Site icon Vistara News

T20 World Cup 2024: ಡ್ರಾಪ್ -ಇನ್ ಪಿಚ್ ಅಳವಡಿಕೆ ಕಾರ್ಯ ಆರಂಭಿಸಿದ ಐಸಿಸಿ

T20 World Cup 2024

ನ್ಯೂಯಾರ್ಕ್: ವೆಸ್ಟ್​ ಇಂಡೀಸ್​ ಮತ್ತು ಅಮೆರಿಕ ಆತಿಥ್ಯದಲ್ಲಿ ನಡೆಯಲಿರುವ ಟಿ20 ವಿಶ್ವಕಪ್​ ಟೂರ್ನಿಗೆ(T20 World Cup 2024) ಇನ್ನು ಕೆಲವೇ ಇಂದು ತಿಂಗಳು ಮಾತ್ರ ಬಾಕಿ ಉಳಿದಿದೆ. ವಿಶ್ವಕಪ್​ ಪಂದ್ಯಾವಳಿಗಳು ಜೂನ್​ 1ರಿಂದ 29ರ ತನಕ ಸಾಗಲಿದೆ. ಟೂರ್ನಿಯಲ್ಲಿ ಪಾಲ್ಗೊಳ್ಳುವ ದೇಶಗಳು ಬಲಿಷ್ಠ ತಂಡವನ್ನು ಕೂಡ ಪ್ರಕಟಿಸುತ್ತಿವೆ. ಇದೇ ಮೊದಲ ಬಾರಿಗೆ ಅಮೆರಿಕ ಐಸಿಸಿ ಪಂದ್ಯಾವಳಿ ಆತಿಥ್ಯ ವಹಿಸಿಕೊಂಡಿದೆ. ಸುಸಜ್ಜಿತ ಪಿಚ್ ಇಲ್ಲದ ಕಾರಣ ಆಸ್ಟ್ರೇಲಿಯಾದಿಂದ ತರಿಸಿದ ಡ್ರಾಪ್ ಇನ್ ಪಿಚ್‌ಗಳನ್ನು(Drop-In Pitches) ಅಳವಡಿಸಲಾಗುತ್ತಿದೆ ಎಂದು ಐಸಿಸಿ ಬುಧವಾರ ತಿಳಿಸಿದೆ.

“ಟಿ20 ವಿಶ್ವಕಪ್‌ಗಾಗಿ ಸಿದ್ಧಪಡಿಸಲಾದ ಡ್ರಾಪ್-ಇನ್ ಪಿಚ್‌ಗಳನ್ನು ಫ್ಲೋರಿಡಾದಿಂದ ನ್ಯೂಯಾರ್ಕ್‌ಗೆ ಸೆಮಿ ಟ್ರೈಲರ್ ಟ್ರಕ್‌ಗಳಲ್ಲಿ ನಸ್ಸೌ ಕೌಂಟಿ ಇಂಟರ್‌ನ್ಯಾಶನಲ್ ಕ್ರಿಕೆಟ್ ಸ್ಟೇಡಿಯಂಗೆ ತರಲಾಗಿದ್ದು, ಇದರ ಅಳವಡಿಕೆಯ ಕಾರ್ಯ ಇನ್ನೆರಡು ದಿನಗಳಲ್ಲಿ ಆರಂಭಗೊಳ್ಳಲಿದೆ’ ಎಂದು ಐಸಿಸಿ (ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್) ಬುಧವಾರ ತಿಳಿಸಿದೆ. ಡ್ರಾಪ್-ಇನ್ ಪಿಚ್​ ಫುಟ್‌ಬಾಲ್, ರಗ್ಬಿ ಮತ್ತು ಕ್ರಿಕೆಟ್ ಪಂದ್ಯಗಳನ್ನು ಆಯೋಜಿಸಲು ಅನುವು ಮಾಡಿಕೊಡುತ್ತದೆ.

ನಸ್ಸೌ ಕ್ರೀಡಾಂಗಣದಲ್ಲಿ ನಾಲ್ಕು ಪಿಚ್‌ಗಳನ್ನು ಸ್ಥಾಪಿಸಲಾಗುವುದು, ನೆರೆಯ ಅಭ್ಯಾಸ ಸೌಲಭ್ಯಗಳಿಗಾಗಿ ಹೆಚ್ಚುವರಿ ಆರು ಪಿಚ್​ ಮಾಡಲಾಗುವುದು ಎಂದು ಐಸಿಸಿ ತಿಳಿಸಿದೆ. ಟಿ20 ವಿಶ್ವಕಪ್​ಗಾಗಿಯೇ ನ್ಯೂಯಾರ್ಕ್​ನಲ್ಲಿ ತಾತ್ಕಾಲಿಕವಾಗಿ ನಸ್ಸೌ ಕೌಂಟಿ ಇಂಟರ್‌ನ್ಯಾಶನಲ್ ಕ್ರಿಕೆಟ್ ಸ್ಟೇಡಿಯಂ(Nassau County International Cricket Stadium) ನಿರ್ಮಾಣ ಮಾಡಲಾಗಿದೆ. ಬಹುತೇಕ ಇದರ ಕಾಮಗಾರಿ ಮುಕ್ತಾಯ ಕಂಡಿದೆ. ಜೂನ್ 9 ರಂದು ಭಾರತ ಮತ್ತು ಪಾಕಿಸ್ತಾನ(IND vs PAK) ನಡುವಿನ ಹೈ-ವೋಲ್ಟೇಜ್ ಘರ್ಷಣೆ ಸೇರಿದಂತೆ ಭಾರತದ ಎಲ್ಲಾ ಗುಂಪು-ಹಂತದ ಪಂದ್ಯಗಳಿಗೆ ಈ ಕ್ರೀಡಾಂಗಣವು ಅಣಿಯಾಗಿದೆ. ಅಚ್ಚರಿ ಎಂದರೆ ಈ ಸ್ಟೇಡಿಯಂ ಅನ್ನು ನಿರ್ಮಾಣ ಮಾಡಿದ್ದೇ ಭಾರತ ಮತ್ತು ಪಾಕಿಸ್ತಾನ ಎದುರಿನ ಪಂದ್ಯಕ್ಕಾಗಿ.

ಇದನ್ನೂ ಓದಿ T20 World Cup 2024: ಟಿ20 ವಿಶ್ವಕಪ್​ಗೆ ತಂಡ ಪ್ರಕಟಿಸಿದ ಆಸ್ಟ್ರೇಲಿಯಾ; ಅನುಭವಿ ಸ್ಮಿತ್​ಗೆ ಅವಕಾಶವಿಲ್ಲ

34 ಸಾವಿರ ಪ್ರೇಕ್ಷಕರು ಕೂರುವಷ್ಟು ಸಾಮರ್ಥ್ಯದ ಸ್ಟೇಡಿಯಂ ಇದಾಗಿದ್ದು. ಭಾರತ-ಪಾಕ್​ ಪಂದ್ಯಕ್ಕಾಗಿಯೇ ಇದನ್ನು ತಾತ್ಕಾಲಿಕವಾಗಿ ನಿರ್ಮಿಸಲಾಗಿದೆ. ಪಂದ್ಯದ ನಂತರ ಇದನ್ನು ಕೆಡವಲಾಗುತ್ತದೆ ಎಂದು ತಿಳಿಸಲಾಗಿದೆ. ಭಾರತ ಮತ್ತು ಪಾಕ್​ ನಡುವಣ ಪಂದ್ಯ ನ್ಯೂಯಾರ್ಕ್‌ನಲ್ಲಿಯೇ ನಡೆಸಲು ಕಾರಣವೂ ಕೂಡ ಇದೆ. ಏಕೆಂದರೆ ಈ ಪ್ರದೇಶದಲ್ಲಿ 7,11,000 ಭಾರತೀಯ ಮತ್ತು ಸುಮಾರು 1,00,000 ಪಾಕಿಸ್ತಾನ ಮೂಲದ ಜನರು ವಾಸಿಸುತ್ತಿದ್ದಾರೆ ಎನ್ನಲಾಗಿದೆ.

ವಿಶ್ವಕಪ್ ಟೂರ್ನಿಗೆ ಅಮೆರಿಕದ ಮೂರು ಸ್ಟೇಡಿಯಂಗಳು ಆತಿಥ್ಯ ವಹಿಸಿವೆ. ಇಲ್ಲಿ 16 ಪಂದ್ಯಗಳು ನಡೆಯಲಿದೆ. ಈ ಮೈದಾನಕ್ಕೆ ಆಸ್ಟ್ರೇಲಿಯಾದಿಂದ ತರಿಸಲಾದ ಡ್ರಾಪ್ ಇನ್ ಪಿಚ್ ಬಳಸಗಾಗುತ್ತದೆ. ಪಿಚ್ ಸಂಪೂರ್ಣವಾಗಿ ಅಡಿಲೇಡ್‌ನಲ್ಲಿ ತಯಾರಿಸಲಾಗಿದ್ದು, ಅದನ್ನು ಹಡಗಿನಲ್ಲೇ 22,500 ಕಿಲೋಮೀಟರ್ ದೂರದ ಫ್ಲೋರಿಡಾ ಮೂಲಕ ನ್ಯೂಯಾರ್ಕ್‌ಗೆ ತರಲಾಗಿದೆ. ಅಮೆರಿಕದ ಈ ಮೂರು ಕ್ರೀಡಾಂಗಣಗಳಲ್ಲಿ 16 ಪಂದ್ಯಗಳು ನಡೆಯಲಿದೆ. ಉಳಿದ 39 ಪಂದ್ಯಗಳಿಗೆ ವೆಸ್ಟ್ ಇಂಡೀಸ್ ಆತಿಥ್ಯ ವಹಿಸಿದೆ. ಟೂರ್ನಿಯಲ್ಲಿ ಒಟ್ಟು 55 ಪಂದ್ಯಗಳು ನಡೆಯಲಿವೆ. ಜೂನ್ 1ರಿಂದ 18ರವರೆಗೆ ಗುಂಪು ಹಂತದಲ್ಲಿ 40 ಪಂದ್ಯಗಳು ನಡೆಯಲಿವೆ. ಜೂನ್ 19 ರಿಂದ 24 ರವರೆಗೆ ಸೂಪರ್ 8 ಪಂದ್ಯಗಳು ನಡೆಯಲಿವೆ.

Exit mobile version