ನ್ಯೂಯಾರ್ಕ್: ಟಿ20 ವಿಶ್ವಕಪ್ಗೆ(T20 World Cup 2024) ಟೀಮ್ ಇಂಡಿಯಾದ(Team India) ಆಟಗಾರರು ಅಭ್ಯಾಸ ಆರಂಭಿಸಿದ್ದಾರೆ. ಶುಕ್ರವಾರ ಬೆಳಗ್ಗೆ ನ್ಯೂಯಾರ್ಕ್‌ನ ಮೈದಾನದಲ್ಲಿ ಆಟಗಾರರು ಬ್ಯಾಟಿಂಗ್ ಮತ್ತು ಬೌಲಿಂಗ್ ಅಭ್ಯಾಸದಲ್ಲಿ ಕಾಣಿಸಿಕೊಂಡರು. ಈ ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ನಾಯಕ ರೋಹಿತ್ ಶರ್ಮಾ, ಶುಭಮನ್ ಗಿಲ್, ಉಪನಾಯಕ ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಜಸ್‌ಪ್ರೀತ್ ಬುಮ್ರಾ, ರಿಷಭ್ ಪಂತ್, ಮೊಹಮದ್ ಸಿರಾಜ್, ಸೂರ್ಯಕುಮಾರ್ ಯಾದವ್, ಕುಲ್ದೀಪ್ ಯಾದವ್, ಸಂಜು ಸ್ಯಾಮ್ಸನ್, ಅರ್ಶ್‌ದೀಪ್ ಸಿಂಗ್, ಶಿವಂ ದುಬೆ ಸೇರಿದಂತೆ ಬಹುತೇಕ ಆಟಗಾರರು ಬ್ಯಾಟಿಂಗ್ ಅಭ್ಯಾಸ ನಡೆಸಿದರು. ಅಮೆರಿಕದ ವಾತಾವರಣಕ್ಕೆ ಹೊಂದಿಕೊಳ್ಳುವ ಸಲುವಾಗಿ ಬುಧವಾರ ಮತ್ತು ಗುರುವಾರ ಆಟಗಾರರು ಕೇವಲ ಜಾಗಿಂಗ್ ನಡೆಸಿ, ಫುಟ್ಬಾಲ್ ಆಡಿದ್ದರು.
ಭಾರತಕ್ಕೆ ಸವಾಲು
ಭಾರತೀಯ ಆಟಗಾರರು ಅಮೆರಿಕ ಹಾಗೂ ವೆಸ್ಟ್ ಇಂಡೀಸ್‌ನಲ್ಲಿ ವಾತಾವರಣಕ್ಕೆ ಹೊಂದಿಕೊಳ್ಳುವ ಸವಾಲು ಕೂಡ ಇದೆ. ಏಕೆಂದರೆ ಇಲ್ಲಿ ಹಗಲಿನಲ್ಲಿ ಪಂದ್ಯಗಳು ನಡೆಯುತ್ತವೆ. ಹೀಗಾಗಿ ಸ್ಥಳೀಯ ವಾತಾವರಣಕ್ಕೆ ಹೊಂದಿಕೊಳ್ಳುವ ನಿಟ್ಟಿನಲ್ಲಿ ಭಾರತದ ಆಟಗಾರರು ಸುಡು ಬಿಸಿಲನ್ನು ಲೆಕ್ಕಿಸದೆ ಶುಕ್ರವಾರ ಹಗಲಿನಲ್ಲೇ ಅಭ್ಯಾಸ ನಡೆಸಿದ್ದಾರೆ. ಸಾಮಾನ್ಯವಾಗಿ ಇಲ್ಲಿ 25ರಿಂದ 27 ಡಿಗ್ರಿ ಸೆಲ್ಸಿಯಸ್ ಇರಲಿದೆ. ಹೀಗಾಗಿ ವಿಶ್ವಕಪ್ ಆರಂಭಕ್ಕೂ ಮುನ್ನ ಭಾರತೀಯ ಆಟಗಾರರಿಗೆ ಈ ವಾತಾವರಣಕ್ಕೆ ಒಗ್ಗಿಕೊಳ್ಳುವ ಅಗತ್ಯವಿದೆ. ಇದೇ ಮೊದಲ ಬಾರಿ ಅಮೆರಿಕದಲ್ಲಿ ಆಡಲು ಸಜ್ಜಾಗಿದ್ದು, ಕಠಿಣ ಸವಾಲು ಎದುರಾಗಲಿದೆ.
ಇದನ್ನೂ ಓದಿ
‘ಮೊದಲ ಬಾರಿ ನಾವು ನ್ಯೂಯಾರ್ಕ್‌ನಲ್ಲಿ ಕ್ರಿಕೆಟ್ ಆಡುತ್ತಿದ್ದೇವೆ. ಇದೊಂದು ಖುಷಿಯ ಸಂದರ್ಭ’ ಎಂದು ಆಲ್‌ರೌಂಡರ್ ರವೀಂದ್ರ ಜಡೇಜಾ ಹೇಳಿದರು. ನಾಯಕ ರೋಹಿತ್ ಕೂಡ ನ್ಯೂಯಾರ್ಕ್ ವಾತಾವರಣಕ್ಕೆ ಹೊಂದಿಕೊಂಡು ಕ್ರಿಕೆಟ್ ಆಡುವುದು ಸವಾಲಿನಿಂದ ಕೂಡಿರಲಿದೆ ಎಂದರು. ಭಾರತ ನಾಳೆ(ಜೂನ್ 1) ನಡೆಯುವ ಏಕೈಕ ಅಭ್ಯಾಸ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಆಡಲಿದೆ. ಈ ಪಂದ್ಯ ನಸ್ಸೌ ಕೌಂಟಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿದೆ.
ನ್ಯೂಯಾರ್ಕ್ಗೆ ತೆರಳಿದ ಕೊಹ್ಲಿ
ಐಪಿಎಲ್ ಬಳಿಕ ವಿಶ್ರಾಂತಿ ಪಡೆದಿದ್ದ ವಿರಾಟ್ ಕೊಹ್ಲಿ ಗುರುವಾರ ತಡರಾತ್ರಿ ಮುಂಬೈ ವಿಮಾನ ನಿಲ್ದಾಣದಿಂದ ನ್ಯೂಯಾರ್ಕ್ಗೆ ಪ್ರಯಾಣ ಬೆಳೆಸಿದರು. ಈ ವೇಳೆ ಅಭಿಮಾನಿಯೊಬ್ಬ ವಿರಾಟ್ ಕೊಹ್ಲಿಗೆ ಉಡುಗೊರೆ ನೀಡಿ ಗಮನಸೆಳೆದಿದ್ದಾನೆ. ಕೊಹ್ಲಿ ಬಾಂಗ್ಲಾದೇಶ ವಿರುದ್ಧ ನಾಳೆ ನಡೆಯುವ ಅಭ್ಯಾಸ ಪಂದ್ಯದಲ್ಲಿ ಆಡುವುದು ಅನುಮಾನ ಎನ್ನಲಾಗಿದೆ.
ಇದನ್ನೂ ಓದಿ T20 World Cup 2024: ಟಿ20 ವಿಶ್ವಕಪ್ ಪಂದ್ಯ ನಡೆಯುವ ತಾಣ,ಭಾರತದ ಪಂದ್ಯಗಳ ಪ್ರಸಾರದ ಮಾಹಿತಿ ಹೀಗಿದೆ
ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಹಾರ್ದಿಕ್ ಪಾಂಡ್ಯ (ಉಪನಾಯಕ), ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್ (ವಿಕೆಟ್ ಕೀಪರ್), ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಶಿವಂ ದುಬೆ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಯುಜ್ವೇಂದ್ರ ಚಾಹಲ್, ಅರ್ಶದೀಪ್ ಸಿಂಗ್, ಜಸ್‌ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್. ಮೀಸಲು ಆಟಗಾರರು ಶುಭಮನ್ ಗಿಲ್, ರಿಂಕು ಸಿಂಗ್, ಖಲೀಲ್ ಅಹ್ಮದ್ ಮತ್ತು ಅವೇಶ್ ಖಾನ್.