಿರುದ್ಧ (52*), ದಕ್ಷಿಣ ಆಫ್ರಿಕಾ ವಿರುದ್ಧ (68 ) ಸತತ ಎರಡು ಅರ್ಧಶತಕ ಸಿಡಿಸಿ ಮಿಂಚಿದ್ದರು. ಇದರ ಜತೆಗೆ ಟಿ20 ವಿಶ್ವ ಕಪ್ ಟೂರ್ನಿಯಲ್ಲಿ ಸತತ 2 ಅರ್ಧಶತಕ ಗಳಿಸಿರುವ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ದಾಖಲೆಯನ್ನು ಸರಿಗಟ್ಟಿದ್ದರು. ಇದೀಗ ಬಾಂಗ್ಲಾದೇಶ ವಿರುದ್ಧವೂ ಸೂರ್ಯಕುಮಾರ್ ಅರ್ಧ ಶತಕ ಗಳಿಸಿದರೆ ರೋಹಿತ್ ಹಾಗೂ ಕೊಹ್ಲಿ ಅವರ ಈ ದಾಖಲೆ ಮುರಿದು ಮಹೇಲಾ ಜಯವರ್ಧನೆ (ಸತತ 3 ಅರ್ಧಶತಕ) ದಾಖಲೆಯನ್ನು ಸರಿಗಟ್ಟಲಿದ್ದಾರೆ.
ಇದನ್ನೂ ಓದಿ | T20 World Cup | ಅಫಘಾನಿಸ್ತಾನದ ವಿರುದ್ಧ 6 ವಿಕೆಟ್ ಗೆಲುವು; ಲಂಕಾ ಸೆಮಿ ಆಸೆ ಜೀವಂತ