Site icon Vistara News

T20 World Cup 2024: ಟಿ20 ವಿಶ್ವಕಪ್​ನಲ್ಲಿ ನೂತನ ದಾಖಲೆ ಸೃಷ್ಟಿಸಿದ ಲಂಕಾ-ದಕ್ಷಿಣ ಆಫ್ರಿಕಾ ಪಂದ್ಯ

T20 World Cup 2024

T20 World Cup 2024: Record for most dot balls in a T20 World Cup 2024 match gets broken

ನ್ಯೂಯಾರ್ಕ್​: ಸೋಮವಾರ ನಡೆದಿದ್ದ ಟಿ20 ವಿಶ್ವಕಪ್​(T20 World Cup 2024) ಪಂದ್ಯದಲ್ಲಿ ಎರಡೂ ಪಂದ್ಯಗಳು ಕೂಡ ಅತಿ ಹೆಚ್ಚು ಡಾಟ್​ ಬಾಲ್(Most dot balls in t20 world cup)​ ಕಂಡ ಪಂದ್ಯ ಎಂಬ ನೂತನ ದಾಖಲೆ ಬರೆದಿದೆ. ಮೊದಲ ಪಂದ್ಯವಾದ ನಮೇಬಿಯಾ ಮತ್ತು ಒಮಾನ್​ 123 ಡಾಟ್​ ಬಾಲ್​ ದಾಖಲಾದರೆ, ರಾತ್ರಿ ನಡೆದ ಶ್ರೀಲಂಕಾ ಮತ್ತು ದಕ್ಷಿಣ ಆಫ್ರಿಕಾ(Sri Lanka vs South Africa) ನಡುವಿನ ಪಂದ್ಯದಲ್ಲಿ 127 ಎಸೆತಗಳು ಡಾಟ್​ ಆದವು. 2007ರ ಉದ್ಘಾಟನ ಆವೃತ್ತಿಯಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಪಂದ್ಯದಲ್ಲಿ 123 ಎಸೆತಗಳು ಡಾಟ್​ ಆಗಿದ್ದು ಇದುವರೆಗಿನ ದಾಖಲೆಯಾಗಿತ್ತು. ಈಗ ಈ ದಾಖಲೆ ಪತನಗೊಂಡಿದೆ.

ಪ್ರಯಾಸದ ಗೆಲುವು ಸಾಧಿಸಿದ ದಕ್ಷಿಣ ಆಫ್ರಿಕಾ


ನಸ್ಸೌ ಕೌಂಟಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ(Nassau County International Cricket Stadium) ಸೋಮವಾರ ರಾತ್ರಿ ನಡೆದ ಈ ಪಂದ್ಯದಲ್ಲಿ ಟಾಸ್​ ಗೆದ್ದು ಬ್ಯಾಟಿಂಗ್​ ಆಯ್ದುಕೊಂಡ ಶ್ರೀಲಂಕಾ ತನ್ನ ಆಯ್ಕೆಯನ್ನು ಸಮರ್ಥಿಸಿಕೊಳ್ಳುವಲ್ಲಿ ಸಂಪೂರ್ಣ ವಿಫಲವಾಯಿತು. ಬ್ಯಾಟಿಂಗ್​ ಮರೆತವರಂತೆ ಆಡಿ 19.1 ಓವರ್​ಗಳಲ್ಲಿ ಕೇವಲ 77 ರನ್​ಗೆ ಸರ್ವಪತನ ಕಂಡಿತು. ಇದು ಟಿ20 ವಿಶ್ವಕಪ್​ನಲ್ಲಿ ದಾಖಲಾದ 13ನೇ ಕನಿಷ್ಠ ಮೊತ್ತದ ನಿದರ್ಶನ. ಈ ಸಣ್ಣ ಮೊತ್ತವನ್ನು ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ಕೂಡ ಪರದಾಟ ನಡೆಸಿ 16.2 ಓವರ್​ಗಳಲ್ಲಿ 4 ವಿಕೆಟ್​ ಕಳೆದುಕೊಂಡು 80 ರನ್​ ಬಾರಿಸಿ ಪ್ರಯಾಸದ ಗೆಲುವು ತನ್ನದಾಗಿಸಿಕೊಂಡಿತು.

ಇದನ್ನೂ ಒದಿ T20 World Cup 2024: ದೂರದರ್ಶನದಲ್ಲಿಯೂ ಪ್ರಸಾರಗೊಳ್ಳಲಿದೆ ಟಿ20 ವಿಶ್ವಕಪ್​ ಪಂದ್ಯಾವಳಿ

ಚೇಸಿಂಗ್​ ವೇಳೆ ದಕ್ಷಿಣ ಆಫ್ರಿಕಾ ಕೂಡ ಲಂಕಾ ತಂಡದಂತೇ ಆರಂಭಿಕ ಆಘಾತ ಎದುರಿಸಿತು. 10 ರನ್​ಗೆ ರೀಜಾ ಹೆಂಡ್ರಿಕ್ಸ್(4) ರೂಪದಲ್ಲಿ ಮೊದಲ ವಿಕೆಟ್​ ಕಳೆದುಕೊಂಡಿತು. ಈ ವಿಕೆಟ್​ ಪತನದ ಬಳಿಕ ನಾಯಕ ಐಡೆರ್ನ್​ ಮಾರ್ಕ್ರಮ್​ ಕೂಡ 12ರನ್​ಗೆ ಆಟ ಮುಗಿಸಿದರು. ಟ್ರಿಕ್ಕಿ ಬ್ಯಾಟಿಂಗ್​ ಟ್ರ್ಯಾಕ್​ನಲ್ಲಿ ಹರಿಣ ಪಡೆಯ ಬ್ಯಾಟರ್​ಗಳು ಕೂಡ ಸರಾಗವಾಗಿ ರನ್​ ಗಳಿಸಲು ಕಷ್ಟ ಪಟ್ಟರು. ಹೀಗಾಗಿ ಪವರ್​ ಪ್ಲೇಯಲ್ಲಿ 27 ರನ್​ ಮಾತ್ರ ಒಟ್ಟುಗೂಡಿತು.

ವಿಕೆಟ್​ ಕಳೆದುಕೊಳ್ಳವ ಭಯದಲ್ಲಿ ಕೇವಲ ಒಂದೆರಡು ರನ್​ಗಳ ಓಟಗಳಿಗೆ ಸೀಮಿತರಾಗಿ ಕೊನೆಗೂ ತಂಡವನ್ನು ಗೆಲುವಿನ ದಡ ಸೇರಿದರು. ಚೇಸಿಂಗ್​ ವೇಳೆ ದಾಖಲಾದದ್ದು ಕೇವಲ 3 ಸಿಕ್ಸರ್​ ಮತ್ತು 3 ಬೌಂಡರಿ ಮಾತ್ರ. ಅಷ್ಟರ ಮಟ್ಟಿಗೆ ಆಘಾತಕಾರಿಯಾಗಿತ್ತು ಈ ಪಿಚ್​.  ರಂಭಿಕ ಆಟಗಾರ ಕ್ವಿಂಟನ್​ ಡಿ ಕಾಕ್​ 10 ಓವರ್​ ತನಕ ಬ್ಯಾಟಿಂಗ್​ ನಡೆಸಿ ಗಳಿಸಿದ್ದು 20 ರನ್ ಮಾತ್ರ. ಸ್ಫೋಟಕ ಬ್ಯಾಟಿಂಗ್​ಗೆ ಹೆಸರುವಾಸಿಯಾದ ಯುವ ಬ್ಯಾಟರ್​ ಟ್ರಿಸ್ಟಾನ್ ಸ್ಟಬ್ಸ್ 28 ಎಸೆತ ಎದುರಿಸಿ 13 ರನ್​ ಕಲೆ ಹಾಕಿದರು. ಕನಿಷ್ಠ ಒಂದು ಬೌಂಡರಿ ಕೂಡ ಬಾರಿಸಲು ಸ್ಟಬ್ಸ್​ಗೆ ಸಾಧ್ಯವಾಗಲಿಲ್ಲ. ಅಂತಿಮವಾಗಿ ಹೆನ್ರಿಚ್​ ಕ್ಲಾಸೆನ್​(19*) ಮತ್ತು ಡೇವಿಡ್​ ಮಿಲ್ಲರ್​(6*) ರನ್​ ಗಳಿಸಿ ಅಜೇಯರಾಗಿ ಉಳಿದು ತಂಡದ ಗೆಲುವು ಸಾರಿದರು.

Exit mobile version