Site icon Vistara News

Suryakumar Yadav | ಟಿ20 ರ‍್ಯಾಂಕಿಂಗ್‌ನಲ್ಲಿ ಅಗ್ರ ಸ್ಥಾನ ಕಾಯ್ದುಕೊಂಡ ಸೂರ್ಯಕುಮಾರ್‌ ಯಾದವ್‌

suryakumar icc t20 ranking

ದುಬೈ: ಐಸಿಸಿ ಪುರುಷರ ಟಿ20 ರ‍್ಯಾಂಕಿಂಗ್‌ ಪಟ್ಟಿ ಬುಧವಾರ ಬಿಡುಗಡೆಮಾಡಿದ್ದು, ಭಾರತದ ಸ್ಫೋಟಕ ಬ್ಯಾಟರ್ ಸೂರ್ಯಕುಮಾರ್ ಯಾದವ್(Suryakumar Yadav) ನಂಬರ್ 1 ಸ್ಥಾನದಲ್ಲಿಯೇ ಮುಂದುವರಿದಿದ್ದಾರೆ. ಆಸ್ಟ್ರೇಲಿಯಾದಲ್ಲಿ ನಡೆದ ಟಿ೨೦ ವಿಶ್ವ ಕಪ್‌ ಟೂರ್ನಿಯಲ್ಲಿ ಅದ್ಭುತ ಬ್ಯಾಟಿಂಗ್‌ ಪ್ರದರ್ಶನ ತೋರಿದ ಕಾರಣ ಅವರು ಅಗ್ರಸ್ಥಾನ ಕಾಪಾಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಉಳಿದಂತೆ ಅಲೆಕ್ಸ್‌ ಹೇಲ್ಸ್‌ ಕೂಡ ರ‍್ಯಾಂಕಿಂಗ್‌ ಪ್ರಗತಿ ಕಂಡಿದ್ದಾರೆ.

ಅಲೆಕ್ಸ್ ರ‍್ಯಾಂಕಿಂಗ್‌ನಲ್ಲಿ ಏರಿಕೆ

ಭಾರತದ ವಿರುದ್ಧ ಟಿ೨೦ ವಿಶ್ವ ಕಪ್‌ ಸೆಮಿಫೈನಲ್‌ನಲ್ಲಿ 47 ಎಸೆತಗಳಲ್ಲಿ ಅಜೇಯ 86 ರನ್ ಗಳಿಸಿ ಮಿಂಚಿದ್ದ ಇಂಗ್ಲೆಂಡ್ ತಂಡದ ಆರಂಭಿಕ ಆಟಗಾರ ಅಲೆಕ್ಸ್ ಹೇಲ್ಸ್ 22 ಸ್ಥಾನಗಳ ಭರ್ಜರಿ ಜಿಗಿತ ಕಾಣುವ ಮೂಲಕ ಜೀವನಶ್ರೇಷ್ಠ 12ನೇ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ. ಅವರು ವಿಶ್ವ ಕಪ್‌ ಕೂಡದಲ್ಲಿ 42.40 ಸರಾಸರಿಯಲ್ಲಿ 212 ರನ್ ಗಳಿಸಿ ಮಿಂಚಿದ್ದರು. ಈ ಸಾಧನೆಯಿಂದ ನೂತನ ರ‍್ಯಾಂಕಿಂಗ್‌ ಪಟ್ಟಿಯಲ್ಲಿ ಭಡ್ತಿ ಪಡೆದಿದ್ದಾರೆ. ಉಳಿದಂತೆ ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಮ್ ಕೂಡ ರ‍್ಯಾಂಕಿಂಗ್‌ ಸುಧಾರಣೆ ಕಂಡಿದ್ದು ಮೂರನೇ ಸ್ಥಾನಕ್ಕೆ ಜಿಗಿದಿದ್ದಾರೆ. ದಕ್ಷಿಣ ಆಫ್ರಿಕಾದ ಬ್ಯಾಟರ್ ರಿಲಿ ರೊಸೊ 7, ನ್ಯೂಜಿಲೆಂಡ್‌ನ ಗ್ಲೆನ್‌ ಫಿಲಿಪ್ಸ್ 8ನೇ ಸ್ಥಾನ ಪಡೆದಿದ್ದಾರೆ.

ಕರನ್, ರಶೀದ್‌ಗೂ ಭಡ್ತಿ

ಪಾಕಿಸ್ತಾನದ ವಿರುದ್ಧ ಟಿ20 ವಿಶ್ವ ಕಪ್ ಫೈನಲ್ ಪಂದ್ಯದಲ್ಲಿ ಮಿಂಚಿದ ಇಂಗ್ಲೆಂಡ್​ ತಂಡದ ಸ್ಪಿನ್ನರ್ ಆದಿಲ್ ರಶೀದ್ ಮತ್ತು ವಿಶ್ವ ಕಪ್​ನಲ್ಲಿ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದ ಸ್ಯಾಮ್​ ಕರನ್​ ನೂತನ ರ‍್ಯಾಂಕಿಂಗ್‌ನಲ್ಲಿ ಜಿಗಿತ ಕಂಡಿದ್ದಾರೆ. ರಶೀದ್​ 5 ಸ್ಥಾನಗಳನ್ನು ಏರಿಕೆ ಕಂಡು 3ನೇ ಸ್ಥಾನ ಪಡೆದುಕೊಂಡಿದ್ದಾರೆ. ಸ್ಯಾಮ್ ಕರನ್ ಎರಡು ಸ್ಥಾನಗಳ ಏರಿಕೆ ಕಾಣುವ ಮೂಲಕ ಅಗ್ರ 5ರಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಉಳಿದಂತೆ ಲಂಕಾದ ವನಿಂದು ಹಸರಂಗ ಅಗ್ರಸ್ಥಾನದಲ್ಲಿ ಮುಂದುವರೆದಿದ್ದು, ರಶೀದ್ ಖಾನ್ ಎರಡನೇ ಸ್ಥಾನ ಕಾಯ್ದುಕೊಂಡಿದ್ದಾರೆ.

ಇದನ್ನೂ ಓದಿ | MS Dhoni | ಈ ಬಾರಿಯೂ ಸಿಎಸ್​ಕೆಗೆ ಮಹೇಂದ್ರ ಸಿಂಗ್​ ಧೋನಿಯೇ ಸಾರಥಿ; ಕೆ.ಎಸ್. ವಿಶ್ವನಾಥನ್

Exit mobile version