ಬಾಸೆಲ್ (ಸ್ವಿಟ್ಜರ್ಲೆಂಡ್): ಕಳೆದ ಕೆಲ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಮೊದಲ ಸುತ್ತಿನಲ್ಲೇ ಸೋಲಿನ ಆಘಾತ ಕಾಣುತ್ತಿರುವ ಭಾರತದ ಅವಳಿ ಒಲಿಂಪಿಕ್ಸ್ ಪದಕ ವಿಜೇತೆ ಪಿ.ವಿ. ಸಿಂಧು (Sindhu)ಇದೀಗ ಸ್ವಿಸ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ(Swiss Open) ಕಣಕ್ಕಿಳಿಯಲು ಸಜ್ಜಾಗಿದ್ದಾರೆ.
ಈ ಟೂರ್ನಿಯಲ್ಲಿ ಕಳೆದ ಬಾರಿಯ ಚಾಂಪಿಯನ್ ಆಗಿರುವ ಸಿಂಧು ಪ್ರಶಸ್ತಿ ಉಳಿಸಿಕೊಳ್ಳಲಿದ್ದಾರಾ ಅಥವಾ ಮೊದಲ ಸುತ್ತಿನಲ್ಲೇ ಸೋತು ಟೂರ್ನಿಯಿಂದ ಹೊರಬೀಳಲಿದ್ದಾರಾ ಎಂದು ಕಾದು ನೋಡಬೇಕಿದೆ. ಸದ್ಯ ಸಿಂಧು ಅವರ ಆಟವನ್ನು ನೋಡುವಾಗ ಅವರು ಪ್ರಶಸ್ತಿ ಗೆಲ್ಲುವುದು ಬಲು ಕಷ್ಟ ಎನ್ನಲಡ್ಡಿಯಿಲ್ಲ. ಏಕೆಂದರೆ ಸಿಂಧು ಶ್ರೇಯಾಂಕ ರಹಿತ ಆಟಗಾರ್ತಿಯರ ಸವಾಲನ್ನು ಮೆಟ್ಟಿನಿಲ್ಲಲು ಸಾಧ್ಯವಾಗುತ್ತಿಲ್ಲ. ಮೊದಲ ಸುತ್ತಿನ ಪಂದ್ಯದಲ್ಲಿ ಸಿಂಧು ಆತಿಥೇಯ ನಾಡಿನ ಜೆಂಜಿರಾ ಸ್ಟೆಡಲ್‌ಮನ್ ವಿರುದ್ಧ ಅದೃಷ್ಟ ಪರೀಕ್ಷೆಗೆ ಇಳಿಯಲಿದ್ದಾರೆ.
ಪುರುಷರ ಸಿಂಗಲ್ಸ್ ವಿಭಾಗದ ಮೊದಲ ಸುತ್ತಿನ ಪಂದ್ಯದಲ್ಲಿ ಪ್ರಣಯ್ಗೆ(Prannoy) ಚೀನಾದ ಶಿ ಯುಕಿ ಅವರ ಸವಾಲು ಎದುರಾಗಿದೆ. ಲಕ್ಷ್ಯ ಸೇನ್ ಅವರು ಹಾಂಗ್‌ಕಾಂಗ್‌ನ ಲೀ ಚೆವುಕ್ ಯಿವ್ ಎದುರು, ಕಿದಂಬಿ ಶ್ರೀಕಾಂತ್ ಚೀನಾದ ವೆಂಗ್ ಹಾಂಗ್ ವಿರುದ್ಧ ಸೆಣಸಾಡಲಿದ್ದಾರೆ.
ಇದನ್ನೂ ಓದಿ All England Badminton: ಮೊದಲ ಸುತ್ತಿನಲ್ಲೇ ಸಿಂಧುಗೆ ಸೋಲಿನ ಆಘಾತ
ಕಳೆದ ವಾರ ಮುಕ್ತಾಯಕಂಡ ಆಲ್ ಇಂಗ್ಲೆಂಡ್ ಟೂರ್ನಿಯಲ್ಲಿ ಸೆಮಿಫೈನಲ್ ಪಂದ್ಯದಲ್ಲಿ ಎಡವಿದ್ದ ಮಹಿಳಾ ಡಬಲ್ಸ್ ಜೋಡಿಯಾದ ಗಾಯತ್ರಿ ಗೋಪಿಚಂದ್ ಮತ್ತು ತ್ರಿಶಾ ಜೋಲಿ ಅವರು ಮೊದಲ ಸುತ್ತಿನಲ್ಲಿ ಇಂಡೊನೇಷ್ಯಾದ ಅಪ್ರಿಯಾನಿ ರಹಾಯು- ಸಿತಿ ಫದಿಯಾ ಸಿಲ್ವಾ ವಿರುದ್ಧ ಆಡಲಿದ್ದಾರೆ. ಅಲ್ಲಿ ಕೈ ತಪ್ಪಿದ ಪ್ರಶಸ್ತಿಯನ್ನು ಈ ಟೂರ್ನಿಯಲ್ಲಿ ಗೆಲ್ಲುವ ವಿಶ್ವಾಸದಲ್ಲಿದೆ ಈ ಜೋಡಿ. ಇನ್ನು ಪುರುಷರ ಡಬಲ್ಸ್ ವಿಭಾಗದಲ್ಲಿ ಸಾತ್ವಿಕ್ ಸಾಯಿರಾಜ್ ರಾಂಕಿ ರೆಡ್ಡಿ-ಚಿರಾಗ್ ಶೆಟ್ಟಿ ಜೋಡಿಗೆ ಚೀನಾದ ಲಿಯಾಂಗ್ ವೇ ಕೆಂಗ್- ವಾಂಗ್ ಸವಾಲು ಎದುರಾಗಲಿದೆ.