Site icon Vistara News

T20 World Cup 2024: ಇಂಡೋ-ಪಾಕ್ ಪಂದ್ಯ ನಡೆಯುವ​ ಸ್ಟೇಡಿಯಂ ನಿರ್ಮಾಣದ 2ನೇ ವಿಡಿಯೊ ಹಂಚಿಕೊಂಡ ಐಸಿಸಿ

T20 World Cup 2024

ನ್ಯೂಯಾರ್ಕ್: ವೆಸ್ಟ್​ ಇಂಡೀಸ್​ ಮತ್ತು ಅಮೆರಿಕ ಆತಿಥ್ಯದಲ್ಲಿ ನಡೆಯಲಿರುವ ಪುರುಷರ ಟಿ20 ವಿಶ್ವಕಪ್​ ಟೂರ್ನಿಗೆ(T20 World Cup 2024) ಇನ್ನು ಕೆಲವೇ ತಿಂಗಳು ಮಾತ್ರ ಬಾಕಿ ಉಳಿದಿದೆ. ಇದೀಗ ನ್ಯೂಯಾರ್ಕ್‌ನಲ್ಲಿ ನಡೆಯುವ ಪಂದ್ಯಗಳಿಗಾಗಿ ನಿರ್ಮಿಸಲಾಗುತ್ತಿರುವ ವಿಶೇಷ ವ್ಯವಸ್ಥೆಯ ಸ್ಟೇಡಿಯಂನ 2ನೇ ವಿಡಿಯೊವನ್ನು ಐಸಿಸಿ ತನ್ನ ಅಧಿಕೃತ ಟ್ವಿಟರ್​ ಎಕ್ಸ್​ನಲ್ಲಿ ಹಂಚಿಕೊಂಡಿದೆ.

ನ್ಯೂಯಾರ್ಕ್​ನಲ್ಲಿ ನಿಮಾಣಗೊಳ್ಳುತ್ತಿರುವ ನಸ್ಸೌ ಕೌಂಟಿ ಇಂಟರ್‌ನ್ಯಾಶನಲ್ ಕ್ರಿಕೆಟ್ ಸ್ಟೇಡಿಯಂನ(Nassau County International Cricket Stadium) 2ನೇ ಹಂತದ ಕಾಮಗಾರಿಯ ವಿಡಿಯೊವನ್ನು ಐಸಿಸಿ ತನ್ನ ಅಧಿಕೃತ ಟ್ವಿಟರ್​ ಎಕ್ಸ್​ನಲ್ಲಿ ಹಂಚಿಕೊಂಡಿದೆ. ಮಾರ್ಚ್​ 5ರಂದು ಆರಂಭಿಕ 30 ದಿನಗಳ ಟೈಮ್‌ಲ್ಯಾಪ್ಸ್ ವೀಡಿಯೊವನ್ನು ಬಿಡುಗಡೆ ಮಾಡಿದ ನಂತರ, ಇದೀಗ ಮತ್ತೆ 30 ದಿನಗಳ ಎರಡನೇ ವೀಡಿಯೊವನ್ನು ಅನಾವರಣಗೊಳಿಸಲಾಗಿದೆ.

2ನೇ ಹಂತದ ವಿಡಿಯೊ

ಜೂನ್ 9 ರಂದು ಭಾರತ ಮತ್ತು ಪಾಕಿಸ್ತಾನ(IND vs PAK) ನಡುವಿನ ಹೈ-ವೋಲ್ಟೇಜ್ ಘರ್ಷಣೆ ಸೇರಿದಂತೆ ಭಾರತದ ಎಲ್ಲಾ ಗುಂಪು-ಹಂತದ ಪಂದ್ಯಗಳಿಗೆ ಈ ಕ್ರೀಡಾಂಗಣವು ಅಣಿಯಾಗಿದೆ. ಅಚ್ಚರಿ ಎಂದರೆ ಈ ಸ್ಟೇಡಿಯಂ ಅನ್ನು ನಿರ್ಮಾಣ ಮಾಡಿದ್ದೇ ಭಾರತ ಮತ್ತು ಪಾಕಿಸ್ತಾನ ಎದುರಿನ ಪಂದ್ಯಕ್ಕಾಗಿ.

ಐಸಿಸಿ ಹಂಚಿಕೊಂಡಿರುವ ಈ 2ನೇ ವಿಡಿಯೊದಲ್ಲಿ ಮಾರ್ಚ್​ 4ರಿಂದ ಮಾರ್ಚ್ 31ರ ತನಕ ​ಸಾಗಿದ ಎಲ್ಲ ಕಾರ್ಯ ವೈಕರಿಯ ದೃಶ್ಯಗಳನ್ನು ಕಾಣಬಹುದಾಗಿದೆ. ಬಹುತೇಕ ಕೊನೆಯ ಹಂತಕ್ಕೆ ಬಂದು ತಲುಪಿದ್ದೇವೆ ಎಂದು ಐಸಿಸಿ ಈ ವಿಡಿಯೊಗೆ ಕ್ಯಾಪ್ಷನ್​ ನೀಡಿದೆ. ನ್ಯೂಯಾರ್ಕ್ ಕ್ರೀಡಾಂಗಣವು ಇನ್ನೊಂದು ತಿಂಗಳೊಳಗೆ ಎದ್ದು ನಿಲ್ಲಲಿದೆ ಎಂದು ವರದಿಯಾಗಿದೆ. ಈಗಾಗಲೇ ಹಲವು ಹಂತದ ಕಾಮಗಾರಿ ಪೂರ್ಣಗೊಂಡಿದ್ದು ಉಳಿದಿರುವ ಕೆಲಸ ಬರದಿಂದ ಸಾಗುತ್ತಿದೆ. ಮೊದಲ ಹಂತದಲ್ಲಿ ಹಂಚಿಕೊಂಡ ವಿಡಿಯೊದಲ್ಲಿ ಜನವರಿ 11ರಿಂದ ಆರಂಭವಾದ ಕೆಲಸದಿಂದ ಹಿಡಿದು ಸದ್ಯ ಮಾರ್ಚ್​ 4ರ ತನಕದ ಸಾಗಿದ ಕಾರ್ಯವೈಕರಿಯನ್ನು ತೋರಿಸಲಾಗಿತ್ತು.

ಇದನ್ನೂ ಓದಿ T20 World Cup 2024: ಏಪ್ರಿಲ್‌ ಕೊನೆಯ ವಾರದಲ್ಲಿ ಟಿ20 ವಿಶ್ವಕಪ್​ಗೆ ಭಾರತ ತಂಡ ಪ್ರಕಟ

ಮೊದಲ ಹಂತದಲ್ಲಿ ಪ್ರಟಿಸಿದ ವಿಡಿಯೊ

ತಾತ್ಕಾಲಿಕ ಕ್ರೀಡಾಂಗಣ


34 ಸಾವಿರ ಪ್ರೇಕ್ಷಕರು ಕೂರುವಷ್ಟು ಸಾಮರ್ಥ್ಯದ ಸ್ಟೇಡಿಯಂ ಇದಾಗಿದ್ದು. ಭಾರತ-ಪಾಕ್​ ಪಂದ್ಯಕ್ಕಾಗಿಯೇ ಇದನ್ನು ತಾತ್ಕಾಲಿಕವಾಗಿ ನಿರ್ಮಿಸಲಾಗಿದೆ. ಪಂದ್ಯದ ನಂತರ ಇದನ್ನು ಕೆಡವಲಾಗುತ್ತದೆ ಎಂದು ತಿಳಿಸಲಾಗಿದೆ. ಭಾರತ ಮತ್ತು ಪಾಕ್​ ನಡುವಣ ಪಂದ್ಯ ನ್ಯೂಯಾರ್ಕ್‌ನಲ್ಲಿಯೇ ನಡೆಸಲು ಕಾರಣವೂ ಕೂಡ ಇದೆ. ಏಕೆಂದರೆ ಈ ಪ್ರದೇಶದಲ್ಲಿ 7,11,000 ಭಾರತೀಯ ಮತ್ತು ಸುಮಾರು 1,00,000 ಪಾಕಿಸ್ತಾನ ಮೂಲದ ಜನರು ವಾಸಿಸುತ್ತಿದ್ದಾರೆ ಎನ್ನಲಾಗಿದೆ.

ನ್ಯೂಯಾರ್ಕ್ ಮತ್ತು ನವದೆಹಲಿ ನಡುವೆ 10.5 ಗಂಟೆಗಳ ಸಮಯದ ವ್ಯತ್ಯಾಸವಿರುವುದರಿಂದ, ಸಂಘಟಕರು ಕೆಲವು ಪಂದ್ಯಗಳನ್ನು, ವಿಶೇಷವಾಗಿ ಭಾರತವನ್ನು ಒಳಗೊಂಡ ಪಂದ್ಯಗಳನ್ನು ಬೆಳಗ್ಗೆ ಪ್ರಾರಂಭಿಸಲು ಒಪ್ಪಿಕೊಂಡಿದ್ದಾರೆ. ಇದು ಭಾರತೀಯ ದೂರದರ್ಶನ ಪ್ರೇಕ್ಷಕರಿಗೆ ತಮ್ಮ ಅನುಕೂಲದ ಸಮಯದಲ್ಲಿ ಪಂದ್ಯವನ್ನು ನೋಡಲು ಸಹಾಯ ಮಾಡಲಿದೆ. ಜೂನ್​ 9 ಕೂಡ ಭಾನುವಾರವಾಗಿದೆ. ಅಮೆರಿಕದಲ್ಲಿ ರಾತ್ರಿ ಪಂದ್ಯ ಆಯೋಜಿಸಿದರೆ, ಭಾರತದಲ್ಲಿ ಸೋಮವಾರ ಮುಂಜಾನೆ ಪಂದ್ಯ ಪ್ರಸಾರವಾಗುತ್ತದೆ. ಹೀಗಾಗಿ ಅಮೆರಿಕದಲ್ಲಿ ರಾತ್ರಿ ಪಂದ್ಯ ನಡೆಸುವುದಾದರೆ ಜೂನ್​ 8ರಂದೇ ನಡೆಯಲಿದೆ. ಆಗ ಭಾರತದಲ್ಲಿ ಭಾನುವಾರ ಬೆಳಗ್ಗೆ ಪಂದ್ಯ ಪ್ರಸಾರವಾಗಲಿದೆ.

Exit mobile version