ದುಬೈ: ಆಸ್ಟ್ರೇಲಿಯಾ ಆತಿಥ್ಯದಲ್ಲಿ ನಡೆಯುತ್ತಿರುವ ಐಸಿಸಿ ಟಿ20 ವಿಶ್ವ ಕಪ್ ಕೂಟ ಮುಕ್ತಾಯದ ಹಂತಕ್ಕೆ ಬಂದು ನಿಂತಿದೆ. ಅದರಂತೆ 2 ಸೆಮಿಫೈನಲ್ ಮತ್ತು ಫೈನಲ್ ಪಂದ್ಯಗಳು ಸೇರಿ ಒಟ್ಟು ಮೂರು ಪಂದ್ಯಗಳು ನಡೆದರೆ ಕ್ರಿಕೆಟ್ ವಿಶ್ವ ಸಮರಕ್ಕೆ ತೆರೆ ಬೀಳಲಿದೆ. ಇದಕ್ಕೂ ಮುನ್ನ ಮುಂದಿನ 2024ರ ಟಿ20 ವಿಶ್ವ ಕಪ್(T20 World Cup 2024)ನ ಸೂಪರ್-12ಗೆ ನೇರವಾಗಿ ಅರ್ಹತೆ ಪಡೆದ ತಂಡಗಳ ಪಟ್ಟಿ ಬಿಡುಗಡೆಗೊಂಡಿದೆ.
2024ರ ಟಿ20 ವಿಶ್ವ ಕಪ್ ಕೂಟ ವೆಸ್ಟ್ ಇಂಡೀಸ್ ಮತ್ತು ಯುಎಸ್‌ಎ ಆತಿಥ್ಯದಲ್ಲಿ ನಡೆಯಲಿದೆ. ಇದೀಗ ಈ ಕೂಟದ ಸೂಪರ್-12 ಪಂದ್ಯಕ್ಕೆ ಅಚ್ಚರಿ ಎಂಬಂತೆ ನೆದರ್ಲೆಂಡ್ಸ್ ಕೂಡ ಆಯ್ಕೆಯಾಗಿದೆ. ದಕ್ಷಿಣ ಆಫ್ರಿಕಾ ವಿರುದ್ಧ ಆಶ್ಚರ್ಯಕರ ರೀತಿಯಲ್ಲಿ ಗೆದ್ದ ಪರಿಣಾಮ ಈ ಬಾರಿಯ ವಿಶ್ವ ಕಪ್ನ ಸೂಪರ್ 12ನ ಗ್ರೂಪ್ 2ನಲ್ಲಿ ಟಾಪ್ 4ರಲ್ಲಿ ನೆದರ್ಲೆಂಡ್ಸ್ ತಂಡ ಸ್ಥಾನ ಪಡೆಯಿತು. ಇದರಿಂದ 2024ರ ಟಿ20 ವಿಶ್ವಕಪ್‌ನ ಸೂಪರ್ 12ಗೆ ನೇರವಾಗಿ ಅರ್ಹತೆ ಪಡೆದಿದೆ.
ನಿಯಮಗಳ ಪ್ರಕಾರ ಈ ಬಾರಿಯ ವಿಶ್ವ ಕಪನ್ನ ಗ್ರೂಪ್ 1 ಮತ್ತು ಗ್ರೂಪ್ 2ನಲ್ಲಿ ಅಗ್ರ ನಾಲ್ಕು ತಂಡಗಳು ಮುಂದಿನ ವಿಶ್ವಕಪ್‌ಗೆ ನೇರವಾಗಿ ಅರ್ಹತೆ ಪಡೆಯುತ್ತವೆ. ಗ್ರೂಪ್ ಹಂತವನ್ನು ಹೊರತುಪಡಿಸಿ ಅತಿ ಹೆಚ್ಚು ಶ್ರೇಯಾಂಕ ಹೊಂದಿರುವ ಬಾಂಗ್ಲಾದೇಶ ಮತ್ತು ಅಫಘಾನಿಸ್ತಾನ ತಂಡಗಳು ಕೂಡ ಸೂಪರ್ 12 ಪ್ರವೇಶಿಸಿವೆ.
ವೆಸ್ಟ್ ಇಂಡೀಸ್ ಮತ್ತು ಅಮೆರಿಕ 2024ರ ವಿಶ್ವ ಕಪ್ ಕೂಟದ ಆತಿಥ್ಯ ವಹಿಸುತ್ತಿರುವ ಕಾರಣದಿಂದ ಈ ಎರಡು ತಂಡಗಳು ಕೂಡ ನೇರವಾಗಿ ಸೂಪರ್ 12 ಪ್ರವೇಶಿಸಿವೆ. ಐಸಿಸಿ ಟಿ20 ವಿಶ್ವಕಪ್ 2024ರ ಟೂರ್ನಮೆಂಟ್‌ಗೆ ಅರ್ಹತೆ ಗಿಟ್ಟಿಸಿರುವ 12 ತಂಡಗಳ ಹೆಸರು ಈ ಕೆಳಗೆ ನೀಡಲಾಗಿದೆ.
ತಂಡಗಳು: ಯುಎಸ್‌ಎ, ವೆಸ್ಟ್ ಇಂಡೀಸ್, ಭಾರತ, ಪಾಕಿಸ್ತಾನ, ದಕ್ಷಿಣ ಆಫ್ರಿಕಾ, ಬಾಂಗ್ಲಾದೇಶ, ಶ್ರೀಲಂಕಾ, ಅಫಘಾನಿಸ್ತಾನ, ನ್ಯೂಜಿಲೆಂಡ್, ಇಂಗ್ಲೆಂಡ್ ಆಸ್ಟ್ರೇಲಿಯಾ, ನೆದರ್ಲೆಂಡ್ಸ್
ಇದನ್ನೂ ಓದಿ | IND VS ZIM | ಜಿಂಬಾಬ್ವೆ ವಿರುದ್ಧ 71 ರನ್ ಭರ್ಜರಿ ಗೆಲುವು ದಾಖಲಿಸಿದ ಟೀಮ್ ಇಂಡಿಯಾ