ಮುಂಬಯಿ : ಸೂರ್ಯಕುಮಾರ್ ಯಾದವ್ (suryakumar yadav) ಸದ್ಯ ಟಿ20 ಮಾದರಿಯಲ್ಲಿ ನಂಬರ್ ಒನ್ ಆಟಗಾರ. ಅವರ ವಿಸ್ಫೋಟಕ ಬ್ಯಾಟಿಂಗ್ ಶೈಲಿಗೆ ಕ್ರಿಕೆಟ್ ಕ್ಷೇತ್ರವೆ ಬೆಚ್ಚಿ ಬಿದ್ದಿದೆ. ಬೆದರದೇ, ಬೆಚ್ಚದೇ ಬೌಲರ್ಗಳ ಜಂಘಾಬಲ ಕುಂದಿಸುವ ಅವರು ಟೀಮ್ ಇಂಡಿಯಾದ ಸ್ಟಾರ್ ಆಟಗಾರ ಕೂಡ. ಇಷ್ಟೆಲ್ಲ ಸಾಧನೆ ಮಾಡಿರುವ ಈ ಆಟಗಾರ ದೇಶಿ ಕ್ರಿಕೆಟ್ ಪಂದ್ಯಕ್ಕಾಗಿಯೂ ಪ್ಯಾಡ್ ಕಟ್ಟಿದ್ದಾರೆ. ಅದು ಟೆಸ್ಟ್ ಮಾದರಿ. ಅಲ್ಲಿಯೂ ಅವರು ತಮ್ಮ ನಿರ್ಭೀತಿಯ ಬ್ಯಾಟಿಂಗ್ ಶೈಲಿಯನ್ನು ಮುಂದುವರಿಸಿದ್ದಾರೆ.
ಮುಂಬಯಿಯ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್ನಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿಯ ಗುಂಪು ಎ ಪಂದ್ಯದಲ್ಲಿ ಮುಂಬಯಿ ತಂಡದ ಪರ ಕಣಕ್ಕಿಳಿಯುವ ಮೂಲಕ ದೇಶಿ ಕ್ರಿಕೆಟ್ಗೆ ಮತ್ತೆ ಎಂಟ್ರಿಯಾಗಿದ್ದಾರೆ. ಹೈದರಾಬಾದ್ ತಂಡದ ವಿರುದ್ಧದ ಪಂದ್ಯದಲ್ಲಿ ಅವರು 80 ಎಸೆತಗಳಲ್ಲಿ 90 ರನ್ ಬಾರಿಸಿದ್ದಾರೆ. ಈ ಮೂಲಕ ತಮಗೆ ಎಲ್ಲ ಮಾದರಿಯೂ ಒಂದೇ. ಬ್ಯಾಟ್ ಬೀಸುವುದಷ್ಟೇ ನನ್ನ ಕಾಯಕ ಎಂಬುದನ್ನು ತೋರಿಸಿಕೊಟ್ಟಿದ್ದಾರೆ.
ಸೂರ್ಯಕುಮಾರ್ ಯಾದವ್ 2020ರಲ್ಲಿ ಕೊನೇ ಬಾರಿ ದೇಶಿ ಕ್ರಿಕೆಟ್ನಲ್ಲಿ ಪಾಲ್ಗೊಂಡಿದ್ದರು. ಬಳಿಕ ಅವರು ಭಾರತ ತಂಡದಲ್ಲಿ ಅವಕಾಶ ಪಡೆದುಕೊಂಡ ಕಾರಣ ರಣಜಿ ಸೇರಿದಂತೆ ಇನ್ಯಾವುದೇ ಟೂರ್ನಿಯಲ್ಲಿ ಪಾಲ್ಗೊಂಡಿರಲಿಲ್ಲ. ಇದೀಗ ಅವರು ಬಾಂಗ್ಲಾದೇಶ ಪ್ರವಾಸ ಹೋದ ಭಾರತ ತಂಡದಲ್ಲಿ ಅವಕಾಶ ಪಡೆದುಕೊಂಡಿರಲಿಲ್ಲ. ರಜೆಯಲ್ಲಿರುವ ಕಾರಣ ಅವರು ರಣಜಿ ಟ್ರೋಫಿಯಲ್ಲಿ ಆಡಲು ಮುಂದಾಗಿದ್ದರು. ಅಂತೆಯೇ ಅವರು ಹೈದಾರಾಬಾದ್ ವಿರುದ್ಧ ಪಂದ್ಯಕ್ಕೆ ಲಭ್ಯರಾಗಿ ಸ್ಫೋಟಕ ಬ್ಯಾಟಿಂಗ್ ಮಾಡಿದ್ದಾರೆ. ಮುಂಬಯಿ ಪರ ಅಜಿಂಕ್ಯ ರಹಾನೆ ಹಾಗೂ ಯಶಸ್ವಿ ಜೈಸ್ವಾಲ್ ಶತಕ ಬಾರಿಸಿದ್ದಾರೆ.
ಇದನ್ನೂ ಓದಿ | Suryakumar Yadav | ರಣಜಿ ಪಂದ್ಯದಲ್ಲಿ ಆಡಲಿದ್ದಾರೆ ಸೂರ್ಯಕುಮಾರ್ ಯಾದವ್; ಯಾಕೆ ಗೊತ್ತೇ?