ದುಬೈ: ಪ್ರವಾಸಿ ಶ್ರೀಲಂಕಾ ವಿರುದ್ಧದ ದ್ವಿತೀಯ ಟಿ20 ಪಂದ್ಯವನ್ನಾಡಲು ಟೀಮ್ ಇಂಡಿಯಾ ಆಟಗಾರರು ಸಜ್ಜಾಗಿದ್ದಾರೆ. ಇಂದು ಸಂಜೆ (ಗುರುವಾರ) ಪುಣೆಯಲ್ಲಿ ಈ ಪಂದ್ಯ ನಡೆಯಲಿದೆ. ಇದೀಗ ಪಂದಕ್ಕೂ ಮುನ್ನ ಐಸಿಸಿ ಬಿಡುಗಡೆಗೊಳಿಸಿದ ಟಿ20 ಶ್ರೇಯಾಂಕದಲ್ಲಿ(T20 Ranking) ದೀಪಕ್ ಹೂಡಾ, ಇಶಾನ್ ಕಿಶನ್ ಸೇರಿ ಕೆಲ ಆಟಗಾರರು ಮುಂಬಡ್ತಿ ಪಡೆದಿದ್ದಾರೆ.
ಗುರುವಾರ ಬಿಡುಗಡೆ ಮಾಡಿರುವ ಐಸಿಸಿಯ ನೂತನ ಟಿ20 ಬ್ಯಾಟರ್ಗಳ ಶ್ರೇಯಾಂಕದಲ್ಲಿ ಭಾರತದ ಆರಂಭಿಕ ಆಟಗಾರ ಇಶಾನ್ ಕಿಶನ್ ಬರೋಬ್ಬರಿ 10 ಸ್ಥಾನ ಪ್ರಗತಿ ಕಾಣುವ ಮೂಲಕ 23ನೇ ಸ್ಥಾನಕ್ಕೆ ತಲುಪಿದ್ದಾರೆ. ಲಂಕಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಸ್ಫೋಟಕ ಬ್ಯಾಟಿಂಗ್ ನಡೆಸಿ ತಂಡದ ಗೆಲುವಿಗೆ ಕಾರಣರಾದ ದೀಪಕ್ ಹೂಡಾ ಅವರು ನೂತನ ಶ್ರೇಯಾಂಕದಲ್ಲಿ ಬಡ್ತಿ ಪಡೆದಿದ್ದಾರೆ ಸದ್ಯ 97ನೇ ಸ್ಥಾನ ಪಡೆದಿದ್ದಾರೆ.
ಟೀಮ್ ಇಂಡಿಯಾದ ಸ್ಪೋಟಕ ಬ್ಯಾಟರ್ ಸೂರ್ಯಕುಮಾರ್ ಯಾದವ್ ಕಳೆದ ಪಂದ್ಯದಲ್ಲಿ ಶ್ರೇಷ್ಠ ಪ್ರದರ್ಶನ ತೋರದಿದ್ದರೂ ನಂ.1 ಸ್ಥಾನದಲ್ಲೇ ಮುಂದುವರಿದಿದ್ದಾರೆ. ಬೌಲಿಂಗ್ ವಿಭಾಗದಲ್ಲಿ ಹಾರ್ದಿಕ್ ಪಾಂಡ್ಯ 9 ಸ್ಥಾನ ಸುಧಾರಣೆ ಕಾಣುವ ಮೂಲಕ 76ನೇ ಸ್ಥಾನಕ್ಕೆ ತಲುಪಿದ್ದಾರೆ. ಲಂಕಾದ ಸ್ಪಿನ್ನರ್ ವನಿಂದು ಹಸರಂಗ ಬೌಲರ್ಗಳ ಯಾದಿಯಲ್ಲಿ ಮೊದಲ ಸ್ಥಾನ ಕಾಯ್ದುಕೊಂಡಿದ್ದಾರೆ.
ಇದನ್ನೂ ಓದಿ| ICC Test Ranking | ಟೆಸ್ಟ್ ರ‍್ಯಾಂಕಿಂಗ್; ಪ್ರಗತಿ ಕಂಡ ಅಯ್ಯರ್, ಅಶ್ವಿನ್; ಕುಸಿತ ಕಂಡ ವಿರಾಟ್