ಬೆಂಗಳೂರು: ಗ್ರೀಸ್ ದೇಶದಲ್ಲಿ ನಡೆದ ಮಹಿಳೆಯರ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯವೊಂದರಲ್ಲಿ ಅನಗತ್ಯ ದಾಖಲೆ ಸೃಷ್ಟಿಯಾಗಿದೆ. ರೊಮೇನಿಯಾ ಮಹಿಳೆಯರು ಲಕ್ಸೆಂಬರ್ಗ್ ಮಹಿಳೆಯರ ವಿರುದ್ಧದ ಪಂದ್ಯದಲ್ಲಿ 115 ಇತರ ರನ್ಗಳನ್ನು ಬಿಟ್ಟುಕೊಡುವ ಮೂಲಕ ಕಳಪೆ ದಾಖಲೆಯೊಂದನ್ನು ಸೃಷ್ಟಿ ಮಾಡಿದ್ದಾರೆ. 120 ಎಸೆತಗಳ ಈ ಆಟದಲ್ಲಿ 115 ರನ್ಗಳನ್ನು ಬಿಟ್ಟುಕೊಡುವ ಮೂಲಕ ವಿಶ್ವ ದಾಖಲೆಯನ್ನೇ ಸೃಷ್ಟಿಸಿದ್ದಾರೆ ರೊಮೇನಿಯಾದ ಮಹಿಳೆಯರು
115 ಎಕ್ಸ್ಟ್ರಾ ರನ್ಗಳಲ್ಲಿ 105 ವೈಡ್ಗಳು ಸೇರಿಕೊಂಡಿವೆ. ಈ ಮೂಲಕ ನಾಲ್ಕು ವರ್ಷಗಳ ಕಾಲ ಇದ್ದ 114 ಎಕ್ಸ್ಟ್ರಾ ರನ್ಗಳ ಹಿಂದಿನ ದಾಖಲೆಯನ್ನು ಮೀರಿಸಿದ್ದಾರೆ. ರೊಮೇನಿಯಾ ಮಹಿಳೆಯರು ಮತ್ತು ಲಕ್ಸೆಂಬರ್ಗ್ ಮಹಿಳೆಯರ ನಡುವಿನ ಮುಖಾಮುಖಿಯು ಎಕ್ಸ್ಟ್ರಾ ರನ್ಗಳ ಮೂಲಕವೇ ವಿಶ್ವ ಪ್ರಸಿದ್ಧಿ ಪಡೆಯಿತು. ಈ ಹಿಂದೆ 2019ರಲ್ಲಿ ಮೆಕ್ಸಿಕೊ ಮಹಿಳಾ ಮತ್ತು ಕೋಸ್ಟರಿಕಾ ಮಹಿಳೆಯರ ನಡುವಿನ ಪಂದ್ಯದಲ್ಲಿ 114 ಇತರ ರನ್ಗಳ ದಾಖಲೆ ಸೃಷ್ಟಿಯಾಗಿತ್ತು. ಇಷ್ಟೊಂದು ಇತರ ರನ್ಗಳನ್ನು ಬಿಟ್ಟುಕೊಡಲು ಸಾಧ್ಯವೇ ಎಂದು ಅಭಿಮಾನಿಗಳು ಅಂದುಕೊಳ್ಳುವಾಗಲೇ ರೊಮೇನಿಯಾ ತಂಡ ದಾಖಲೆ ಮುರಿದಿದೆ.
ಕಾರ್ಫುನಲ್ಲಿ ನಡೆದ ಮುಖಾಮುಖಿಯಲ್ಲಿ ರೊಮೇನಿಯಾ ಮಹಿಳಾ ತಂಡ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಆದರೆ ಬೌಲಿಂಗ್ನಲ್ಲಿ ನಿಯಂತ್ರಣ ಸಾಧಿಸಲು ಸಾಧ್ಯವಾಗದೇ ಕಳಪೆ ದಾಖಲೆ ಮಾಡಿತು. ಇಷ್ಟೆಲ್ಲ ಆದರೂ ಲಕ್ಸೆಂಬರ್ಗ್ ಮಹಿಳೆಯರ ತಂಡ ದಾಖಲಿಸಿದ್ದ 154 ರನ್ಗಳನ್ನು ಮಾತ್ರ ಎಂಬುದು ಅಚ್ಚರಿ.
ರೊಮೇನಿಯಾ ಮಹಿಳಾ ತಂಡದ ನಾಯಕಿ ಎಮ್ಮಾ ರಾಬರ್ಟ್ಸ್ ಅಷ್ಟೊಂದು ಇತರ ರನ್ಗಳನ್ನು ಬಿಟ್ಟುಕೊಟ್ಟ ಹೊರತಾಗಿಯೂ ಕ್ರೀಡಾ ಮನೋಭಾವವನ್ನು ಬಿಡಲಿಲ್ಲ “ದಾಖಲೆಗಳನ್ನು ಮುರಿಯಲೆಂದೇ ಮಾಡಲಾಗುತ್ತದೆ. ನಮ್ಮ ಪಾಲಿಗೆ ಇದು ಕೆಟ್ಟ ದಿನ ಲಕ್ಸೆಂಬರ್ಗ್ ತಂಡಕ್ಕೆ ಸಾಧನೆಗೆ ಅಭಿನಂದನೆಗಳು. ನಾವು ಮತ್ತೆ ಬಲವಾಗಿ ಹಿಂತಿರುಗುತ್ತೇವೆ ಎಂದು ತಮ್ಮ ಕಳಪೆ ಸಾಧನೆ ಮರೆಯುವಂತೆ ಹೇಳಿಕೆ ನೀಡಿದರು.
ದಾಖಲೆಯ ಬಗ್ಗೆ ಕ್ರಿಕೆಟ್ ಅಭಿಮಾನಿಗಳು ತ್ವರಿತವಾಗಿ ಪ್ರತಿಕ್ರಿಯಿಸಿದರು. ಕ್ರಿಕೆಟ್ ದಾಖಲೆ ಪುಸ್ತಕಗಳಲ್ಲಿ ತಮ್ಮ ಹೆಸರುಗಳನ್ನು ಕೆತ್ತಿದ ಆಟಗಾರರಿಗೆ ಸಾಮಾಜಿಕ ಮಾಧ್ಯಮ ಫ್ಲ್ಯಾಟ್ಫಾರ್ಮ್ಗಳು, ಮೀಮ್ಗಳು, ಜೋಕ್ಗಳು ಸೃಷ್ಟಿಯಾದವು.
ಇದನ್ನೂ ಓದಿ: World Cup 2023 : ಟಿಕೆಟ್ಗಳು ಸೋಲ್ಡ್ ಔಟ್; ಮುಗಿಯದ ಗೋಳು ಎಂದ ಕ್ರಿಕೆಟ್ ಅಭಿಮಾನಿಗಳು
ಕ್ರಿಕೆಟ್ ತಜ್ಞರು ಮತ್ತು ಮಾಜಿ ಆಟಗಾರರು ಕಳಪೆ ದಾಖಲೆ ಬಗ್ಗೆ ತಮ್ಮ ಅಭಿಪ್ರಾಯ ಬರೆದಿದ್ದಾರೆ. ವೀಕ್ಷಕವಿವರಣೆಗಾರ ಡೇವಿಡ್ ಮಿಲ್ಲರ್ ತಮ್ಮ ಆಶ್ಚರ್ಯವನ್ನು ವ್ಯಕ್ತಪಡಿಸಿದರು, “ನಾನು ಹಲವಾರು ಟಿ 20 ಪಂದ್ಯಗಳನ್ನು ನೋಡಿದ್ದೇನೆ, ಆದರೆ ಇದು ನನ್ನ ನೆನಪಿನಲ್ಲಿ ಶಾಶ್ವತವಾಗಿ ಉಳಿಯುತ್ತದೆ. ಇದು ಎಲ್ಲರನ್ನೂ ತಮ್ಮ ಆಸನಗಳ ಅಂಚಿನಲ್ಲಿ ಇರಿಸಿದ ಪಂದ್ಯವಾಗಿತ್ತು ಎಂದು ಬರೆದುಕೊಂಡಿದ್ದಾರೆ.
ಮಾಜಿ ಅಂತಾರಾಷ್ಟ್ರೀಯ ಕ್ರಿಕೆಟ್ ಆಟಗಾರರ್ತಿ ಲಿಸಾ ಪಟೇಲ್ “ಕ್ರಿಕೆಟ್ ಅನಿಶ್ಚಿತತೆಯ ಆಟವಾಗಿದೆ, ಮತ್ತು ಇಂದಿನ ಪಂದ್ಯವು ಅದಕ್ಕೆ ಸಂಪೂರ್ಣ ಉದಾಹರಣೆಯಾಗಿದೆ. ಇದು ಕೇವಲ ಸಂಖ್ಯೆಗಳ ಬಗ್ಗೆ ಅಲ್ಲ; ಇದು ಕ್ರಿಕೆಟ್ ಜೀವ ತುಂಬಬಹುದಾದ ನಾಟಕ ಮತ್ತು ಸಸ್ಪೆನ್ಸ್ ಬಗ್ಗೆ ಎಂದು ಬರೆದುಕೊಂಡಿದ್ದಾರೆ.