Site icon Vistara News

ನಿತ್ಯ 8 ಕೆಜಿ ಮಟನ್​ ತಿನ್ನೋದು ಬಿಟ್ಟು ದೇಶದ ಬಗ್ಗೆ ಚಿಂತಿಸಿ; ಪಾಕ್​ ಮಾಜಿ ಆಟಗಾರನ ಆಕ್ರೋಶ

Wasim Akram

ಕರಾಚಿ: ಹ್ಯಾಟ್ರಿಕ್​ ಸೋಲು ಕಂಡು ವಿಶ್ವಕಪ್​ ಟೂರ್ನಿಯಿಂದ ಹೊರಬೀಳುವ ಸ್ಥಿಯಲ್ಲಿರುವ ಪಾಕಿಸ್ತಾನ ತಂಡದ ಪ್ರದರ್ಶನ ಕಂಡು ಮಾಜಿ ಆಟಗಾರ ವಾಸಿಂ ಅಕ್ರಮ್(Wasim Akram)​ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪಾಕಿಸ್ತಾನ ಸೋಮವಾರ ನಡೆದ ಪಂದ್ಯದಲ್ಲಿ ದುರ್ಬಲ ಅಫಘಾನಿಸ್ತಾನ ವಿರುದ್ಧ 8 ವಿಕೆಟ್​ಗಳ ಹೀನಾಯ ಸೋಲು ಕಂಡ ಬಳಿಕ ವಾಸಿಂ ಅಕ್ರಮ್​ ಅವರು ಬಾಬರ್​ ಪಡೆಗೆ ಮೊದಲು ಮಟನ್(8kg of mutton) ತಿನ್ನುವುದನ್ನು ನಿಲ್ಲಿಸಿ, ದೇಶದ ಬಗ್ಗೆ ಚಿಂತಿಸಿ ಎಂದು ಹೇಳುವ ಮೂಲಕ ತಿವಿದಿದ್ದಾರೆ.

ದಿನಕ್ಕೆ 8 ಕೆಜಿ ಮಟನ್​

ಪಾಕಿಸ್ತಾನದ ಕ್ರಿಕೆಟ್​ ಶೋ ಕಾರ್ಯಕ್ರಮದಲ್ಲಿ ಮಾತನಾಡಿದ ವಾಸಿಂ ಅಕ್ರಮ್, ‘ಅಫ್ಘಾನಿಸ್ತಾನ ವಿರುದ್ಧ ಇದು ಕೆಟ್ಟ ಸೋಲು, ನಿಜಕ್ಕೂ ಇದು ಮುಜುಗರ ತರುವಂತದ್ದು. ಕೇವಲ ಎರಡು ವಿಕೆಟ್ ಕಳೆದುಕೊಂಡು 280 ರನ್ ಗುರಿಯನ್ನು ತಲುಪುವುದು ಸಾಮಾನ್ಯ ವಿಷಯವಲ್ಲ. ಆಟಗಾರರು ಪ್ರತಿದಿನ 8 ಕೆಜಿ ಮಟನ್ ತಿಂದರೆ ಫಿಟ್​ನೆಸ್​ ಹೇಗೆ ಸಾಧ್ಯ” ಎಂದು ಬಾಬರ್​ ಪಡೆಯ ವಿರುದ್ಧ ಅವರು ಕಿಡಿಕಾರಿದ್ದಾರೆ.

“ವೃತ್ತಿಪರರಾಗಿ ನೀವು ಪಡೆಯುವ ಹಣಕ್ಕೆ ತಕ್ಕ ಪ್ರದರ್ಶನ ನೀಡುವುದು ಕೂಡ ಪ್ರಮುಖವಾಗಿದೆ. ದೇಶಕ್ಕಾಗಿ ಆಡುವಾಗ ನಿಮ್ಮಲ್ಲಿ ಒಂದು ನಿರ್ದಿಷ್ಟ ಮಾನದಂಡ ಇರಬೇಕು. ಮಿಸ್ಬಾ ಉಲ್​ ಹಕ್​ ಅವರು ಕೋಚ್ ಆಗಿದ್ದ ವೇಳೆ ಫಿಟ್​ನೆಸ್​ ಮಾನದಂಡವನ್ನು ಜಾರಿಗೆ ತಂದಿದ್ದರು. ಆದರೆ ಅವರ ವಿರುದ್ಧವೇ ನೀವು ಇಲ್ಲ ಸಲ್ಲದ ಆರೋಪ ಹೊರಿಸಿ ಅವರನ್ನು ಈ ಹುದ್ದೆಯಿಂದ ಕೆಳಗಿಳಿಸಿದ್ದೀರಿ. ಅವರ ಕಾರ್ಯತಂತ್ರಗಳು ಕೆಲಸ ಮಾಡುತ್ತಿದ್ದವು. ಫೀಲ್ಡಿಂಗ್ ಎನ್ನುವುದು ಫಿಟ್ನೆಸ್‌ಗೆ ಸಂಬಂಧಿಸಿದ್ದು. ನಮ್ಮಲ್ಲಿ ಆ ಕೊರತೆಯಿದೆ” ಎಂದು ಹೇಳಿದರು.

“ಹಿಂದಿನ ಕೋಚಿಂಗ್ ಸ್ಟಾಫ್‌ ಅಡಿಯಲ್ಲಿ ಪಾಕಿಸ್ತಾನ ಕಳೆದ ವರ್ಷ ಆಸ್ಟ್ರೇಲಿಯಾದಲ್ಲಿ ನಡೆದ ಟಿ20 ವಿಶ್ವಕಪ್‌ನಲ್ಲಿ ಫೈನಲ್‌ ತಲುಪಿತ್ತು. ಕೆಜಿಗಟ್ಟಲೆ ಮಟನ್​ ತಿನ್ನುವುದನ್ನು ಬಿಟ್ಟು ದಯವಿಟ್ಟು ಮೊದಲು ದೇಶದ ಬಗ್ಗೆ ಯೋಜಿಸಿ” ಎಂದು ವಾಸಿಂ ಅಕ್ರಮ್ ಕೆಂಡಾಮಂಡಲರಾಗಿದ್ದಾರೆ.

ಇದನ್ನೂ ಓದಿ ಆಫ್ಘನ್​ ತಂಡಕ್ಕೂ ಇದೆ ಸೆಮಿಫೈನಲ್​ ಅವಕಾಶ; ಪಾಕ್​ ತಂಡದ ಸ್ಥಿತಿಯೇನು?

ಜೆರ್ಸಿ ಪಡೆದಿದ್ದ ಬಾಬರ್​ಗೆ ತಿವಿದಿದ್ದ ಅಕ್ರಮ್​

ಅಕ್ಟೋಬರ್​ 14ರಂದು ನರೇಂದ್ರ ಮೋದಿ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆದಿದ್ದ ಭಾರತ ವಿರುದ್ಧದ ಪಂದ್ಯದಲ್ಲಿ ಪಾಕಿಸ್ತಾನ ತಂಡದ ನಾಯಕ ಬಾಬರ್​ ಅಜಂ(Babar Azam) ಅವರು ವಿರಾಟ್​ ಕೊಹ್ಲಿಯ ಹಸ್ತಾಕ್ಷರವುಳ್ಳ ಟೀಮ್​ ಇಂಡಿಯಾದ ಜೆರ್ಸಿಯನ್ನು ಪಡೆದಿದ್ದರು. ಉಭಯ ದೇಶಗಳ ಮಧ್ಯೆ ರಾಜಕೀಯ ಸಂಬಂಧ ಹದಗೆಟ್ಟಿದ್ದರೂ, ಎರಡು ತಂಡಗಳ ಆಟಗಾರರ ಈ ಉತ್ತಮ ಸ್ನೇಹ ಬಾಂಧವ್ಯಕ್ಕೆ ಎಲ್ಲ ಕಡೆಯಿಂದ ಮೆಚ್ಚುಗೆ ವ್ಯಕ್ತವಾಗಿದ್ದವು. ಆದರೆ ಇದನ್ನು ಪಾಕ್​ನ ಮಾಜಿ ಆಟಗಾರ ವಾಸಿಂ ಅಕ್ರಮ್(Wasim Akram) ಖಂಡಿಸಿದ್ದರು.

“ಬಾಬರ್ ಅವರು ಕೊಹ್ಲಿಯಿಂದ ಶರ್ಟ್‌ಗಳನ್ನು ಕ್ಯಾಮೆರಾಗಳ ಮುಂದೆ ಪಡೆಯುವ ಬದಲು ಡ್ರೆಸ್ಸಿಂಗ್ ರೂಮ್‌ನಲ್ಲಿ ಪಡೆಯಬೇಕಿತ್ತು. ಅವರ ಚಿಕ್ಕಪ್ಪನ ಮಗ ಕೊಹ್ಲಿಯ ಟಿ ಶರ್ಟ್ ಪಡೆದುಕೊಂಡು ಬರಲು ಹೇಳಿದ್ದಾರೆ. ಇದನ್ನು ಡ್ರೆಸ್ಸಿಂಗ್ ರೂಮ್‌ಗೆ ಹೋಗಿ ಪಡೆದುಕೊಳ್ಳಲಿ ಸಾರ್ವಜನಿಕವಾಗಿ ಹೀಗೆ ಮಾಡಬಾರದು. ನಾನು ಏಕೆ ಈ ಮಾತನ್ನು ಹೇಳುತ್ತಿದ್ದೇನೆ ಎಂದರೆ ಒಂದೆಡೆ ಪಂದ್ಯ ಸೋತ ನೋವು ಪಾಕಿಸ್ತಾನದ ಜನತೆಯಲ್ಲಿ ಕಾಡುತ್ತಿರುತ್ತದೆ. ಅಲ್ಲದೆ ಎಲ್ಲರು ತಾಳ್ಮೆಯನ್ನು ಕಳೆದುಕೊಂಡಿರುತ್ತಾರೆ. ಇಂತಹ ಸಂದರ್ಭದಲ್ಲಿ ಬಾಬರ್​ ಈ ರೀತಿ ಮಾಡಿದ್ದು ಪಾಕ್​ ಅಭಿಮಾನಿಗಳಿಗೆ ಇನ್ನಷ್ಟು ಕೆರಳಿಸುಂತೆ ಮಾಡುತ್ತದೆ. ಬಾಬರ್​ ಅವರ ಈ ನಡೆಗೆ ನಾನು ಕೂಡ ವಿರೋಧ ವ್ಯಕ್ತಪಡಿಸುತ್ತೇನೆ ಎಂದು ಬಹಿರಂಗವಾಗಿಯೇ ತಿವಿದಿದ್ದರು.

Exit mobile version