ಬೆಂಗಳೂರು: ಇನ್ನೇನು ಕೆಲವೇ ದಿನಗಳಲ್ಲಿ ಅಮೆರಿಕ ಮತ್ತು ವೆಸ್ಟ್ ಇಂಡೀಸ್ ಜಂಟಿ ಆತಿಥ್ಯದಲ್ಲಿ ನಡೆಯಲಿರುವ ಐಸಿಸಿ ಪುರುಷರ ಟಿ–20 ಕ್ರಿಕೆಟ್ ವಿಶ್ವಕಪ್(T20 World Cup 2024) ಟೂರ್ನಿಯಲ್ಲಿ ಕರ್ನಾಟಕ ಹಾಲು ಮಹಾ ಮಂಡಳಿ(KMF) ಸ್ಕಾಟ್ಲೆಂಡ್(Scotland) ಮತ್ತು ಐರ್ಲೆಂಡ್(Ireland) ತಂಡಗಳ ಪ್ರಾಯೋಜಕತ್ವ ಪಡೆದಿದೆ. ‘ನಂದಿನಿ’ ಲಾಂಛನ(nandini milk logo) ಇರುವ ನೂತನ ಜೆರ್ಸಿಯನ್ನು ಸ್ಕಾಟ್ಲೆಂಡ್ ತಂಡ ಬುಧವಾರ ಬಿಡುಗಡೆ ಮಾಡಿತ್ತು. ಕೆಎಂಎಫ್ ಕೇಂದ್ರ ಕಚೇರಿಯಲ್ಲಿ ನಡೆದ ವರ್ಚುವಲ್ ಮಾದರಿಯ ಸಭೆಯಲ್ಲಿ ಈ ಜೆರ್ಸಿಯನ್ನು ಬಿಡುಗಡೆಗೊಳಿಸಲಾಗಿತ್ತು. ಈ ವಿಚಾರವಾಗಿ ಸಿಎಂ ಸಿದ್ದರಾಮಯ್ಯ(Siddaramaiah) ಅವರು ಗುರುವಾರ ತಮ್ಮ ಅಧಿಕೃತ ಟ್ವಿಟರ್ ಎಕ್ಸ್ ತಾಣದಲ್ಲಿ ಪೋಸ್ಟ್ ಮಾಡಿ ಹರ್ಷ ವ್ಯಕ್ತಪಡಿಸಿ, ‘ನಂದಿನಿ’ ಲಾಂಛನ ಜಾಗತಿಕ ಬ್ರ್ಯಾಂಡ್ ಆಗಿ ರೂಪಿಸುವಲ್ಲಿ ಇದು ಮಹತ್ವದ ಹೆಜ್ಜೆ ಎಂದು ಹೇಳಿದ್ದಾರೆ.
“ರಾಜ್ಯದ ಉತ್ಕೃಷ್ಟ ಗುಣಮಟ್ಟದ ಹಾಲಿನ ಉತ್ಪನ್ನಗಳು ಮತ್ತು ನಾಡಿನ ರೈತರ ಶ್ರಮವೆರಡನ್ನೂ ವಿಶ್ವಕ್ಕೆ ಪರಿಚಯಿಸುವ ಸಂಕಲ್ಪ ನಮ್ಮದು. ನಂದಿನಿಯನ್ನು ಜಾಗತಿಕ ಬ್ರಾಂಡ್ ಆಗಿ ರೂಪಿಸುವಲ್ಲಿ ಇದು ಮಹತ್ವದ ಹೆಜ್ಜೆಯಾಗಲಿದೆ. ಈ ಬಾರಿಯ ಟಿ20 ವಿಶ್ವಕಪ್‌ನಲ್ಲಿ ನಂದಿನಿಯ ಹೆಸರು ರಾರಾಜಿಸಲಿದೆ. ಕನ್ನಡದ ಕಂಪು ಕಂಗೊಳಿಸಲಿದೆ” ಎಂದು ಬಣ್ಣಿಸಿದ್ದಾರೆ.
ಈಗಾಗಲೇ ಮಲೇಷ್ಯಾ, ವಿಯೆಟ್ನಾಂ, ಸಿಂಗಾಪುರ, ಅಮೆರಿಕ, ದುಬೈ, ಯುಎಇ ಸೇರಿ ಮುಂತಾದ ರಾಷ್ಟ್ರಗಳಲ್ಲಿ ಹೆಸರುವಾಸಿಯಾಗಿರುವ ಕರ್ನಾಟಕದ ಹೆಮ್ಮೆಯ ನಂದಿನಿ ಸಂಸ್ಥೆ T20 ವಿಶ್ವಕಪ್ ಪಂದ್ಯಕೂಟದಲ್ಲಿ ಸ್ಕಾಟ್ಲೆಂಡ್ ಮತ್ತು ಐರ್ಲೆಂಡ್ ತಂಡಗಳ ಪ್ರಾಯೋಜಕತ್ವ ಪಡೆದಿರುವುದು ನಿಜಕ್ಕೂ ಹೆಮ್ಮೆಯ ಸಂಗತಿ ಎಂದರು.
ಕೆಎಂಎಫ್ ಕ್ರಿಕೆಟ್ ಲೋಕಕ್ಕೆ ಕಾಲಿಟ್ಟು ನಂದಿನಿ(nandini milk) ಲೋಗೋವನ್ನು ಜಾಗತಿಕ ಮಟ್ಟದಲ್ಲಿ ಪ್ರಚಾರ ಮಾಡಲು ಮುಂದಾಗಿದೆ. ಜತೆಗೆ ಅಮೂಲ್‌ಗೆ ತೀವ್ರ ಪೈಪೋಟಿ ನೀಡಲಿದೆ. ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಎಂ.ಕೆ. ಜಗದೀಶ್ ನಮ್ಮ ಬ್ರಾಂಡ್ ಟಿ20 ವಿಶ್ವಕಪ್‌ನಲ್ಲಿ ಕಾಣಿಸಿಕೊಳ್ಳುವುದು ಕರ್ನಾಟಕದ ಪ್ರತಿಯೊಬ್ಬರಿಗೂ ಹೆಮ್ಮೆಯ ಕ್ಷಣವಾಗಿದೆ ಎಂದು ಹೇಳಿದರು.
ಇದನ್ನೂ ಓದಿ T20 World Cup 2024: ಭಾರತ ಕೇವಲ ಒಂದು ಅಭ್ಯಾಸ ಪಂದ್ಯ ಮಾತ್ರ ಆಡಲಿದೆ; ಕಾರಣ ಏನು?
ಸ್ಕಾಟ್ಲೆಂಡ್ ಮತ್ತು ಐರ್ಲೆಂಡ್ ತಂಡಗಳ ಎಡಗೈ ಬ್ಯಾಟ್ಸ್‌ಮನ್‌ಗಳಿಗೆ ಬಲಗೈ ಮತ್ತು ಬಲಗೈ ಬ್ಯಾಟ್ಸ್‌ಮನ್‌ಗಳ ಎಡಗೈ ಮೇಲೆ ನಂದಿನಿ ಲೋಗೋ ಕನ್ನಡ ಮತ್ತು ಇಂಗ್ಲೀಸ್ನಲ್ಲಿ ಕಾಣಿಸಿಕೊಳ್ಳಲಿದೆ. ಐರ್ಲೆಂಡ್ ತಂಡ ಜೆರ್ಸಿ ಇನ್ನಷ್ಟೇ ಅನಾವರಣಗೊಳ್ಳಬೇಕಿದೆ. ಮಿನಿ ವಿಶ್ವಕಪ್ ಟೂರ್ನಿಯಲ್ಲಿ ಒಟ್ಟು 55 ಪಂದ್ಯಗಳು ನಡೆಯಲಿವೆ. ಜೂನ್ 1ರಿಂದ 18ರವರೆಗೆ ಗುಂಪು ಹಂತದಲ್ಲಿ 40 ಪಂದ್ಯಗಳು ನಡೆಯಲಿವೆ. ಜೂನ್ 19 ರಿಂದ 24 ರವರೆಗೆ ಸೂಪರ್ 8 ಪಂದ್ಯಗಳು ನಡೆಯಲಿವೆ.
ಮೋಹನ್‌ದಾಸ್ ಪೈ ವಿರೋಧ
ಉದ್ಯಮಿ ಮೋಹನ್‌ದಾಸ್ ಪೈ (Mohandas Pai) ಅವರು ಸ್ಕಾಟ್ಲೆಂಡ್, ಐರ್ಲೆಂಡ್ ತಂಡಗಳಿಗೆ KMF ಪ್ರಾಯೋಜಕತ್ವ ಪಡೆದ ಕಾರಣ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದರು. ಕೆಎಂಎಫ್‌ಗೆ ಕರ್ನಾಟಕ ರಣಜಿ ತಂಡ, ರಾಜ್ಯದ ಕ್ರೀಡಾಪಟುಗಳು, ಕಲಾವಿದರು, ರೈತರ ಮಕ್ಕಳು ಕಾಣುವುದಿಲ್ಲವೇ? ಇವುಗಳಿಗೇಕೆ ಪ್ರಾಯೋಜಕತ್ವ ನೀಡಿಲ್ಲ ಎಂದು ಪ್ರಶ್ನೆ ಮಾಡಿದ್ದರು.
ಕೆಎಂಎಫ್‌ನಿಂದ ವಿದೇಶಿ ಕ್ರಿಕೆಟ್ ತಂಡಗಳಿಗೆ ಪ್ರಾಯೊಜಕತ್ವ ಪಡೆದ ವಿಚಾರದ ಬಗ್ಗೆ ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಮೋಹನ್ ದಾಸ್ ಪೈ, ಕರ್ನಾಟಕದ ರಣಜಿ ತಂಡ, ರಾಜ್ಯದ ಕ್ರೀಡಾಪಟುಗಳು, ಕಲಾವಿದರು, ರೈತರ ಮಕ್ಕಳು, ಬಡವರಿಗೆ ವಿದ್ಯಾರ್ಥಿ ವೇತನಗಳಿಗೆ ಏಕೆ ಕೆಎಂಎಫ್ ಪ್ರಾಯೋಜಕತ್ವವನ್ನು ನೀಡಬಾರದು? ಕೆಎಂಎಫ್ ಕನ್ನಡಿಗ ತೆರಿಗೆದಾರರ ಹಣ, ಸಬ್ಸಿಡಿ ಮತ್ತು ಬಜೆಟ್‌ನಿಂದ ಧನಸಹಾಯವನ್ನು ಪಡೆದುಕೊಳ್ಳುತ್ತದೆ. ಆದರೆ, ಯಾರಿಗೂ ಗೊತ್ತಿಲ್ಲದ ವಿದೇಶಿ ತಂಡಗಳಿಗೆ ಖರ್ಚು ಮಾಡಲು ಹೊರಟಿದೆ” ಎಂದು ಪ್ರಶ್ನೆ ಮಾಡಿದ್ದಾರೆ. ಅಲ್ಲದೆ, ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್‌ಗೆ ಈ ಬಗ್ಗೆ ಟ್ಯಾಗ್ ಮಾಡಿ ತಮ್ಮ ಆಕ್ರೋಶ ಹೊರಹಾಕಿದ್ದರು.