Site icon Vistara News

T20 World Cup 2024: ದೂರದರ್ಶನದಲ್ಲಿಯೂ ಪ್ರಸಾರಗೊಳ್ಳಲಿದೆ ಟಿ20 ವಿಶ್ವಕಪ್​ ಪಂದ್ಯಾವಳಿ

T20 World Cup 2024

t20-world-cup-2024-doordarshan-to-telecast-t20-world-cup-matches

ನವದೆಹಲಿ: ಪ್ರಸಕ್ತ ವೆಸ್ಟ್​ ಇಂಡೀಸ್​ ಮತ್ತು ಅಮೆರಿಕ ಜಂಟಿ ಆತಿಥ್ಯದಲ್ಲಿ ಸಾಗುತ್ತಿರುವ ಟಿ20 ವಿಶ್ವಕಪ್​(T20 World Cup 2024) ಟೂರ್ನಿಯ ಪಂದ್ಯವಾಳಿಗಳು ಇನ್ನು ಮುಂದೆ ಡಿಡಿ(Doordarshan) ಚಾನೆಲ್​ನಲ್ಲಿಯೂ ವೀಕ್ಷಿಸಬಹುದಾಗಿದೆ. ಪ್ರಸಾರ ಭಾರತಿ ಈ ನಿರ್ಧಾರವನ್ನು ಇಂದು(ಸೋಮವಾರ) ಪ್ರಕಟಿಸಿದೆ. ಭಾರತದ ಪಂದ್ಯಗಳು ಭಾರತೀಯ ಕಾಲಮಾನ ರಾತ್ರಿ 8ಗಂಟೆಗೆ ಆರಂಭವಾಗಲಿದೆ. ಇತರ ತಂಡಗಳ ಕೆಲವು ಪಂದ್ಯಗಳು ಬೆಳಗ್ಗೆ 6 ಗಂಟೆಗೆ ಪ್ರಸಾರಗೊಳ್ಳಲಿದೆ. 

ಕೇವಲ ಟಿ20 ಕ್ರಿಕೆಟ್​ ವಿಶ್ವಕಪ್​ ಮಾತ್ರವಲ್ಲದೆ, ಮುಂದಿನ ತಿಂಗಳು 26ರಿಂದ ಆರಂಭಗೊಳ್ಳುವ ಪ್ಯಾರಿಸ್ ಒಲಿಂಪಿಕ್ಸ್ ಗೇಮ್ಸ್ 2024, ಪ್ಯಾರಿಸ್ ಪ್ಯಾರಾಲಿಂಪಿಕ್ಸ್ ಗೇಮ್ಸ್ ಭಾರತ ಮತ್ತು ಜಿಂಬಾಬ್ವೆ ಬಿರುದ್ಧ ಕ್ರಿಕೆಟ್​ ಸರಣಿ (ಜುಲೈ 6 ರಿಂದ ಜುಲೈ 1, 2024) ಮತ್ತು ಭಾರತ-ಶ್ರೀಲಂಕಾ (ಜುಲೈ 27 ರಿಂದ ಆಗಸ್ಟ್ 7, 2024) ನಡುವಣ ಸರಣಿ, ಫ್ರೆಂಚ್ ಓಪನ್ 2024ರ ಮಹಿಳಾ ಮತ್ತು ಪುರುಷರ ಫೈನಲ್​ ಪಂದ್ಯ ಕೂಡ ನೇರ ಪ್ರಸಾರ ಆಗಲಿವೆ ಎಂದು ಪ್ರಸಾರ ಭಾರತಿ ಸಿಇಓ ಗೌರವ್ ದ್ವಿವೇದಿ ಹೇಳಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನೂ ಕೆಲವು ಮಹತ್ವದ ಟೂರ್ನಿಯನ್ನು ನೇರ ಪ್ರಸಾರ ಮಾಡಲು ವಿವಿಧ ಸಂಘಟಕರ ಜತೆ ಮಾತುಕತೆ ನಡೆಸುತ್ತಿದ್ದೇವೆ ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.

ಕಳೆದ ವರ್ಷದಲ್ಲಿ, ಡಿಡಿ ಸ್ಪೋರ್ಟ್ಸ್ ದೇಶಾದ್ಯಂತ ಹಲವಾರು ಬಹು ಕ್ರೀಡಾ ಕಾರ್ಯಕ್ರಮಗಳನ್ನು ನಿರ್ಮಿಸಿ ಪ್ರಸಾರ ಮಾಡಿತ್ತು. ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್, ತಮಿಳುನಾಡಿನಲ್ಲಿ ಖೇಲೋ ಇಂಡಿಯಾ ಯೂತ್ ಗೇಮ್ಸ್, ಗೋವಾದಲ್ಲಿ ನಡೆದ ರಾಷ್ಟ್ರೀಯ ಕ್ರೀಡಾಕೂಟ, ನವದೆಹಲಿಯಲ್ಲಿ ನಡೆದಿದ್ದ ಖೇಲೋ ಇಂಡಿಯಾ ಪ್ಯಾರಾ ಗೇಮ್ಸ್ ಸೃಇ ಹಲವು ದೇಶೀಯ ಮಟ್ಟದ ಟೂರ್ನಿಯ ನೇರ ಪ್ರಸಾರ ಮಾಡಿತ್ತು.

ಇದನ್ನೂ ಓದಿ T20 World Cup 2024 Prize Money: ದಾಖಲೆಯ ಬಹುಮಾನ ಮೊತ್ತ ಘೋಷಿಸಿದ ಐಸಿಸಿ

ಕಳೆದ ವರ್ಷ ನಡೆದಿದ್ದ ಏಕದಿನ ವಿಶ್ವಕಪ್​ ಟೂರ್ನಿಯಂತೆ ಈ ಬಾರಿಯೂ ಟಿ20 ವಿಶ್ವಕಪ್​ ಪಂದ್ಯಾವಳಿಗಳನ್ನು ಭಾರತೀಯ ಕ್ರಿಕೆಟ್​ ಅಭಿಮಾನಿಗಳು ಉಚಿತವಾಗಿ ನೋಡಬಹುದಾಗಿದೆ. ​ಡಿಸ್ನಿ + ಹಾಟ್‌ಸ್ಟಾರ್(Disney+ Hotstar) ಭಾರತದಲ್ಲಿನ ಸ್ಮಾರ್ಟ್‌ಫೋನ್ ಬಳಕೆದಾರಿಗೆ ಈ ಅವಕಾಶ ಕಲ್ಪಿಸಿದೆ. OTT ಪ್ಲಾಟ್‌ಫಾರ್ಮ್‌ನಲ್ಲಿ ಎಲ್ಲ ಪಂದ್ಯಗಳನ್ನು ಉಚಿತವಾಗಿ ವೀಕ್ಷಿಸಲು ಸಾಧ್ಯವಾಗುತ್ತದೆ.

ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್ 2023 ರ ಸಮಯದಲ್ಲಿ, ಡಿಸ್ನಿ+ ಹಾಟ್‌ಸ್ಟಾರ್ ಅಪ್ಲಿಕೇಶನ್ ಮೂಲಕ ಮೊಬೈಲ್‌ನಲ್ಲಿ ಉಚಿತವಾಗಿ ಸ್ಟ್ರೀಮ್ ಮಾಡಲಾಯಿತು. ಇದು ಏಕಕಾಲದಲ್ಲಿ ಅತ್ಯಧಿಕ ವೀಕ್ಷಣೆ ಕಂಡ 5 ಬಾರಿಯ ದಾಖಲೆಗಳನ್ನು ಮುರಿದಿತ್ತು. ಟೀಮ್ ಇಂಡಿಯಾ ಮತ್ತು ಆಸ್ಟ್ರೇಲಿಯಾ ನಡುವಿನ ಫೈನಲ್‌ನಲ್ಲಿ ಪಂದ್ಯ ಏಕಕಾಲಕ್ಕೆ 5.9 ಕೋಟಿ ವೀಕ್ಷಣೆ ಕಂಡಿತ್ತು. ಈ ದಾಖಲೆ ಟಿ20 ವಿಶ್ವಕಪ್​ನಲ್ಲಿ ಪತನಗೊಳ್ಳುವ ಸಾಧ್ಯತೆ ಇದೆ ಎಂದು ಶಿವಾನಂದನ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಟೂರ್ನಿಯಲ್ಲಿ ಒಟ್ಟು 55 ಪಂದ್ಯಗಳು ನಡೆಯಲಿವೆ. ಜೂನ್ 1ರಿಂದ 18ರವರೆಗೆ ಗುಂಪು ಹಂತದಲ್ಲಿ 40 ಪಂದ್ಯಗಳು ನಡೆಯಲಿವೆ. ಜೂನ್ 19 ರಿಂದ 24 ರವರೆಗೆ ಸೂಪರ್ 8 ಪಂದ್ಯಗಳು ನಡೆಯಲಿವೆ. 

Exit mobile version