ಮುಂಬಯಿ: ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ(paris olympics 2024) ಗುರುವಾರ ನಡೆದಿದ್ದ ಪುರುಷರ 50 ಮೀ. ರೈಫಲ್ 3 ಪೊಸಿಷನ್ ಶೂಟಿಂಗ್‌ನಲ್ಲಿ ಕಂಚಿನ ಪದಕ ಗೆದ್ದ ಮಹಾರಾಷ್ಟ್ರದ 28 ವರ್ಷದ ಸ್ವಪ್ನಿಲ್ ಕುಸಾಲೆ(Swapnil Kusale) ಅವರ ಈ ಸಾಧನೆಯನ್ನು ಪರಿಗಣಿಸಿ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂಧೆ(Eknath Shinde) 1 ಕೋಟಿ ಬಹುಮಾನ ಪ್ರಕಟಿಸಿದ್ದಾರೆ. ಕೊಲ್ಹಾಪುರ ಜಿಲ್ಲೆಯ ಕಂಬಲ ವಾಡಿಯವರಾದ ಸ್ವಪ್ನಿಲ್, 2009ರಲ್ಲಿ ಮಹಾರಾಷ್ಟ್ರದ ಕ್ರೀಡಾ ಪ್ರಭೋದಿನಿ ಯೋಜನೆಯಡಿ ಕ್ರೀಡಾ ತರಬೇತಿಗೆ ಆಯ್ಕೆಯಾಗಿದ್ದರು.
ಒಲಿಂಪಿಕ್ಸ್‌ನಲ್ಲಿ ಪುರುಷರ 50 ಮೀ. ರೈಫಲ್ 3 ಪೊಸಿಷನ್ ಸ್ಪರ್ಧೆಯಲ್ಲಿ ಪದಕ ಗೆದ್ದ ಮೊದಲ ಭಾರತೀಯ ಹಾಗೂ 3ನೇ ರೈಫಲ್ ಶೂಟರ್ ಎಂಬ ಇತಿಹಾಸ ಬರೆದಿದ್ದಾರೆ. ಗುರುವಾರ ನಡೆದ ಫೈನಲ್ ಸ್ಪರ್ಧೆಯಲ್ಲಿ ಅವರು ಒಟ್ಟು 451.4 ಅಂಕ ಗಳಿಸುವ ಮೂಲಕ ಕಂಚಿನ ಪದಕಕ್ಕೆ ಕೊರಳೊಡ್ಡಿದ್ದರು. ಸ್ವಪ್ನಿಲ್ ಕುಸಾಲೆಗೆ ಮಹರಾಷ್ಟ್ರ ಸರ್ಕಾರದ ಬಹುಮಾನ ಮೊತ್ತದ ಹೊರತಾಗಿಯೂ ಕೇಂದ್ರ ಸರ್ಕಾರದಿಂದ 30 ಲಕ್ಷ ರೂ. ಮತ್ತು ಭಾರತೀಯ ಒಲಿಂಪಿಕ್ಸ್ ಸಂಸ್ಥೆಯಿಂದ 50 ಲಕ್ಷ ರೂ. ಬಹುಮಾನ ಸಿಗಲಿದೆ.
ನೀತಾ ಅಂಬಾನಿ ಮೆಚ್ಚುಗೆ
ಒಲಿಂಪಿಕ್ಸ್ ಪದಕ ಗೆಲ್ಲುವ ಮೂಲಕ ದೇಶಕ್ಕೆ ಮತ್ತು ರಾಜ್ಯಕ್ಕೆ ಕೀರ್ತಿ ತಂದ ಸ್ವಪ್ನಿಲ್ ಕುಸಾಲೆಗೆ ರಿಲಯನ್ಸ್ ಫೌಂಡೇಶನ್ (Reliance Foundation) ಸಂಸ್ಥಾಪಕಿ ಹಾಗೂ ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿಯ(IOC) ಸದಸ್ಯೆಯಾಗಿರುವ ನೀತಾ ಅಂಬಾನಿ(Nita Ambani) ಅಭಿನಂದನೆ ಸಲ್ಲಿಸಿದ್ದಾರೆ. “ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದು ಇತಿಹಾಸ ನಿರ್ಮಿಸಿದ ಸ್ವಪ್ನಿಲ್ ಕುಸಾಲೆಗೆ ನನ್ನ ಅಭಿನಂದನೆಗಳು. ನಿಮ್ಮ ಈ ಸಾಧನೆಯಿಂದ ದೇಶವೇ ಹೆಮ್ಮೆಪಡುವಂತಾಗಿದೆ. ನಿಮ್ಮ ಕಠಿಣ ಪರಿಶ್ರಮ ಮತ್ತು ಸಮರ್ಪಣೆಯ ಪ್ರತೀಕ ಈ ಗೆಲುವು. ಮುಂದೆಯೂ ಕೂಡ ದೇಶಕ್ಕಾಗಿ ಹಲವು ಪದಕ ಗೆಲ್ಲುವಂತಾಲಿ” ಎಂದು ನೀತಾ ಅಂಬಾನಿ ಹಾರೈಸಿದ್ದಾರೆ.
28 ವರ್ಷದ ಸ್ವಪ್ನಿಲ್ ಕುಶಲೆ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಹಾಗೂ ಆಟಗಾರ ಮಹೇಂದ್ರ ಸಿಂಗ್ ಅವರ ಅಪಟ್ಟ ಅಭಿಮಾನಿ. ಜತೆಗೆ ಧೋನಿಯಂತೆಯೇ ಇವರು ಕೂಡ ರೇಲ್ವೆ ಟಿಕೆಟ್ ನಿರೀಕ್ಷಕರಾಗಿ ಕಾರ್ಯನಿರ್ವಹಿಸಿದ್ದರು. ಧೋನಿಯವರ ಬಯೋಪಿಕ್ ಸಿನೆಮಾವನ್ನು ಪದೇ ಪದೇ ವೀಕ್ಷಿಸಿದ ಬಳಿಕ ಸ್ವಪ್ನಿಲ್ ಕೂಡ ಪೂರ್ಣಪ್ರಮಾಣದಲ್ಲಿ ಶೂಟಿಂಗ್‌ನಲ್ಲಿ ತೊಡಗಿಕೊಂಡರು. ಧೋನಿಯವರಂತೆ ಶಾಂತ ಸ್ವಾಭಾವದ ಈ ಶೂಟರ್ ಇದೀಗ ಒಲಿಂಪಿಕ್ಸ್ ಪದಕವೊಂದನ್ನು ಗೆದ್ದು ಇತಿಹಾಸದ ಪುಟ ಸೇರಿದ್ದಾರೆ. 2015ರ ಕುವೈತ್ ಏಷ್ಯನ್ ಶೂಟಿಂಗ್ ಚಾಂಪಿಯನ್‌ಶಿಪ್ ಜೂನಿಯರ್ ವಿಭಾಗದಲ್ಲಿ ಚಿನ್ನ, 59ನೇ ಹಾಗೂ 61ನೇ ರಾಷ್ಟ್ರೀಯ ಚಾಂಪಿಯನ್‌ಶಿಪ್‌ನಲ್ಲೂ ಚಿನ್ನ ಗೆದ್ದ ಸಾಧನೆ ಮಾಡಿದ್ದಾರೆ.