Site icon Vistara News

T20 Ranking | ಸೂರ್ಯ ನಂ.1 ಸ್ಥಾನ ಭದ್ರ, ಟಾಪ್​ 10ನಿಂದ ಹೊರಬಿದ್ದ ವಿರಾಟ್​ ಕೊಹ್ಲಿ

surya

ದುಬೈ: ಐಸಿಸಿ ಟಿ20 ಕ್ರಿಕೆಟ್​ ಬ್ಯಾಟ್ಸ್‌ಮನ್‌ಗಳ ನೂತನ ಶ್ರೇಯಾಂಕವನ್ನು ಬಿಡುಗಡೆ ಮಾಡಿದ್ದು, ಹೊಸ ರ‍್ಯಾಂಕಿಂಗ್‌ನಲ್ಲಿ (T20 Ranking) ಸೂರ್ಯಕುಮಾರ್ ಯಾದವ್ ಮತ್ತೆ ಮೊದಲ ಸ್ಥಾನ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ವಿರಾಟ್​ ಕೊಹ್ಲಿ ಟಾಪ್​ 10ನಿಂದ ಹೊರಬಿದ್ದಿದ್ದಾರೆ.

ಕಳೆದ 7 ದಿನಗಳಲ್ಲಿ ಸೂರ್ಯಕುಮಾರ್ ಯಾದವ್ ಟಿ20 ಶ್ರೇಯಾಂಕದಲ್ಲಿ ನಂಬರ್ ಒನ್ ಬ್ಯಾಟ್ಸ್‌ಮನ್ ಆಗಿ ಆಯ್ಕೆಯಾಗುತ್ತಿರುವುದು ಇದು ಎರಡನೇ ಬಾರಿ. ಈ ಹಿಂದೆ ನವೆಂಬರ್ 2 ರಂದು ಟಿ20 ಬ್ಯಾಟ್ಸ್‌ಮನ್‌ಗಳ ICC ಶ್ರೇಯಾಂಕದಲ್ಲಿ ಮೊದಲ ಬಾರಿಗೆ ನಂಬರ್ ಒನ್ ಪಟ್ಟ ಅಲಂಕರಿಸಿದ್ದರು. ಈಗ 7 ದಿನಗಳ ನಂತರ ಮತ್ತೆ ತಮ್ಮ ಸ್ಥಾನವನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಆಶ್ಚರ್ಯಕರ ಸಂಗತಿಯೆಂದರೆ, ಐಸಿಸಿ ಅಕ್ಟೋಬರ್‌ ತಿಂಗಳ ಆಟಗಾರ ಪ್ರಶಸ್ತಿ ಗೆದ್ದಿರುವ ವಿರಾಟ್ ಕೊಹ್ಲಿ ನೂತನ ಟಿ20 ಶ್ರೇಯಾಂಕದಲ್ಲಿ ಟಾಪ್ 10ನಿಂದ ಹೊರಬಿದ್ದಿದ್ದಾರೆ. ವಿರಾಟ್ ಟಿ20 ವಿಶ್ವ ಕಪ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರನೆನಿಸಿಕೊಂಡಿದ್ದು, ತಂಡದ ಪರ 246 ರನ್ ಗಳಿಸಿದ್ದಾರೆ. ಆದಾಗ್ಯೂ, ಬಾಂಗ್ಲಾ ವಿರುದ್ಧ ವಿರಾಟ್ ಅವರ ಕಳಪೆ ಪ್ರದರ್ಶನ ಅವರನ್ನು ಟಾಪ್ 10ನಿಂದ ಹೊರದಬ್ಬಿದೆ.

ಹಸರಂಗ ನಂ.1

ಬೌಲಿಂಗ್​ ಶ್ರೇಯಾಂಕದಲ್ಲಿ ಶ್ರೀಲಂಕಾದ ಸ್ಪಿನ್ನರ್ ವನಿಂದು ಹಸರಂಗ ನಂಬರ್ 1 ಟಿ20 ಅಂತಾರಾಷ್ಟ್ರೀಯ ಬೌಲರ್‌ ಆಗಿ ಮರಳಿ ಅಗ್ರಸ್ಥಾನಕ್ಕೇರಿದ್ದಾರೆ. ಟಿ20 ವಿಶ್ವ ಕಪ್ 2022ರ ಅಂತಿಮ ಸೂಪರ್ 12 ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಹಸರಂಗ 23 ರನ್ ನೀಡಿ 2 ವಿಕೆಟ್ ಕಬಳಿಸಿದ್ದು, ಒಟ್ಟು 5 ಪಂದ್ಯಗಳಲ್ಲಿ 15 ವಿಕೆಟ್ ಕಬಳಿಸುವ ಮೂಲಕ ಹೆಚ್ಚು ವಿಕೆಟ್ ಪಡೆದ ಸ್ಪಿನ್ನರ್ ಆಗಿ ಹೊರಹೊಮ್ಮಿದ ಸಾಧನೆ ಮಾಡಿದ್ದಾರೆ. ಈ ಪ್ರದರ್ಶನದಿಂದ ಶ್ರೇಯಾಂಕದಲ್ಲಿ ನಂ.1 ಆಗಿದ್ದಾರೆ. ಉಳಿದಂತೆ ರವಿಚಂದ್ರನ್ ಅಶ್ವಿನ್ 5 ಸ್ಥಾನ ಏರಿಕೆಗೊಂಡು 13ನೇ ಸ್ಥಾನ ಪಡೆದಿದ್ದಾರೆ. ಇನ್ನು ವೇಗಿ ಅರ್ಶ್​ದೀಪ್​ ಸಿಂಗ್ ಕೂಡ ರ‍್ಯಾಂಕಿಂಗ್‌ನಲ್ಲಿ ಗಮನಾರ್ಹವಾಗಿ ಏರಿಕೆಗೊಂಡಿದ್ದು 23ನೇ ಸ್ಥಾನ ಪಡೆದಿದ್ದಾರೆ.

ಇದನ್ನೂ ಓದಿ | T20 World Cup | ಇಂಗ್ಲೆಂಡ್‌ ವಿರುದ್ಧವೂ ಪಂತ್‌ ಕಣಕ್ಕಿಳಿಯುವ ಸುಳಿವು ನೀಡಿದ ಡ್ರಾವಿಡ್‌

Exit mobile version