ಬಾಸೆಲ್ (ಸ್ವಿಜರ್ಲೆಂಡ್): ಸ್ವಿಸ್ ಓಪನ್ ಸೂಪರ್ 300 ಬ್ಯಾಡ್ಮಿಂಟನ್(Swiss Open Super Series 300 badminton) ಪಂದ್ಯಾವಳಿಯಲ್ಲಿ ಭಾರತದ ಭರವಸೆಯ ಜೋಡಿ ಚಿರಾಗ್ ಶೆಟ್ಟಿ(Chirag Shetty) ಮತ್ತು ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ(Satwiksairaj Rankireddy) ಸೆಮಿಫೈನಲ್ ಪ್ರವೇಶಿಸಿದ್ದಾರೆ.
ಶುಕ್ರವಾರ ತಡರಾತ್ರಿ ನಡೆದ ಪುರುಷರ ಡಬಲ್ಸ್ ವಿಭಾಗದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ವಿಶ್ವದ 6ನೇ ಶ್ರೇಯಾಂಕದ ಭಾರತೀಯ ಜೋಡಿ ಡೆನ್ಮಾರ್ಕ್‌ನ ಜೆಪ್ ಬೇ-ಲಾಸ್ಸೆ ಮಲ್ಹೆದ್ ವಿರುದ್ಧ ಮೂರು ಸುತ್ತಿನ ಮ್ಯಾರಥಾನ್ ಹೋರಾಟದಲ್ಲಿ 15-21, 21-11, 21-14 ಗೇಮ್ಗಳ ಅಂತರದಿಂದ ಗೆಲುವು ಸಾಧಿಸುವಲ್ಲಿ ಯಶಸ್ವಿಯಾದರು.
ಉಭಯ ದೇಶದ ಈ ಆಟಗಾರರ ಹೋರಾಟ 54 ನಿಮಿಷಗಳ ಕಾಲ ಸಾಗಿತು. ಮೊದಲ ಸುತ್ತಿನಲ್ಲಿ ಸೋತ ಭಾರತದ ಜೋಡಿ ಆ ಬಳಿಕದ 2 ಗೇಮ್ಗಳಲ್ಲಿ ಹಿಡಿತ ಸಾಧಿಸುವಲ್ಲಿ ಯಶಸ್ಸು ಸಾಧಿಸಿತು. ಶನಿವಾರ ತಡರಾತ್ರಿ ನಡೆಯಲಿರುವ ಸೆಮಿಫೈನಲ್ ಪಂದ್ಯದಲ್ಲಿ ಚಿರಾಗ್-ಸಾತ್ವಿಕ್ ಜೋಡಿ ಮಲೇಷ್ಯಾದ ಓಂಗ್ ಯೂ ಸಿನ್ (Ong Yew Sin) ಮತ್ತು ಟಿಯೊ ಈ ಯಿ (Teo Ee Yi ) ವಿರುದ್ಧ ಆಡಲಿದ್ದಾರೆ.
ಇದನ್ನೂ ಓದಿ Swiss Open: ಸ್ವಿಸ್ ಓಪನ್ ಬ್ಯಾಡ್ಮಿಂಟನ್; ಪ್ರಶಸ್ತಿ ಉಳಿಸಿಕೊಳ್ಳಲಿದ್ದಾರಾ ಪಿ.ವಿ. ಸಿಂಧು?
ಸದ್ಯ ಕೂಟದಲ್ಲಿ ಭಾರತದ ಪದಕ ಭರವಸೆಯಾಗಿ ಈ ಜೋಡಿ ಮಾತ್ರ ಉಳಿದುಕೊಂಡಿದೆ. ಉಳಿದ ಎಲ್ಲ ವಿಭಾಗದಲ್ಲಿಯೂ ಭಾರತೀಯ ಬ್ಯಾಡ್ಮಿಂಟನ್ ತಾರೆಗಳು ಸೋಲು ಕಂಡು ನಿರಾಸೆ ಅನುಭವಿಸಿದ್ದಾರೆ. ಅದರಲ್ಲೂ ಹಾಲಿ ಚಾಂಪಿಯನ್ ಪಿ.ವಿ. ಸಿಂಧು ಅವರ ಮೇಲೆ ಹೆಚ್ಚಿನ ನಿರೀಕ್ಷೆ ಇರಿಸಲಾಗಿತ್ತು. ಆದರೆ ಅವರು ದ್ವಿತೀಯ ಸುತ್ತಿನಲ್ಲೇ ಆಟ ಮುಗಿಸಿ ಈ ನಿರೀಕ್ಷೆಯನ್ನು ಹುಸಿಯಾಗಿಸಿದರು.