ನ್ಯೂಯಾರ್ಕ್: ಅಮೆರಿಕ ಮತ್ತು ವೆಸ್ಟ್ ಇಂಡೀಸ್ ಜಂಟಿ ಆತಿಥ್ಯದಲ್ಲಿ ಸಾಗುತ್ತಿರುವ ಟಿ20 ವಿಶ್ವಕಪ್(T20 World Cup 2024) ಟೂರ್ನಿಯ ಸೂಪರ್-8 ಹಂತದ(Super Eight stage) ತಂಡಗಳ ಪಟ್ಟಿ ಅಂತಿಮಗೊಂಡಿದೆ. ಇಂದು(ಸೋಮವಾರ) ನಡೆದ ಪಂದ್ಯದಲ್ಲಿ ಬಾಂಗ್ಲಾದೇಶ ತಂಡ ನೇಪಾಳ ವಿರುದ್ಧ ಗೆಲುವು ಸಾಧಿಸುವ ಮೂಲಕ ಈ ಪಟ್ಟಿ ಅಂತಿಮಗೊಂಡಿತು. 7 ತಂಡಗಳು ಈಗಾಗಲೇ ಈ ಹಂತಕ್ಕೇರಿತ್ತು. ಆದರೆ ಉಳಿದ ಒಂದು ಸ್ಥಾನಕ್ಕಾಗಿ ಡಿ ಗುಂಪಿನಿಂದ ಬಾಂಗ್ಲಾ ಮತ್ತು ನೆದರ್ಲೆಂಡ್ಸ್ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಬಾಂಗ್ಲಾ ಮೇಲುಗೈ ಸಾಧಿಸಿ ಅಂತಿಮವಾಗಿ ತೇರ್ಗಡೆಗೊಂಡಿದೆ.
ಬಾಂಗ್ಲಾದೇಶ ‘ಎ’ ಗುಂಪಿನಲ್ಲಿ ಭಾರತ, ಆಸ್ಟ್ರೇಲಿಯಾ ಮತ್ತು ಅಪಘಾನಿಸ್ತಾನದ ಜತೆ ಸ್ಥಾನ ಪಡೆದಿದೆ. ‘ಬಿ’ ಗುಂಪಿನಲ್ಲಿ ವೆಸ್ಟ್ ಇಂಡೀಸ್, ಅಮೆರಿಕ, ದಕ್ಷಿಣ ಆಫ್ರಿಕಾ ಮತ್ತು ಇಂಗ್ಲೆಂಡ್ ತಂಡಗಳು ಕಾಣಿಸಿಕೊಂಡಿವೆ. ಲೀಗ್ ಹಂತದ ಪಂದ್ಯಕ್ಕೆ ನಾಳೆ ತೆರೆ ಬೀಳಲಿದೆ. ಅಂತಿಮ ಪಂದ್ಯದಲ್ಲಿ ವಿಂಡೀಸ್ ಮತ್ತು ಆಫ್ಘಾನ್ ಮುಖಾಮುಖಿಯಾಗಲಿವೆ. ಸೂಪರ್ 8 ಹಂತದ ಮೊದಲ ಪಂದ್ಯ ಜೂನ್ 19ರಿಂದ ಆರಂಭವಾಗಲಿದ್ದು, ಮೊದಲ ಪಂದ್ಯದಲ್ಲಿ ಅಮೆರಿಕ ಮತ್ತು ದಕ್ಷಿಣ ಆಫ್ರಿಕಾ ಸೆಣಸಾಟ ನಡೆಸಲಿವೆ. ಭಾರತ ತನ್ನ ಮೊದಲ ಪಂದ್ಯವನ್ನು ಅಫಘಾನಿಸ್ತಾನ ವಿರುದ್ಧ ಆಡಲಿದೆ. ಈ ಪಂದ್ಯ ಜೂನ್ 20ರಂದು ಬಾರ್ಬಡೋಸ್ನಲ್ಲಿ ನಡೆಯಲಿದೆ. ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಹೈವೋಲ್ಟೇಜ್ ಪಂದ್ಯ ಜೂನ್ 24 ಭಾನುವಾರದಂದು ನಡೆಯಲಿದೆ. ಟೀಮ್ ಇಂಡಿಯಾದ ಎಲ್ಲ ಪಂದ್ಯಗಳು ಭಾರತೀಯ ಕಾಲಮಾನ ರಾತ್ರಿ 8 ಗಂಟೆಗೆ ಪ್ರಸಾರಗೊಳ್ಳಲಿದೆ.
ಇದನ್ನೂ ಓದಿ BAN vs NEP: ಸೂಪರ್-8 ಪ್ರವೇಶಿಸಿದ ಬಾಂಗ್ಲಾದೇಶ; ನೇಪಾಳ ವಿರುದ್ಧ 21 ರನ್ ಗೆಲುವು
ಭಾರತದ ಸೂಪರ್-8 ಪಂದ್ಯದ ವೇಳಾಪಟ್ಟಿ
ಎದುರಾಳಿ | ದಿನಾಂಕ | ತಾಣ | ಪ್ರಸಾರ |
ಭಾರತ-ಅಫಘಾನಿಸ್ತಾನ | ಜೂನ್ 20 | ಬಾರ್ಬಡೋಸ್ | ರಾತ್ರಿ 8ಕ್ಕೆ |
ಭಾರತ-ಬಾಂಗ್ಲಾದೇಶ | ಜೂನ್ 22 | ಆಂಟಿಗುವಾ | ರಾತ್ರಿ 8ಕ್ಕೆ |
ಭಾರತ-ಆಸ್ಟ್ರೇಲಿಯಾ | ಜೂನ್ 24 | ಸೇಂಟ್ ಲೂಸಿಯಾ | ರಾತ್ರಿ 8ಕ್ಕೆ |
ಬಾಂಗ್ಲಾಗೆ 21 ರನ್ ಜಯ
ಸೋಮವಾರ ನಡೆದ ಪಂದ್ಯದಲ್ಲಿ ಬಾಂಗ್ಲಾದೇಶ ತಂಡ ನೇಪಾಳ ವಿರುದ್ಧ 21 ರನ್ ಅಂತರದಿಂದ ಗೆದ್ದು ಸೂಪರ್-8ಗೆ ಪ್ರವೇಶ ಪಡೆಯಿತು. ಇಲ್ಲಿನ ಸೇಂಟ್ ವಿನ್ಸೆಂಟ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಬಾಂಗ್ಲಾದೇಶ 19.3 ಓವರ್ಗಳಲ್ಲಿ ಕೇವಲ 106 ರನ್ಗೆ ಕುಸಿತ ಕಂಡಿತು. ಈ ಮೊತ್ತವನ್ನು ನೋಡುವಾಗ ಬಾಂಗ್ಲಾ ಸೋಲು ಕಾಣಬಹುದೆಂದು ಊಹಿಸಲಾಯಿತು. ಆದರೆ, ಬಾಂಗ್ಲಾ ಬೌಲರ್ಗಳು ಉತ್ಕೃಷ್ಟ ಮಟ್ಟದ ಬೌಲಿಂಗ್ ದಾಳಿ ನಡೆಸಿ ನೇಪಾಳವನ್ನು 85 ರನ್ಗೆ ಕಟ್ಟಿಹಾಕಿ ಅಮೋಘ ಗೆಲುವು ಸಾಧಿಸಿದರು.
ಬಾಂಗ್ಲಾದೇಶದ ಪರ ಘಾತಕ ಬೌಲಿಂಗ್ ದಾಳಿ ನಡೆಸಿದ ತಂಜಿಮ್ ಹಸನ್ ಸಾಕಿಬ್ 4 ಓವರ್ ಎಸೆದು 2 ಮೇಡನ್ ಸಹಿತ ಕೇವಲ 7 ರನ್ಗೆ 4 ವಿಕೆಟ್ ಕಿತ್ತು. ಜೀವನಶ್ರೇಷ್ಠ ಬೌಲಿಂಗ್ ಪ್ರದರ್ಶನ ತೋರಿದರು. ಮುಸ್ತಫಿಜುರ್ ರೆಹಮಾನ್ 7 ರನ್ಗೆ 3 ವಿಕೆಟ್ ಪಡೆದರು. ನಾಯಕ ಶಕೀಬ್ 2 ವಿಕೆಟ್ ಕಿತ್ತು ಮಿಂಚಿದರು. ಮುಂದಿನ ಪಂದ್ಯದಲ್ಲಿ ಶಕೀಬ್ ಮೊದಲ ಎಸೆತದಲ್ಲೇ ವಿಕೆಟ್ ಕಿತ್ತರೆ ಬ್ರೋಕನ್ ಹ್ಯಾಟ್ರಿಕ್ ವಿಕೆಟ್ ಕಿತ್ತ ದಾಖಲೆ ಮಾಡಲಿದ್ದಾರೆ.