ಮುಂಬಯಿ: ಇದೇ ಜೂನ್ 1 ರಿಂದ ಅಮೆರಿಕ ಮತ್ತು ವೆಸ್ಟ್ ಇಂಡೀಸ್ ಜಂಟಿ ಆತಿಥ್ಯದಲ್ಲಿ ನಡೆಯುವ ಟಿ20 ವಿಶ್ವಕಪ್ ಟೂರ್ನಿ(T20 World Cup 2024) ಆರಂಭಕ್ಕೂ ಮುನ್ನವೇ ಡಿಸ್ನಿ + ಹಾಟ್ಸ್ಟಾರ್(Disney+ Hotstar) ಕ್ರಿಕೆಟ್ ಅಭಿಮಾನಿಗಳಿಗೆ ಸಿಹಿ ಸುದ್ದಿಯೊಂದನ್ನು ನೀಡಿದೆ. ಭಾರತದಲ್ಲಿನ ಸ್ಮಾರ್ಟ್ಫೋನ್ ಬಳಕೆದಾರರು ಈ ವರ್ಷದ ಐಸಿಸಿ ಪುರುಷರ ಟಿ20 ಕ್ರಿಕೆಟ್ ವಿಶ್ವಕಪ್ ಅನ್ನು OTT ಪ್ಲಾಟ್ಫಾರ್ಮ್ನಲ್ಲಿ ಉಚಿತವಾಗಿ ವೀಕ್ಷಿಸಲು ಸಾಧ್ಯವಾಗುತ್ತದೆ ಎಂದು ಡಿಸ್ನಿ + ಹಾಟ್ಸ್ಟಾರ್ ಬುಧವಾರ ಘೋಷಿಸಿದೆ.
ಕಳೆದ ವರ್ಷ ಏಕದಿನ ವಿಶ್ವಕಪ್ ಮತ್ತು ಏಷ್ಯಾ ಕಪ್ ಟೂರ್ನಿಯನ್ನು ಕೂಡ ಡಿಸ್ನಿ + ಹಾಟ್ಸ್ಟಾರ್, ಮೊಬೈಲ್ ಬಳಕೆ ದಾರರಿಗೆ ಉಚಿತ ವೀಕ್ಷಣೆಯನ್ನು ನೀಡಿತ್ತು. ಇದೀಗ ಟಿ20 ವಿಶ್ವಕಪ್ ಟೂರ್ನಿಯಲ್ಲಿಯೂ ಇದೇ ನಿಲುವನ್ನು ಮುಂದುವರಿಸಿದೆ.
ಈ ಕುರಿತು ಪ್ರತಿಕ್ರಿಯಿಸಿದ ಡಿಸ್ನಿ+ ಹಾಟ್ಸ್ಟಾರ್ ಇಂಡಿಯಾದ ಮುಖ್ಯಸ್ಥ ಸಜಿತ್ ಶಿವಾನಂದನ್, “ಐಸಿಸಿ ಪುರುಷರ ಟಿ20 ವಿಶ್ವಕಪ್ 2024 ಅನ್ನು ಮೊಬೈಲ್ನಲ್ಲಿ ಉಚಿತವಾಗಿ ನೀಡುವ ಮೂಲಕ, ನಾವು ಕ್ರಿಕೆಟ್ ಆಟವನ್ನು ಬೆಳೆಸುವ, ದೇಶಾದ್ಯಂತ ಹೆಚ್ಚಿನ ಪ್ರೇಕ್ಷಕರನ್ನು ತಲುಪುವ ಗುರಿಯನ್ನು ಹೊಂದಿದ್ದೇವೆ” ಎಂದರು.
ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್ 2023 ರ ಸಮಯದಲ್ಲಿ, ಡಿಸ್ನಿ+ ಹಾಟ್ಸ್ಟಾರ್ ಅಪ್ಲಿಕೇಶನ್ ಮೂಲಕ ಮೊಬೈಲ್ನಲ್ಲಿ ಉಚಿತವಾಗಿ ಸ್ಟ್ರೀಮ್ ಮಾಡಲಾಯಿತು. ಇದು ಏಕಕಾಲದಲ್ಲಿ ಅತ್ಯಧಿಕ ವೀಕ್ಷಣೆ ಕಂಡ 5 ಬಾರಿಯ ದಾಖಲೆಗಳನ್ನು ಮುರಿದಿತ್ತು. ಟೀಮ್ ಇಂಡಿಯಾ ಮತ್ತು ಆಸ್ಟ್ರೇಲಿಯಾ ನಡುವಿನ ಫೈನಲ್ನಲ್ಲಿ ಪಂದ್ಯ ಏಕಕಾಲಕ್ಕೆ 5.9 ಕೋಟಿ ವೀಕ್ಷಣೆ ಕಂಡಿತ್ತು. ಈ ದಾಖಲೆ ಟಿ20 ವಿಶ್ವಕಪ್ನಲ್ಲಿ ಪತನಗೊಳ್ಳುವ ಸಾಧ್ಯತೆ ಇದೆ ಎಂದು ಶಿವಾನಂದನ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ T20 World Cup 2024: ಟಿ20 ವಿಶ್ವಕಪ್ಗೆ ಪ್ರಕಟಗೊಂಡ ಎಲ್ಲ ತಂಡಗಳ ಆಟಗಾರರ ಪಟ್ಟಿ
ಟೂರ್ನಿಯಲ್ಲಿ ಒಟ್ಟು 55 ಪಂದ್ಯಗಳು ನಡೆಯಲಿವೆ. ಜೂನ್ 1ರಿಂದ 18ರವರೆಗೆ ಗುಂಪು ಹಂತದಲ್ಲಿ 40 ಪಂದ್ಯಗಳು ನಡೆಯಲಿವೆ. ಜೂನ್ 19 ರಿಂದ 24 ರವರೆಗೆ ಸೂಪರ್ 8 ಪಂದ್ಯಗಳು ನಡೆಯಲಿವೆ. ಸಾಂಪ್ರದಾಯಿಕ ಬದ್ಧ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ನಡುವಣ ಪಂದ್ಯ ಜೂನ್ 9 ರಂದು ನ್ಯೂಯಾರ್ಕ್ನಲ್ಲಿ ನಡೆಯಲ್ಲಿದೆ. ಭಾರತ ತನ್ನ ಮೊದಲ ಪಂದ್ಯವನ್ನು ಜೂನ್ 5 ರಂದು ಐರ್ಲೆಂಡ್ ವಿರುದ್ಧ ಆಡಲಿದೆ. ಭಾರತವು ತನ್ನ ಗುಂಪು ಹಂತದ ಎಲ್ಲಾ ಪಂದ್ಯಗಳನ್ನು ಅಮೆರಿಕದಲ್ಲೇ ಆಡಲಿದೆ. ಲೀಗ್ ಮುಕ್ತಾಯದ ಬಳಿಕ ಮುಂದಿನ ಹಂತಕ್ಕೆ ಅರ್ಹತೆ ಪಡೆದರೆ, ಸೂಪರ್ 8 ಪಂದ್ಯಗಳನ್ನು ಸಹ ಇಲ್ಲೇ ಆಡಲಿದೆ.
ತಲಾ 2 ಅಭ್ಯಾಸ ಪಂದ್ಯ
ವಿಶ್ವಕಪ್ಗೆ ಮುನ್ನ ಎಲ್ಲ 20 ತಂಡಗಳು ತಮ್ಮ ಆಗಮನಕ್ಕೆ ತಕ್ಕಂತೆ ತಲಾ 2 ಅಭ್ಯಾಸ ಪಂದ್ಯಗಳನ್ನು ಆಡಲಿವೆ ಎಂದು ಐಸಿಸಿ ತಿಳಿಸಿದೆ. ಟೂರ್ನಿಯ ಲೀಗ್ ಮತ್ತು ಸೂಪರ್ 8 ಪಂದ್ಯಗಳಿಗೆ ಯಾವುದೇ ಮೀಸಲು ದಿನ ಇಲ್ಲ. ಈ ಪಂದ್ಯಗಳಿಗೆ ಮಳೆ ಬಂದು ಪಂದ್ಯ ರದ್ದಾದರೆ ಸಮಾನ ಅಂಕ ನೀಡಲಾಗುತ್ತದೆ. ಆದರೆ, ಸೆಮಿಫೈನಲ್ ಮತ್ತು ಫೈನಲ್ ಪಂದ್ಯಗಳಿಗೆ ಮೀಸಲು ದಿನ ಇರಲಿದೆ. ಒಂದೊಮ್ಮೆ ಸೆಮಿ ಮತ್ತು ಫೈನಲ್ ಫೈನಲ್ ಪಂದ್ಯಗಳು ಕೂಡ ಮೀಸಲು ದಿನವೂ ನಡೆಯದಿದ್ದರೆ ಆಗ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದ ತಂಡಕ್ಕೆ ಲಾಭ ಸಿಗಲಿದೆ.