Site icon Vistara News

Swapnil Kusale: ತವರಿಗೆ ಮರಳಿದ ಸ್ವಪ್ನಿಲ್​ ಕುಸಾಲೆ; ಮುಂಬೈಯಲ್ಲಿ ಭರ್ಜರಿ ಸ್ವಾಗತ

Swapnil Kusale

Swapnil Kusale: Olympic Hero Swapnil Kusale Receives Rousing Welcome as he Returns Home from Paris Victorious

ಮುಂಬಯಿ: ಪ್ಯಾರಿಸ್​ ಒಲಿಂಪಿಕ್ಸ್​ನಲ್ಲಿ(paris olympics 2024) ಪುರುಷರ 50 ಮೀ. ರೈಫಲ್​ 3 ಪೊಸಿಷನ್​ ಶೂಟಿಂಗ್​ನಲ್ಲಿ ಕಂಚಿನ ಪದಕ ಗೆದ್ದ ಮಹಾರಾಷ್ಟ್ರದ 28 ವರ್ಷದ ಸ್ವಪ್ನಿಲ್​ ಕುಸಾಲೆ(Swapnil Kusale) ಅವರು ಇಂದು(ಗುರುವಾರ) ತವರಿಗೆ ಮರಳಿದ್ದಾರೆ. ಮುಂಬಯಿ ವಿಮಾನ ನಿಲ್ದಾಣದಿಂದ ಹೊರಬರುತ್ತಿದ್ದಂತೆ ಹಾರ ಮತ್ತು ಗುಲಾಬಿ ದಳಗಳ ಅಭಿಷೇಕದೊಂದಿಗೆ ಕ್ರೀಡಾಪ್ರೇಮಿಗಳು ಭರ್ಜರಿಯಾಗಿ ಸ್ವಾಗತ ಕೋರಿದರು. ತೆರೆದ ಕಾರಿನ ಮೂಲಕ ಮೆರವಣಿಗೆ ಮಾಡಿ ಸಂಭ್ರಮಿಸಲಾಯಿತು. ಹಲವು ಕ್ರೀಡಾಭಿಮಾನಿಗಳು ಸೆಲ್ಫಿ ತೆಗೆಯಲು ನೂಕು ನುಗ್ಗಲು ಮಾಡುತ್ತಿರುವುದು ಕೂಡ ಕಂಡು ಬಂತು.

ಕೊಲ್ಹಾಪುರ ಜಿಲ್ಲೆಯ ಕಂಬಲ ವಾಡಿಯವರಾದ ಸ್ವಪ್ನಿಲ್​ಗೆ ಈಗಾಗಲೇ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂಧೆ(Eknath Shinde) 1 ಕೋಟಿ ಬಹುಮಾನ ಪ್ರಕಟಿಸಿದ್ದಾರೆ. 2009ರಲ್ಲಿ ಮಹಾರಾಷ್ಟ್ರದ ಕ್ರೀಡಾ ಪ್ರಭೋದಿನಿ ಯೋಜನೆಯಡಿ ಕ್ರೀಡಾ ತರಬೇತಿಗೆ ಆಯ್ಕೆಯಾಗಿದ್ದರು.

ಕಂಚಿನ ಪದಕ ಗೆಲ್ಲುವ ಮೂಲಕ ಸ್ವಪ್ನಿಲ್ ಒಲಿಂಪಿಕ್ಸ್​ನಲ್ಲಿ ಪುರುಷರ 50 ಮೀ. ರೈಫಲ್​ 3 ಪೊಸಿಷನ್​ ಸ್ಪರ್ಧೆಯಲ್ಲಿ ಪದಕ ಗೆದ್ದ ಮೊದಲ ಭಾರತೀಯ ಹಾಗೂ 3ನೇ ರೈಫಲ್​ ಶೂಟರ್​ ಎಂಬ ಇತಿಹಾಸ ನಿರ್ಮಿಸಿದ್ದರು. ಫೈನಲ್​ ಸ್ಪರ್ಧೆಯಲ್ಲಿ ಅವರು ಒಟ್ಟು 451.4 ಅಂಕ ಗಳಿಸುವ ಮೂಲಕ ಕಂಚಿನ ಪದಕಕ್ಕೆ ಕೊರಳೊಡ್ಡಿದ್ದರು. ಸ್ವಪ್ನಿಲ್​ ಕುಸಾಲೆಗೆ ಮಹರಾಷ್ಟ್ರ ಸರ್ಕಾರದ ಬಹುಮಾನ ಮೊತ್ತದ ಹೊರತಾಗಿಯೂ ಕೇಂದ್ರ ಸರ್ಕಾರದಿಂದ 30 ಲಕ್ಷ ರೂ. ಮತ್ತು ಭಾರತೀಯ ಒಲಿಂಪಿಕ್ಸ್​ ಸಂಸ್ಥೆಯಿಂದ 50 ಲಕ್ಷ ರೂ. ಬಹುಮಾನ ಸಿಗಲಿದೆ.

ಇದನ್ನೂ ಓದಿ Paris Olympics: ಒಲಿಂಪಿಕ್ಸ್​ನಲ್ಲಿಯೂ ಸದ್ದು ಮಾಡಿದ ‘​ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು’ ಹಾಡು; ವಿಡಿಯೊ ವೈರಲ್​

28 ವರ್ಷದ ಸ್ವಪ್ನಿಲ್ ಕುಸಾಲೆ ಭಾರತ ಕ್ರಿಕೆಟ್​ ತಂಡದ ಮಾಜಿ ನಾಯಕ ಹಾಗೂ ಆಟಗಾರ ಮಹೇಂದ್ರ ಸಿಂಗ್​ ಅವರ ಅಪಟ್ಟ ಅಭಿಮಾನಿ. ಜತೆಗೆ ಧೋನಿಯಂತೆಯೇ ಇವರು ಕೂಡ ರೇಲ್ವೆ ಟಿಕೆಟ್ ನಿರೀಕ್ಷಕರಾಗಿ ಕಾರ್ಯನಿರ್ವಹಿಸಿದ್ದರು. ಧೋನಿಯವರ ಬಯೋಪಿಕ್ ಸಿನೆಮಾವನ್ನು ಪದೇ ಪದೇ ವೀಕ್ಷಿಸಿದ ಬಳಿಕ ಸ್ವಪ್ನಿಲ್ ಕೂಡ ಪೂರ್ಣಪ್ರಮಾಣದಲ್ಲಿ ಶೂಟಿಂಗ್‌ನಲ್ಲಿ ತೊಡಗಿಕೊಂಡರು. ಧೋನಿಯವರಂತೆ ಶಾಂತ ಸ್ವಾಭಾವದ ಈ ಶೂಟರ್​ ಇದೀಗ ಒಲಿಂಪಿಕ್ಸ್‌ ಪದಕವೊಂದನ್ನು ಗೆದ್ದು ಇತಿಹಾಸದ ಪುಟ ಸೇರಿದ್ದಾರೆ. 2015ರ ಕುವೈತ್​ ಏಷ್ಯನ್‌ ಶೂಟಿಂಗ್‌ ಚಾಂಪಿಯನ್‌ಶಿಪ್‌ ಜೂನಿಯರ್‌ ವಿಭಾಗದಲ್ಲಿ ಚಿನ್ನ, 59ನೇ ಹಾಗೂ 61ನೇ ರಾಷ್ಟ್ರೀಯ ಚಾಂಪಿಯನ್‌ಶಿಪ್‌ನಲ್ಲೂ ಚಿನ್ನ ಗೆದ್ದ ಸಾಧನೆ ಮಾಡಿದ್ದಾರೆ. 

ಬುಧವಾರವಷ್ಟೇ ಪ್ಯಾರಿಸ್​ ಒಲಿಂಪಿಕ್ಸ್(paris olympics)​ ಅವಳಿ ಕಂಚಿನ ಪದಕ ವಿಜೇತೆ, ಶೂಟರ್​ ಮನು ಭಾಕರ್(Manu Bhaker)​ ತವರಿಗೆ ಮರಳಿದ್ದರು. ನವದೆಹಲಿಗೆ ಬಂದಿಳಿದಿದ್ದ ಅವರಿಗೂ ಭರ್ಜರಿ ಸ್ವಾಗತ ಕೋರಲಾಗಿತ್ತು. 22 ವರ್ಷದ ಮನು ಭಾಕರ್ ಮಹಿಳೆಯರ ವೈಯಕ್ತಿಕ 10 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಮತ್ತು ಸರಬ್ಜೋತ್ ಸಿಂಗ್ ಜತೆಗೂಡಿ 10 ಮೀಟರ್ ಏರ್ ಪಿಸ್ತೂಲ್ ಮಿಶ್ರ ಸ್ಪರ್ಧೆಯಲ್ಲೂ ಕಂಚಿನ ಪದಕ ಜಯಿಸಿದ್ದರು.

Exit mobile version