ಮುಂಬಯಿ: ಈ ಬಾರಿಯ ಟಿ20 ವಿಶ್ವಕಪ್ ಟೂರ್ನಿಯಲ್ಲಿ(T20 World Cup 2024) ಭಾರತದ ಪಂದ್ಯಗಳನ್ನು ಕ್ರಿಕೆಟ್ ಅಭಿಮಾನಿಗಳು ಮೊಬೈಲ್ ಮತ್ತು ಟಿವಿ ಮೂಲಕ ಮಾತ್ರವಲ್ಲದೆ ಸಿನೆಮಾ ಥಿಯೇಟರ್ಗಳಲ್ಲಿಯೂ ಕಣ್ತುಂಬಿಕೊಳ್ಳಬಹುದು. ಹೌದು, ಭಾರತದ ಲೀಗ್ ಪಂದ್ಯಗಳು ಐನಾಕ್ಸ್(INOX), ಪಿವಿಆರ್(PVR), ಸಿನೆಪೊಲಿಸ್(CONEPOLIS), ಮಿರಾಜ್ ಸಿನೆಮಾ(MIRAJ CENIM)ದ ಬಿಗ್ ಸ್ಕ್ರೀನ್‌ಗಳಲ್ಲಿ ಮೂಡಿಬರಲಿವೆ. ನವದೆಹಲಿ, ನೋಯ್ಡಾ, ಫರೀದಾಬಾದ್, ಗುರುಗ್ರಾಮ್, ಮುಂಬಯಿ, ಬೆಂಗಳೂರು, ಪುಣೆ, ಕೋಲ್ಕತಾ, ಜೈಪುರ, ಇಂದೋರ್, ಸೂರತ್, ವಡೋದರ ಸೇರಿ ದೇಶದ ಪ್ರಮುಖ ನಗರದಲ್ಲಿ ಈ ವ್ಯವಸ್ಥೆ ಇದೆ.
ಜೂನ್ 9ರಂದು ನಡೆಯುವ ಹೈವೋಲ್ಟೇಜ್ ಪಂದ್ಯವಾದ ಭಾರತ ಮತ್ತು ಪಾಕ್ ಪಂದ್ಯಕ್ಕೆ ಭಾರೀ ಬೇಡಿಕೆ ಇರುವ ಸಾಧ್ಯತೆ ಇದೆ. ಭಾರತ ತನ್ನ ಮೊದಲ ಲೀಗ್ ಪಂದ್ಯವನ್ನು ಜೂನ್ 5ರಂದು ಐರ್ಲೆಂಡ್ ವಿರುದ್ಧ ಆಡಲಿದೆ. ಲೀಗ್ನಲ್ಲಿ ಭಾರತ ಒಟ್ಟು 4 ಪಂದ್ಯಗಳನ್ನು ಆಡಲಿದೆ. ಇಲ್ಲಿ ಅಗ್ರ 2ರೊಳಗೆ ಸ್ಥಾನ ಪಡೆದರೆ ಸೂಪರ್ 8 ಹಂತಕ್ಕೇರಲಿದೆ.
ಮೊಬೈಲ್‌ನಲ್ಲಿ ಉಚಿತ ಪ್ರಸಾರ
ಏಕದಿನ ವಿಶ್ವಕಪ್ ಟೂರ್ನಿಯಂತೆ ಈ ಬಾರಿಯೂ ಟಿ20 ವಿಶ್ವಕಪ್ ಪಂದ್ಯಾವಳಿಗಳನ್ನು ಭಾರತೀಯ ಕ್ರಿಕೆಟ್ ಅಭಿಮಾನಿಗಳು ಉಚಿತವಾಗಿ ನೋಡಬಹುದಾಗಿದೆ. ಡಿಸ್ನಿ + ಹಾಟ್‌ಸ್ಟಾರ್(Disney+ Hotstar) ಭಾರತದಲ್ಲಿನ ಸ್ಮಾರ್ಟ್‌ಫೋನ್ ಬಳಕೆದಾರಿಗೆ ಈ ಅವಕಾಶ ಕಲ್ಪಿಸಿದೆ. OTT ಪ್ಲಾಟ್‌ಫಾರ್ಮ್‌ನಲ್ಲಿ ಎಲ್ಲ ಪಂದ್ಯಗಳನ್ನು ಉಚಿತವಾಗಿ ವೀಕ್ಷಿಸಲು ಸಾಧ್ಯವಾಗುತ್ತದೆ.
ಭಾರತದ ಪಂದ್ಯಗಳು ಭಾರತೀಯ ಕಾಲಮಾನ ರಾತ್ರಿ 8ಗಂಟೆಗೆ ಆರಂಭವಾಗಲಿದೆ. ಇತರ ತಂಡಗಳ ಕೆಲವು ಪಂದ್ಯಗಳು ಬೆಳಗ್ಗೆ 6 ಗಂಟೆಗೆ ಪ್ರಸಾರಗೊಳ್ಳಲಿದೆ. ಡಿಸ್ನಿ+ ಹಾಟ್‌ಸ್ಟಾರ್ ಇಂಡಿಯಾದ ಮುಖ್ಯಸ್ಥ ಸಜಿತ್ ಶಿವಾನಂದನ್, “ಐಸಿಸಿ ಪುರುಷರ ಟಿ20 ವಿಶ್ವಕಪ್ 2024 ಅನ್ನು ಮೊಬೈಲ್‌ನಲ್ಲಿ ಉಚಿತವಾಗಿ ನೀಡುವ ಮೂಲಕ, ನಾವು ಕ್ರಿಕೆಟ್ ಆಟವನ್ನು ಬೆಳೆಸುವ, ದೇಶಾದ್ಯಂತ ಹೆಚ್ಚಿನ ಪ್ರೇಕ್ಷಕರನ್ನು ತಲುಪುವ ಗುರಿಯನ್ನು ಹೊಂದಿದ್ದೇವೆ” ಎಂದು ಹೇಳಿದ್ದಾರೆ.
ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್ 2023 ರ ಸಮಯದಲ್ಲಿ, ಡಿಸ್ನಿ+ ಹಾಟ್‌ಸ್ಟಾರ್ ಅಪ್ಲಿಕೇಶನ್ ಮೂಲಕ ಮೊಬೈಲ್‌ನಲ್ಲಿ ಉಚಿತವಾಗಿ ಸ್ಟ್ರೀಮ್ ಮಾಡಲಾಯಿತು. ಇದು ಏಕಕಾಲದಲ್ಲಿ ಅತ್ಯಧಿಕ ವೀಕ್ಷಣೆ ಕಂಡ 5 ಬಾರಿಯ ದಾಖಲೆಗಳನ್ನು ಮುರಿದಿತ್ತು. ಟೀಮ್ ಇಂಡಿಯಾ ಮತ್ತು ಆಸ್ಟ್ರೇಲಿಯಾ ನಡುವಿನ ಫೈನಲ್‌ನಲ್ಲಿ ಪಂದ್ಯ ಏಕಕಾಲಕ್ಕೆ 5.9 ಕೋಟಿ ವೀಕ್ಷಣೆ ಕಂಡಿತ್ತು. ಈ ದಾಖಲೆ ಟಿ20 ವಿಶ್ವಕಪ್ನಲ್ಲಿ ಪತನಗೊಳ್ಳುವ ಸಾಧ್ಯತೆ ಇದೆ.
ಈ ಬಾರಿ ಟೂರ್ನಿಯಲ್ಲಿ ಗರಿಷ್ಠ 20 ತಂಡಗಳು ಕಣಕ್ಕಿಳಿಯಲಿವೆ. 2022ರ ಆವೃತ್ತಿಯಲ್ಲಿ 12 ತಂಡಗಳು ಭಾಗಿಯಾಗಿದ್ದವು. ಟೂರ್ನಿಯಲ್ಲೂ ವಿಭಿನ್ನ ಸ್ವರೂಪವಿದೆ. 20 ತಂಡಗಳನ್ನು ತಲಾ ಐದು ತಂಡಗಳಂತೆ ನಾಲ್ಕು ಗುಂಪುಗಳಲ್ಲಿ ವಿಂಗಡಿಸಲಾಗಿದೆ. ಗುಂಪು ವಿಭಾಗದಲ್ಲಿ ಪ್ರತಿ ತಂಡಗಳು ತಲಾ ನಾಲ್ಕು ಪಂದ್ಯಗಳನ್ನು ಆಡಲಿವೆ. ಪ್ರತಿ ಗುಂಪಿನಿಂದ ತಲಾ ಎರಡು ತಂಡಗಳು ಸೂಪರ್ ಎಂಟರ ಹಂತಕ್ಕೆ ತೇರ್ಗಡೆ ಪಡೆಯಲಿವೆ. ಅಲ್ಲೂ ತಲಾ ನಾಲ್ಕು ತಂಡಗಳ ಎರಡು ಗುಂಪುಗಳು ಇದ್ದು, ಪ್ರತಿ ಗುಂಪಿನ ಅಗ್ರ ಎರಡು ತಂಡಗಳು ಸೆಮಿಫೈನಲ್‌ಗೆ ಲಗ್ಗೆ ಇಡಲಿವೆ.