ಬೆಂಗಳೂರು: ವಿಶ್ವದ ನಂ.1 ಟಿ20 ಬ್ಯಾಟರ್ ಸೂರ್ಯಕುಮಾರ್ ಯಾದವ್ ಅವರನ್ನು ಐರ್ಲೆಂಡ್ ವಿರುದ್ಧದ ಟಿ20 ಸರಣಿಗೆ ಭಾರತ ತಂಡದ ನಾಯಕರನ್ನಾಗಿ ಆಯ್ಕೆ ಆಯ್ಕೆಯಾಗಬಹುದು ಎಂದು ಹೇಳಲಾಗಿದೆ. ಹಾರ್ದಿಕ್ ಪಾಂಡ್ಯ ಅನುಪಸ್ಥಿತಿಯಲ್ಲಿ ಭಾರತ ತಂಡ ಐರ್ಲೆಂಡ್ ಪ್ರವಾಸ ಮಾಡಲಿದೆ. ಗಾಯದ ಸಮಸ್ಯೆಯಿಂದ ವಾಪಸಾಗಲಿರುವ ಜಸ್ಪ್ರಿತ್ ಬುಮ್ರಾ ಈ ಪ್ರವಾಸದಲ್ಲಿ ಇರಲಿದ್ದು ಅವರೇ ತಂಡವನ್ನು ಮುನ್ನಡೆಸುತ್ತಾರೆ ಎಂದು ವರದಿಗಳಾಗಿದ್ದವು. ಆದರೆ ಈಗ ಬಂದಿರುವ ಸುದ್ದಿಯ ಪ್ರಕಾರ ಸೂರ್ಯಕುಮಾರ್ಗೆ ಪಟ್ಟ ಕಟ್ಟುವ ಸಾಧ್ಯತೆಗಳಿವೆ.
ಆಗಸ್ಟ್ 18ರಿಂದ ಪ್ರಾರಂಭವಾಗುವ ಐರ್ಲೆಂಡ್ ವಿರುದ್ಧದ ಮೂರು ಪಂದ್ಯಗಳ ಸರಣಿಯಿಂದ ಭಾರತದ ಟಿ 20 ನಾಯಕ ಹಾರ್ದಿಕ್ ಪಾಂಡ್ಯ ಅವರಿಗೆ ವಿಶ್ರಾಂತಿ ನೀಡುವ ಸಾಧ್ಯತೆ ಹೆಚ್ಚಿದೆ ಎನ್ನಲಾಗಿದೆ. ಹೀಗಾಗಿ ಉಪನಾಯಕ ಸೂರ್ಯಕುಮಾರ್ ಯಾದವ್ ಅವರೇ ಮೊದಲ ಆಯ್ಕೆ ಎನಿಸಿಕೊಳ್ಳಲಿದ್ದಾರೆ.
ವೆಸ್ಟ್ ಇಂಡೀಸ್ ಮತ್ತು ಯುನೈಟೆಡ್ ಸ್ಟೇಟ್ಸ್ನಲ್ಲಿ ಭಾರತ ತಂಡವು 18 ದಿನಗಳಲ್ಲಿ 8 ಸೀಮಿತ ಓವರ್ಗಳ ಕ್ರಿಕೆಟ್ ಪಂದ್ಯಗಳನ್ನು ಆಡಲಿದೆ. ಐದು ಟಿ20 ಪಂದ್ಯಗಳ ಅಂತಿಮ ಪಂದ್ಯವು ಆಗಸ್ಟ್ 13ರಂದು ಮಿಯಾಮಿಯಲ್ಲಿ ನಡೆಯಲಿದೆ.
ಸೂರ್ಯಕುಮಾರ್ ಯಾದವ್ ಪ್ರಧಾನ ಆಕರ್ಷಣೆ
2023ರ ಭಾರತ ಮತ್ತು ಐರ್ಲೆಂಡ್ ಟಿ20 ಸರಣಿಯು ವಿವಿಧ ಕಾರಣಗಳಿಗಾಗಿ ಸಾಕಷ್ಟು ಗಮನ ಸೆಳೆಯುವ ನಿರೀಕ್ಷೆಯಿದೆ. ಮೊದಲನೆಯದಾಗಿ, ಚೀನಾದಲ್ಲಿ ನಡೆಯಲಿರುವ ಏಷ್ಯನ್ ಗೇಮ್ಸ್ 2023ರಲ್ಲಿ ಸ್ಪರ್ಧಿಸಲಿರುವ ಭಾರತೀಯ ಆಟಗಾರರಿಗೆ ಈ ಸರಣಿಯು ಅಭ್ಯಾಸದಂತಾಗಲಿದೆ. ಹೀಗಾಗಿ ಇದು ಉಪಯುಕ್ತ ಸರಣಿ ಎನಿಸಿಕೊಳ್ಳಲಿದೆ.
ಇದನ್ನೂ ಓದಿ : Asia Cup 2023: ಏಷ್ಯಾಕಪ್ನಲ್ಲಿ ಒಂದು ಪಂದ್ಯವನ್ನು ಪಾಕ್ನಲ್ಲೂ ಆಡಲಿದೆ ಭಾರತ ತಂಡ
ಹಾರ್ದಿಕ್ ಪಾಂಡ್ಯ ಮತ್ತು ಶುಬ್ಮನ್ ಗಿಲ್ ಐರ್ಲೆಂಡ್ ಟಿ20 ಐ ಸರಣಿಯಲ್ಲಿ ಆಡುವ ನಿರೀಕ್ಷೆಯಿಲ್ಲ. ಮುಂಬರುವ ತಿಂಗಳುಗಳಲ್ಲಿ ಭಾರತ ತಂಡವು ಸಾಕಷ್ಟು ಕ್ರಿಕೆಟ್ ಪಂದ್ಯಗಳನ್ನು ಆಡಬೇಕಾಗಿರುವ ಕಾರಣ ಕಾರ್ಯದೊತ್ತಡ ಕಡಿಮೆ ಮಾಡುವುದಕ್ಕಾಗಿ ಅವರಿಗೆ ವಿಶ್ರಾಂತಿ ಲಭಿಸಲಿದೆ. ಆದಾಗ್ಯೂ, ಯಾವುದೂ ಅಂತಿಮವಾಗಿಲ್ಲ.
ವೆಸ್ಟ್ ಇಂಡೀಸ್ ಪ್ರವಾಸ ಮುಗಿಸಿ ಫ್ಲೋರಿಡಾದಿಂದ ಡಬ್ಲಿನ್ಗೆ ಹೋಗಬೇಕಾಗಿದೆ. ಎರಡೂ ಸರಣಿಗೆ ಮೊದಲು ಮೂರು ದಿನಗಳ ಅಂತರ ಮಾತ್ರ ಇರುವ ಕಾರಣ 2023ರ ಏಷ್ಯನ್ ಕ್ರೀಡಾಕೂಟದಲ್ಲಿ ಸ್ಪರ್ಧಿಸುವ ಎರಡನೇ ಸ್ಟ್ರಿಂಗ್ ತಂಡವನ್ನು ಬಿಸಿಸಿಐ ಕಣಕ್ಕಿಳಿಸುವ ನಿರೀಕ್ಷೆಯಿದೆ. ಈ ಸರಣಿಯು 2023ರ ಏಷ್ಯನ್ ಕ್ರೀಡಾಕೂಟದಲ್ಲಿ ಸ್ಪರ್ಧಿಸುವ ಆಟಗಾರರಿಗೆ ಅದ್ಭುತ ಸಿದ್ಧತೆಯಾಗಲಿದೆ. ಋತುರಾಜ್ ಗಾಯಕ್ವಾಡ್ 2023ರ ಏಷ್ಯನ್ ಗೇಮ್ಸ್ಗೆ ಪುರುಷರ ತಂಡವನ್ನು ಮುನ್ನಡೆಸಲಿದ್ದಾರೆ. ಪುರುಷರ ಪಂದ್ಯಗಳು ಸೆಪ್ಟೆಂಬರ್ 28 ರಿಂದ ಅಕ್ಟೋಬರ್ 7ರವರೆಗೆ ನಡೆಯಲಿವೆ.
ಈಗಾಗಲೇ ಟಿ20 ಕ್ರಿಕೆಟ್ನಲ್ಲಿ ಮಿಂಚಿರುವ ಸೂರ್ಯಕುಮಾರ್ ಯಾದವ್ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ. ಈ ಸರಣಿ ವಿಶೇಷವಾಗಲು ಮತ್ತೊಂದು ಕಾರಣವೆಂದರೆ ಎಕ್ಸ್ಪ್ರೆಸ್ ವೇಗಿ ವೇಗಿ ಜಸ್ಪ್ರೀತ್ ಬುಮ್ರಾ ಭಾರತೀಯ ತಂಡಕ್ಕೆ ಮರಳುವುದು. ಆಗಸ್ಟ್ 18ರಿಂದ ಆಗಸ್ಟ್ 23 ರವರೆಗೆ ಮೂರು ಪಂದ್ಯಗಳ ಟಿ 20 ಐ ಸರಣಿಗಾಗಿ ಮೆನ್ ಇನ್ ಬ್ಲೂ ಐರ್ಲೆಂಡ್ಗೆ ಪ್ರಯಾಣಿಸಲಿದೆ, ನಂತರ ಆಗಸ್ಟ್ 30ರಂದು ಏಷ್ಯಾ ಕಪ್ 2023 ನಡೆಯಲಿದೆ.