ದುಬೈ: ಐಸಿಸಿ ನೂತನ ಟಿ20 ಶ್ರೇಯಾಂಕದಲ್ಲಿ(T20 Ranking) ಟೀಮ್ ಇಂಡಿಯಾದ ಬ್ಯಾಟರ್ ಸೂರ್ಯಕುಮಾರ್ ಯಾದವ್ ನಂ.1 ಸ್ಥಾನದಲ್ಲಿಯೇ ಮುಂದುವರಿದಿದ್ದಾರೆ. ಬುಧವಾರ ಪ್ರಕಟಗೊಂಡ ಈ ಪಟ್ಟಿಯಲ್ಲಿ ಸೂರ್ಯಕುಮಾರ್ 906 ರೇಟಿಂಗ್ ಅಂಕಗಳೊಂದಿಗೆ ಅಗ್ರ ಸ್ಥಾನದಲ್ಲಿದ್ದಾರೆ.
ಪಾಕಿಸ್ತಾನದ ವಿಕೆಟ್ ಕೀಪರ್ ಕಮ್ ಬ್ಯಾಟರ್ ಮೊಹಮ್ಮದ್ ರಿಜ್ವಾನ್ (811 ರೇಟಿಂಗ್ ಪಾಯಿಂಟ್ಸ್) ಮತ್ತು ಬಾಬರ್ ಅಜಂ (755) ಅವರು ಕ್ರಮವಾಗಿ ಎರಡು ಹಾಗೂ ಮೂರನೇ ಸ್ಥಾನ ಪಡೆದಿದ್ದಾರೆ. ದಕ್ಷಿಣ ಆಫ್ರಿಕಾ ಏಡೆನ್ ಮಾರ್ಕ್ರಮ್(748) ಹಾಗೂ ಕಿವೀಸ್ನ ಎಡಗೈ ಬ್ಯಾಟರ್ ಡೆವೊನ್ ಕಾನ್ವೆ (745) ಆ ಬಳಿಕದ ಸ್ಥಾನದಲ್ಲಿದ್ದಾರೆ. ಟೀಮ್ ಇಂಡಿಯಾದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ 15ನೇ ಸ್ಥಾನ ಪಡೆದಿದ್ದಾರೆ.
ಬೌಲರ್‌ಗಳ ಪಟ್ಟಿಯಲ್ಲಿ ಅಫಘಾನಿಸ್ತಾನದ ಸ್ಪಿನ್ನರ್ ರಶೀದ್ ಖಾನ್ ಅಗ್ರಸ್ಥಾನದಲ್ಲಿ ಮುಂದುವರಿದಿದ್ದಾರೆ. ಫಜಲ್‌ಹಕ್ ಫರೂಕಿ ಎರಡನೇ ಸ್ಥಾನದಲ್ಲಿದ್ದಾರೆ. ಮೊದಲೆಡರು ಸ್ಥಾನ ಅಘಘಾನಿಸ್ತಾನದ ಪಾಲಾಗಿದೆ. ಆಸ್ಟ್ರೇಲಿಯಾದ ಜೋಶ್ ಹ್ಯಾಜಲ್ವುಡ್ ಮೂರನೇ, ಶ್ರೀಲಂಕಾದ ವನಿಂದು ಹಸರಂಗ ನಾಲ್ಕನೇ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ. ವಿಪರ್ಯಾಸವೆಂದರೆ ಭಾರತದ ಯಾವುದೇ ಬೌಲರ್ ಅಗ್ರ 10 ರಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿಲ್ಲ.
ಇದನ್ನೂ ಓದಿ IPL 2023: ನಾಯಕನಾಗಿ ಐಪಿಎಲ್ನಲ್ಲಿ ನೂತನ ದಾಖಲೆ ಬರೆದ ಡೇವಿಡ್ ವಾರ್ನರ್
ಕಳಪೆ ಫಾರ್ಮ್ನಲ್ಲಿರುವ ಸೂರ್ಯಕುಮಾರ್
ಸೂರ್ಯಕುಮಾರ್ ಯಾದವ್ ಅವರು ನಂ.1 ಸ್ಥಾನದಲ್ಲಿ ಕಾಣಿಸಿಕೊಂಡರೂ ಸದ್ಯ ಅವರು ಕಳಪೆ ಬ್ಯಾಟಿಂಗ್ ಫಾರ್ಮ್ನಲ್ಲಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯಲ್ಲಿ ಬ್ಯಾಟಿಂಗ್ ಲಯ ಕಳೆದುಕೊಂಡ ಅವರು ಇದೀಗ ಐಪಿಎಲ್ನಲ್ಲಿಯೂ ಸತತ ವೈಫಲ್ಯ ಅನುಭವಿಸುತ್ತಲೇ ಬಂದಿದ್ದಾರೆ. ಆಸೀಸ್ ವಿರುದ್ಧದ ಏಕದಿನ ಸರಣಿಯಲ್ಲಿ ಹ್ಯಾಟ್ರಿಕ್ ಗೋಲ್ಡನ್ ಡಕ್ ಆಗಿದ್ದರು. ಸದ್ಯ ಐಪಿಎಲ್ನಲ್ಲಿ ಆಡಿದ ಮೂರು ಪಂದ್ಯಗಳಲ್ಲಿ ಅವರು ಗಳಿಸಿದ್ದು ಕೇವಲ 16 ರನ್ (15, 1 ಹಾಗೂ ಶೂನ್ಯಕ್ಕೆ ಔಟಾಗಿದ್ದರು). ಟೀಮ್ ಇಂಡಿಯಾದ ಭರವಸೆಯ ಆಟಗಾರನೆಂದು ಹೇಳುತ್ತಿದ್ದ ಅವರನ್ನು ಇದೀಗ ಮಾಜಿ ಆಟಗಾರರು ಟೀಕಿಸಲು ಆರಂಭಿಸಿದ್ದಾರೆ. ಒಂದೊಮ್ಮೆ ಅವರು ಮುಂದಿನ ಪಂದ್ಯಗಳಲ್ಲಿ ತಮ್ಮ ಹಳೆಯ ಬ್ಯಾಟಿಂಗ್ ಫಾರ್ಮ್ ಕಂಡುಕೊಳ್ಳದೇ ಹೋದರೆ ಅವರಿಗೆ ಟೀಮ್ ಇಂಡಿಯಾದ ಬಾಗಿಲು ಮುಚ್ಚುವುದು ಖಚಿತ.