ಬೆಂಗಳೂರು: ಅಮೆರಿಕ ಮತ್ತು ವೆಸ್ಟ್ ಇಂಡೀಸ್ ಜಂಟಿ ಆತಿಥ್ಯದಲ್ಲಿ ನಡೆಯುವ ಟಿ20 ವಿಶ್ವಕಪ್ ಟೂರ್ನಿ(T20 World Cup 2024) ಆರಂಭಕ್ಕೆ ಇನ್ನು 2 ದಿನ ಮಾತ್ರ ಬಾಕಿ ಉಳಿದಿದೆ. ಈಗಾಗಲೇ ಟೂರ್ನಿಯಲ್ಲಿ ದಾಖಲಾದ ಹಲವು ದಾಖಲೆಗಳನ್ನು ಮೆಲುಕು ಹಾಕಲಾಗಿದೆ. ಇದೀಗ ಒಂದೇ ಆವೃತ್ತಿಯಲ್ಲಿ ಅತ್ಯಧಿಕ ರನ್ ಗಳಿಸಿದ ಬ್ಯಾಟರ್ಗಳು ಯಾರೆಂಬ ಮಾಹಿತಿ ಇಂತಿದೆ.
ವಿರಾಟ್ ಕೊಹ್ಲಿ
ಕಿಂಗ್ ಖ್ಯಾತಿಯ ವಿರಾಟ್ ಕೊಹ್ಲಿ ಅವರು ಟಿ20 ವಿಶ್ವಕಪ್ನ ಒಂದೇ ಆವೃತ್ತಿಯಲ್ಲಿ ಅತ್ಯಧಿಕ ರನ್ ಗಳಿಸಿದ ಮೊದಲ ಆಟಗಾರ ಎನಿಸಿಕೊಂಡಿದ್ದಾರೆ. 2014ರಲ್ಲಿ ನಡೆದಿದ್ದ ಟೂರ್ನಿಯಲ್ಲಿ ಕೊಹ್ಲಿ 319 ರನ್ ಬಾರಿಸಿದ್ದರು. 2022ರಲ್ಲಿಯೂ ಕೊಹ್ಲಿ 296 ರನ್ ಬಾರಿಸಿದ್ದರು. 2 ಬಾರಿ ಟೂರ್ನಿಯೊಂದರಲ್ಲಿ ಗರಿಷ್ಠ ರನ್ ಗಳಿಸಿದ ದಾಖಲೆಯೂ ಅವರ ಹೆಸರಿನಲ್ಲಿದೆ. ಸದ್ಯ ಪ್ರಚಂಡ ಬ್ಯಾಟಿಂಗ್ ಫಾರ್ಮ್ನಲ್ಲಿರುವ ಕೊಹ್ಲಿ ಈ ಬಾರಿಯೂ ಸ್ಫೋಟಕ ಬ್ಯಾಟಿಂಗ್ ನಡೆಸುವ ಸಾಧ್ಯತೆ ಇದೆ. ಕೆಲವು ದಿನಗಳ ಹಿಂದೆ ಮುಕ್ತಾಯ ಕಂಡಿದ್ದ 17ನೇ ಆವೃತ್ತಿಯ ಐಪಿಎಲ್ನಲ್ಲಿ ಕೊಹ್ಲಿ 700 ರನ್ಗಳ ಗಡಿ ದಾಟಿ ಟೂರ್ನಿಯಲ್ಲಿ ಅತ್ಯಧಿಕ ರನ್ ಗಳಿಸಿದ ಆಟಗಾರ ಎಂದೆನಿಸಿದ್ದರು.
ತಿಲಕರತ್ನೆ ದಿಲ್ಶನ್
ಶ್ರೀಲಂಕಾ ಕ್ರಿಕೆಟ್ ತಂಡದ ಮಾಜಿ ಆರಂಭಿಕ ಆಟಗಾರ ತಿಲಕರತ್ನೆ ದಿಲ್ಶನ್ ಅವರು ಟಿ20 ವಿಶ್ವಕಪ್ನ ಒಂದೇ ಆವೃತ್ತಿಯಲ್ಲಿ ಅತ್ಯಧಿಕ ರನ್ ಗಳಿಸಿದ ಬ್ಯಾಟರ್ಗಳ ಯಾದಿಯಲ್ಲಿ ದ್ವಿತೀಯ ಸ್ಥಾನಿಯಾಗಿದ್ದಾರೆ. 2009ರಲ್ಲಿ ತಿಲಕರತ್ನೆ ದಿಲ್ಶನ್ 317 ರನ್ ಬಾರಿಸಿದ್ದರು.
ಇದನ್ನೂ ಓದಿ T20 World Cup 2024: ಟಿ20 ವಿಶ್ವಕಪ್ ಟೂರ್ನಿಯಲ್ಲಿ ಅತ್ಯಧಿಕ ವಿಕೆಟ್ ಕಿತ್ತ ಟಾಪ್ 5 ಬೌಲರ್ಗಳು ಯಾರು?
ಬಾಬರ್ ಅಜಂ
ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಂ ಅವರು 2021ರಲ್ಲಿ ದುಬೈನಲ್ಲಿ ನಡೆದಿದ್ದ ಟಿ20 ವಿಶ್ವಕಪ್ ಟೂರ್ನಿಯಲ್ಲಿ 303 ರನ್ ಬಾರಿಸಿದ್ದರು. ಟಿ20 ವಿಶ್ವಕಪ್ನ ಒಂದೇ ಆವೃತ್ತಿಯಲ್ಲಿ ಅತ್ಯಧಿಕ ರನ್ ಗಳಿಸಿದ ಬ್ಯಾಟರ್ಗಳ ಪಟ್ಟಿಯಲ್ಲಿ ಸದ್ಯ ಮೂರನೇ ಸ್ಥಾನದಲ್ಲಿದ್ದಾರೆ. ಪ್ರಸಕ್ತ ಟೂರ್ನಿಯಲ್ಲಿಯೂ ಆಡುತ್ತಿರುವ ಅವರಿಗೆ ಈ ದಾಖಲೆಯನ್ನು ಮತ್ತೆ ತಿದ್ದಿ ಬರೆಯುವ ಅವಕಾಶವಿದೆ.
ಮಹೇಲಾ ಜಯವರ್ಧನೆ
ಟಿ20 ವಿಶ್ವಕಪ್ನ ಒಂದೇ ಆವೃತ್ತಿಯಲ್ಲಿ ಅತ್ಯಧಿಕ ರನ್ ಗಳಿಸಿದ ಬ್ಯಾಟರ್ಗಳ ಯಾದಿಯಲ್ಲಿ ಶ್ರೀಲಂಕಾ ತಂಡದ ಮಾಜಿ ನಾಯಕ ಹಾಗೂ ಆಟಗಾರ ಮಹೇಲಾ ಜಯವರ್ಧನೆ ನಾಲ್ಕನೇ ಸ್ಥಾನಿಯಾಗಿದ್ದಾರೆ. ಅವರು 2010ರಲ್ಲಿ ನಡೆದಿದ್ದ ಟೂರ್ನಿಯಲ್ಲಿ 302 ರನ್ ಬಾರಿಸಿದ್ದರು.
ಇದನ್ನೂ ಓದಿ T20 World Cup 2024: ಟಿ20 ವಿಶ್ವಕಪ್ನಲ್ಲಿ ಅತ್ಯಧಿಕ ಸಿಕ್ಸರ್ ಬಾರಿಸಿದ ಭಾರತದ ಬ್ಯಾಟರ್ಗಳಿವರು
ಈ ಬಾರಿಯ ಟೂರ್ನಿಯಲ್ಲಿ ಒಟ್ಟು 55 ಪಂದ್ಯಗಳು ನಡೆಯಲಿವೆ. ಗುಂಪು ಹಂತದಲ್ಲಿ 40 ಪಂದ್ಯಗಳು ನಡೆಯಲಿವೆ. ಲೀಗ್ ಪಂದ್ಯಗಳು ಜೂನ್ 1ರಿಂದ ಆರಂಭಗೊಳ್ಳಲಿದೆ. ಉದ್ಘಾಟನ ಪಂದ್ಯದಲ್ಲಿ ಆತಿಥೇಯ ಅಮೆರಿಕ ಮತ್ತು ಕೆನಾಡ ಮುಖಾಮುಖಿಯಾಗಲಿವೆ. ಒಟ್ಟು 20 ತಂಡಗಳು ಕಣಕ್ಕಿಳಿಯಲಿವೆ.