ದುಬೈ: ಐಸಿಸಿ ನೂತನ ಟಿ20(T20 Rankings) ಬ್ಯಾಟಿಂಗ್ ಶ್ರೇಯಾಂಕ ಪಟ್ಟಿಯನ್ನು ಬುಧವಾರ ಪ್ರಕಟಿಸಿದ್ದು, ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಂ(babar azam) ಒಂದು ಸ್ಥಾನಗಳ ಪ್ರಗತಿ ಸಾಧಿಸಿದ್ದಾರೆ. ಟೀಮ್ ಇಂಡಿಯಾದ ಸೂರ್ಯಕುಮಾರ್ ಯಾದವ್(861 ರೇಟಿಂಗ್ ಅಂಕ) ತಮ್ಮ ಅಗ್ರಸ್ಥಾನವನ್ನು ಉಳಿಸಿಕೊಳ್ಳುವಲ್ಲಿ ಮತ್ತೊಮ್ಮೆ ಯಶಸ್ವಿಯಾಗಿದ್ದಾರೆ.
ಬಾಬರ್ ನ್ಯೂಜಿಲ್ಯಾಂಡ್ ವಿರುದ್ಧದ ತವರಿನ ಟಿ20 ಪಂದ್ಯದಲ್ಲಿ ಆಡಿದ ನಾಲ್ಕು ಇನಿಂಗ್ಸ್ಗಳಿಂದ ಒಂದು ಅರ್ಧಶತಕ ಮತ್ತು ಒಳಗೊಂಡಂತೆ ಒಟ್ಟು 125 ರನ್ ಬಾರಿಸಿದ್ದರು. ಇದು ಬ್ಯಾಟರ್‌ಗಳಿಗಾಗಿ ನವೀಕರಿಸಿದ ಟಿ20 ಶ್ರೇಯಾಂಕಗಳ ಪಟ್ಟಿಯಲ್ಲಿ ಬಾಬರ್ ಒಂದು ಸ್ಥಾನವನ್ನು ಸುಧಾರಿಸಲು ನೆರವಾಯಿತು. ಬಾಬರ್ 10 ರೇಟಿಂಗ್ ಅಂಗಳ ಪ್ರಗತಿಯೊಂದಿಗೆ ಸದ್ಯ 763 ರೇಟಿಂಗ್ ಅಂಕ ಗಳಿಸಿ ನಾಲ್ಕನೇ ಸ್ಥಾನದಲ್ಲಿದ್ದಾರೆ.
ಇದನ್ನೂ ಓದಿ IPL 2024: ನಾಯಕ ಹಾರ್ದಿಕ್ ಪಾಂಡ್ಯ ಸೇರಿ ಮುಂಬೈ ತಂಡದ ಆಟಗಾರರಿಗೆ ಬಿತ್ತು ಭಾರೀ ದಂಡ
ಸರಿ ಸುಮಾರು ಒಂದು ವರ್ಷಕ್ಕಿಂತಲೂ ಅಧಿಕವಾಗಿ ಟಿ20 ಬ್ಯಾಟಿಂಗ್ ಶ್ರೇಯಾಂಕದಲ್ಲಿ ನಂ.1 ಸ್ಥಾನ ಕಾಯ್ದುಕೊಂಡಿರುವ ಟೀಮ್ ಇಂಡಿಯಾದ ಹಾರ್ಡ್ ಹಿಟ್ಟರ್ ಸೂರ್ಯಕುಮಾರ್ ಯಾದವ್(suryakumar yadav) ಈ ಬಾರಿಯೂ ಅಗ್ರಸ್ಥಾನದಲ್ಲೇ ಮುಂದುವರಿಸಿದ್ದಾರೆ. ಆಸೀಸ್ ವಿರುದ್ಧದ ಟಿ20 ಸರಣಿಯಲ್ಲಿ ನಾಯಕನಾಗಿ ತಂಡವನ್ನು ಮುನ್ನಡೆಸಿದ ಅವರು ತಮ್ಮ ಚೊಚ್ಚಲ ನಾಯಕತ್ವದಲ್ಲ ಭಾರತಕ್ಕೆ ಟಿ20 ಸರಣಿಯನ್ನು ಗೆದ್ದು ಕೊಟ್ಟ ಸಾಧನೆ ಮಾಡಿದ್ದರು. ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯಲ್ಲಿ ಗಾಯಗೊಂಡು ಬಳಿಕ ಯಾವುದೇ ಸರಣಿ ಆಡಿಲ್ಲ. ಇದೇ ಜೂನ್ನಲ್ಲಿ ನಡೆಯುವ ಟಿ20 ವಿಶ್ವಕಪ್ ಕಪ್ ಮೂಲಕ ಮತ್ತೆ ಅಂತಾರಾಷ್ಟ್ರೀಯ ಕ್ರಿಕೆಟ್ ಆಡಲಿದ್ದಾರೆ.
ಇಂಗ್ಲೆಂಡ್ ತಂಡ ವಿಕೆಟ್ ಕೀಪರ್ ಕಮ್ ಬ್ಯಾಟರ್ ಫಿಲ್ ಸಾಲ್ಟ್(802) ಮತ್ತು ಪಾಕಿಸ್ತಾನದ ಮೊಹಮ್ಮದ್ ರಿಜ್ವಾನ್(784) ರೇಟಿಂಗ್ ಅಂಕದೊಂದಿಗೆ ಕ್ರಮವಾಗಿ 2 ಮತ್ತು ಮೂರನೇ ಸ್ಥಾನದಲ್ಲಿದ್ದಾರೆ. ಭಾರತದ ಯುವ ಎಡಗೈ ಬ್ಯಾಟರ್ ಯಶಸ್ವಿ ಜೈಸ್ವಾಲ್(714) 6ನೇ ಸ್ಥಾನ ಪಡೆದಿದ್ದಾರೆ. ಒಟ್ಟಾರೆಯಾಗಿ ಟಾಪ್ 10ನಲ್ಲಿ ಇಬ್ಬರು ಭಾರತೀಯ ಬ್ಯಾಟರ್ಗಳು ಮಾತ್ರ ಕಾಣಿಸಿಕೊಂಡಿದ್ದಾರೆ. ಇಂಗ್ಲೆಂಡ್ ಮತ್ತು ದಕ್ಷಿಣ ಆಫ್ರಿಕಾದ ಮೂವರು ಬ್ಯಾಟರ್ಗಳು ಅಗ್ರ 10ರೊಳಗೆ ಸ್ಥಾನ ಪಡೆದಿದ್ದಾರೆ.
ಟಾಪ್ 5 ಬ್ಯಾಟರ್ಗಳು
1. ಸೂರ್ಯಕುಮಾರ್ ಯಾದವ್ (861 ರೇಟಿಂಗ್ ಅಂಕ)
2. ಫಿಲ್ ಸಾಲ್ಟ್(802 ರೇಟಿಂಗ್ ಅಂಕ)
3. ಮೊಹಮ್ಮದ್ ರಿಜ್ವಾನ್ (784 ರೇಟಿಂಗ್ ಅಂಕ)
4. ಬಾಬರ್ ಅಜಂ(763 ರೇಟಿಂಗ್ ಅಂಕ)
5. ಐಡೆನ್ ಮಾರ್ಕ್ರಮ್(755 ರೇಟಿಂಗ್ ಅಂಕ)